ಸತ್ಯಸಂದೇಶ

ಮನುಷ್ಯನು ಈ ಪ್ರಪಂಚದಲ್ಲಿ ಉನ್ನತ, ಗೌರವಯುತ ಸ್ಥಾನಮಾನವನ್ನು ಹೊಂದಿದ್ದಾನೆ. ಅವನ ಎಲ್ಲ ಅಗತ್ಯಗಳನ್ನು ಉತ್ತಮರೀತಿಯಲ್ಲಿ ಪೂರೈಸುವ ವ್ಯವಸ್ಥೆ ಮಾಡಲಾಗಿದೆ.ಭೂಮಿ ಆಕಾಶಗಳಲ್ಲಿರುವ ಅನೇಕ ಶಕ್ತಿಗಳು ನಿರಂತರ ಅವನ ಸೇವೆಯಲ್ಲಿ ತೊಡಗಿವೆ. ಸಮಗ್ರ ವಿಶ್ವವು ಓರ್ವ ಯುಕ್ತಿವಂತ ಮತ್ತು ಅತ್ಯಂತ ಪ್ರಬಲ ಸೃಷ್ಟಿಕರ್ತನ ಉದ್ದೇಶ ಪೂರ್ಣ ಸೃಷ್ಟಿಯಾಗಿದ್ದು, ಇಲ್ಲಿನ ಪ್ರತೀಯೊಂದು ಸೃಷ್ಟಿಯು ಸದಾ ಆ ಪ್ರಭುವಿನ ದಾಸ್ಯಾರಾಧನೆ, ಆಜ್ಞಾಪಾಲನೆಯಲ್ಲಿ ನಿರತವಾಗಿದೆ. ಮಾನವನು ತನ್ನ ನೈಜ ಅನುಗ್ರಹದಾತನನ್ನು ಗುರುತಿಸಿ, ಯಾವ ಸೃಷ್ಟಿಕರ್ತನ ಆಜೆÐಯನ್ನು ತನ್ನ ಜೀವನದ ಅನೈಚ್ಛಿಕ (ಜೈವಿಕ) ವಿಷಯಗಳಲ್ಲಿ ಚಾಚೂ ತಪ್ಪದೆ ಪಾಲಿಸಲು ನಿರ್ಬಂಧಿತನಾಗಿರುವನೋ ಅದೇ ಸೃಷ್ಟಿಕರ್ತನ ಆಜೆÐಯನ್ನು ತನ್ನ ಜೀವನದ ಐಚ್ಛಿಕ ವಿಷಯಗಳಲ್ಲಿಯೂ ಸ್ವಯಂ ಪಾಲಿಸುವುದು ಈ ಲೋಕದಲ್ಲಿ ಅವನಿಗೆ ಸೂಕ್ತವಾದ ಕಾರ್ಯ ವಿಧಾನವೆನ್ನಬಹುದು. ಭೂಮಿಯಲ್ಲಿ ಆ ಸೃಷ್ಟಿಕರ್ತನ ಪ್ರತಿನಿಧಿಯಾಗಿರುವ ಬೇಡಿಕೆಯೂ ಇದೇ ಆಗಿದೆ. ಈ ಕಾರ್ಯ ನೀತಿಯನ್ನೇ ‘ಇಸ್ಲಾಮ್’ ಎಂದು ಹೆಸರಿಸಲಾಗಿದೆ.

ವಿಶ್ವದ ಪ್ರಥಮ ಮಾನವ ಆದಮ(ಅ)ರು ಇದೇ ಕಾರ್ಯ ನೀತಿಯನ್ನು ಅನುಸರಿಸಿದ್ದರು ಹಾಗೂ ಇತಿಹಾಸದುದ್ದಕ್ಕೂ ಬಂದ ಎಲ್ಲ ಪ್ರವಾದಿಗಳು ಮಾನವರಿಗೆ ಇದೇ ಮಾರ್ಗ ಇಸ್ಲಾಮಿನೆಡೆಗೆ ಕರೆ ನೀಡುತ್ತಾ ಬಂದಿದ್ದಾರೆ. ಇದರ ಪರಿಪೂರ್ಣ, ಅಂತಿಮ ಮತ್ತು ಆಧಿಕೃತ ರೂಪವು ಕುರ್‍ಆನ್ ಆಗಿದ್ದು ಅಂತಿಮ ಪ್ರವಾದಿ ಹಝ್‍ರತ್ ಮುಹಮ್ಮದ್(ಸ)ರ ಮೇಲೆ ಅವತೀರ್ಣಗೊಂಡಿತು.

ಮನುಷ್ಯನು ತನ್ನ ನೈಜ ಪ್ರಭುವಿನ ವಿರುದ್ಧ ಬಂಡಾಯ ಹೂಡಿ ತನಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ಪಡಿಸಿಕೊಂಡಿರುವುದೇ ಇಂದು ವಿಶ್ವದ ಎಲ್ಲೆಡೆ ವ್ಯಾಪಿಸಿರುವ ಕ್ಷೋಭೆ, ಅಶಾಂತಿ.ಅನ್ಯಾಯ ಮತ್ತು ಗೊಂದಲಗಳಿಗೆ ಮೂಲ ಕಾರಣವಾಗಿದೆ. ಪುನಃ ತನ್ನ ಪ್ರಭುವಿನ ಕಡೆಗೆ ಮರಳುವುದೇ ಇಹ ಪರಲೋಕಗಳೆರಡರಲ್ಲಿಯೂ ಮಾನವನಿಗೆ ಯಶಸ್ಸು ಮತ್ತು ಮುಕ್ತಿ ಗಳಿಸಲಿಕ್ಕಿರುವ ಏಕೈಕ ಮಾರ್ಗವಾಗಿದೆ. ಈ ಜೀವನವು ಒಂದು ಪರೀಕ್ಷೆ ಮತ್ತು ಪರಲೋಕದ ಶಾಶ್ವತ ಯಶಸ್ಸೇ ಜೀವನದ ನೈಜ ಗುರಿಯೆಂದು ಭಾವಿಸಿ, ಪ್ರವಾದಿ ಮಾರ್ಗದರ್ಶನವನ್ನು ಸ್ವೀಕರಿಸಿ ಅತ್ಯಂತ ಕರುಣಾಮಯಿಯಾದ ಪ್ರಭುವಿಗೆ ವಿಧೇಯನಾಗಿ ಬಾಳುವುದೇ ನೈಜ ಸನ್ಮಾರ್ಗವಾಗಿದೆ.

ಜಾತಿ ಮತ, ಭಾಷೆ, ಕುಲ ಮತ್ತು ದೇಶಗಳೆಂಬ ಭೇದ ಭಾವ ವಿಲ್ಲದೆ ಇಸ್ಲಾಮಿನ ಸಿದ್ಧಾಂತ, ಆಚಾರ ವಿಚಾರ ಮತ್ತು ಜೀವನ ವ್ಯವಸ್ಥೆಯನ್ನು ಅದರ ಮೂಲ ಆಧಾರಗಳಾದ ಕುರ್‍ಆನ್ ಮತ್ತು ಪ್ರವಾದಿ ವಚನಗಳ ಮೂಲಕ ಸವಿಸ್ತಾರವಾಗಿ ತಿಳಿಯುವುದು ಮತ್ತು ಅನುಸರಿಸುವುದು ಇಡೀ ಮಾನವಕುಲದ ಅಗತ್ಯವಾಗಿದೆ.

Add Comment