ಯೇಸು ಕುರ್‌ಆನ್‌ನಲ್ಲಿ

ಪ್ರವಾದಿ ಈಸಾರ(ಅಲೈಹಿಸ್ಸಲಾಮ್) ಜನನ
ಹಜ್ರತ್ ಈಸಾರ ಜನನದ ಹಿನ್ನೆಲೆಯ ಕುರಿತು ಪವಿತ್ರ ಕುರ್‍ಆನ್ ವಿವರವಾಗಿ ಈ ರೀತಿ ಪರಾಮರ್ಶಿಸಿದೆ.
“ಓ ಪೈಗಂಬರರೇ, ಈ ಗ್ರಂಥದಲ್ಲಿ ಮರ್ಯಮರ ವಿಷಯ ಪ್ರಸ್ತಾಪಿಸಿರಿ. ಅವರು ತನ್ನವರಿಂದ ಸರಿದು ಪೂರ್ವದಿಕ್ಕಿನಲ್ಲಿ ಏಕಾಂತ ವಾಸದಲ್ಲಿದ್ದಾಗ ಹಾಗೂ ತೆರೆಯನ್ನಿಳಿಸಿ ಅವರಿಂದ ಮರೆಯಾಗಿ ಕುಳಿತಿದ್ದ ಸ್ಥಿತಿಯಲ್ಲಿ ನಾವು ಅವರ ಬಳಿಗೆ ನಮ್ಮ ದೇವಚರನನ್ನು ಕಳುಹಿಸಿದೆವು. ಅವನು ಅವರ ಮುಂದೆ ಓರ್ವ ಪೂರ್ಣ ಮನುಷ್ಯ ರೂಪದಲ್ಲಿ ಪ್ರತ್ಯಕ್ಷನಾದನು. ಮರ್ಯಮ್- ಥಟ್ಟನೆ, ‘ನೀನೊಬ್ಬ ದೇವಭಯವುಳ್ಳವನಾಗಿದ್ದರೆ ನಾನು ನಿನ್ನಿಂದ ದಯಾಮಯನಾದ ದೇವನ ಅಭಯ ಯಾಚಿಸುತ್ತೇನೆ’ ಎಂದರು. ಆಗ ಅವನು, ‘ನಾನು ನಿಮ್ಮ ಪ್ರಭುವಿನ ದೂತನಾಗಿರುತ್ತೇನೆ ಮತ್ತು ನಿಮಗೆ ಓರ್ವ ಪವಿತ್ರ ಬಾಲಕನನ್ನು ಕೊಡಲಿಕ್ಕಾಗಿ ಬಂದಿರುತ್ತೇನೆ’ ಎಂದನು. ಆಗ ಮರ್ಯಮ್, ‘ನನ್ನನ್ನು ಪುರುಷನಾರೂ ಮುಟ್ಟದೆ ಇರುವಾಗ ನನ್ನಲ್ಲಿ ಬಾಲಕನಾಗುವುದು ಹೇಗೆ? ಮತ್ತು ನಾನೇನೂ ದುರಾಚಾರಿ ಸ್ತ್ರೀಯಲ್ಲ’ ಎಂದರು. ಆಗ ದೇವಚರರು, “ಹಾಗೆಯೇ ಆಗುವುದು ಇದು ನನಗೆ ಬಹಳ ಸುಲಭವಾದುದೆಂದೂ ಆ ಬಾಲಕನನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮತ್ತು ನಮ್ಮ ಕಡೆಯಿಂದ ಒಂದು ಕರುಣೆಯನ್ನಾಗಿ ಮಾಡಲಿಕ್ಕೋಸ್ಕರ ನಾವು ಹಾಗೆ ಮಾಡುವೆವೆಂದೂ ನಿನ್ನ ಪ್ರಭು ಹೇಳುತ್ತಾನೆ. ಈ ಕಾರ್ಯ ಆಗಿಯೇ ತೀರಬೇಕಾಗಿದೆ” ಎಂದನು. ಮರ್ಯಮರಿಗೆ ಆ ಮಗುವಿನ ಗರ್ಭ ಉಂಟಾಯಿತು ಮತ್ತು ಅವರು ಆ ಗರ್ಭ ಸಹಿತ ದೂರದ ಒಂದು ಸ್ಥಳಕ್ಕೆ ಹೋದರು. ತರುವಾಯ ಪ್ರಸವ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು, “ಅಕಟ ನಾನು ಇದಕ್ಕಿಂತ ಮುಂಚೆ ಸತ್ತು ಹೋಗಿದ್ದರೆ! ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ (ಚೆನ್ನಾಗಿತ್ತು)’ ಎನ್ನತೊಡಗಿದರು. ದೇವಚರನು ಕಾಲಬಳಿಯಿಂದ ಅವರನ್ನು ಕೂಗಿ ಇಂತೆಂದನು- ‘ಮರುಗಬೇಡಿರಿ ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿ ಬಿಟ್ಟಿದ್ದಾನೆ. ಮತ್ತು ನೀವು ಆ ಮರದ ಕಾಂಡವನ್ನು ಹಿಡಿದು ಅಲುಗಾಡಿಸಿರಿ. ನಿಮ್ಮ ಮೇಲೆ ಹಸನಾದ ಖರ್ಜೂರದ ಹಣ್ಣುಗಳು ಉದುರಿ ಬೀಳುವುವು. ಈ ರೀತಿಯಲ್ಲಿ ನೀವು ತಿಂದು, ಕುಡಿದು ಕಣ್ಮನಗಳನ್ನು ತಣಿಸಿರಿ. ನೀವು ಮಾನವರಾರನ್ನಾದರೂ ಕಂಡರೆ- ನಾನು ಕರುಣಾನಿಧಿ(ಅಲ್ಲಾಹ್)ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರೆ ನೆಂದು’ ಹೇಳಿಬಿಡಿರಿ. ಅನಂತರ ಅವರು ಆ ಮಗುವನ್ನೆತ್ತಿಕೊಂಡು ತನ್ನ ಜನಾಂಗದ ಬಳಿಗೆ ಹೋದರು. ಜನರು, ‘ಓ ಮರ್ಯಮ್! ನೀನು ಘೋರ ಪಾತಕವನ್ನೆಸಗಿ ಬಿಟ್ಟೆ. ಓ ಹಾರೂನನ ಸಹೋದರಿ! ನಿನ್ನ ತಂದೆ ಕೆಟ್ಟವನಾಗಿರಲಿಲ್ಲ. ನಿನ್ನ ತಾಯಿಯೂ ದುಶ್ಶೀಲೆಯಾಗಿರಲಿಲ್ಲ” ಎನ್ನತೊಡಗಿದರು. ಆಗ ಮರ್ಯಮ್, ಮಗುವಿನ ಕಡೆಗೆ ಇಷಾರೆ ಮಾಡಿದರು. ಆಗ ಜನರು, ‘ಇದು ತೊಟ್ಟಿಲಲ್ಲಿ ಬಿದ್ದಿರುವಂತಹ ಒಂದು ಶಿಶು, ಇದರೊಡನೆ ನಾವೇನು ಮಾತನಾಡಬಹುದು?’ ಎಂದರು. ಮಗು (ಹೀಗೆ) ಮಾತನಾಡತೊಡಗಿತು: ‘ನಾನು ಅಲ್ಲಾಹನ ದಾಸ ಅವನು ನನಗೆ ಗ್ರಂಥ ನೀಡಿದನು. ಪ್ರವಾದಿಯನ್ನಾಗಿ ಮಾಡಿದನು- ಮತ್ತು ನನ್ನನ್ನು ನಾನೆಲ್ಲಿದ್ದರೂ ಅನುಗ್ರಹೀತನಾಗಿರುವಂತೆ ಮಾಡಿದನು ಮತ್ತು ನನ್ನ ಬಾಳಿನುದ್ದಕ್ಕೂ ನಮಾಝ್ ಮತ್ತು ಝಕಾತ್ ಪಾಲಿಸುತ್ತಿರಲು ಆಜ್ಞೆಯಿತ್ತನು. ನನ್ನನ್ನು ನನ್ನ ಮಾತೆಯ ಋಣ ಸಂದಾಯ ಮಾಡುವವನಾಗಿಸಿದನು ಮತ್ತು ನನ್ನನ್ನು ಅಹಂಕಾರಿಯನ್ನಾಗಿಯೂ ದುಷ್ಟನನ್ನಾಗಿಯೂ ಮಾಡಿರುವುದಿಲ್ಲ. ನಾನು ಜನಿಸಿದಾಗಲೂ ಸಾಯುವಾಗಲೂ ಜೀವಂತ ಗೊಳಿಸಿ ಎಬ್ಬಿಸಲ್ಪಡುವಾಗಲೂ ನನ್ನ ಮೇಲೆ ಶಾಂತಿ ಇದೆ.’ ಇವರೇ ಮರ್ಯಮರ ಪುತ್ರ ಈಸಾ. ಇವರ ಬಗ್ಗೆ ಜನರು ಸಂಶಯ ಪಡುತ್ತಿರುವುದರ ಸತ್ಯಾಂಶವಿದು. ಯಾರನ್ನಾದರೂ ಮಗನಾಗಿ ಮಾಡಿಕೊಳ್ಳುವುದು ಅಲ್ಲಾಹನಿಗೆ ಭೂಷಣವಲ್ಲ. ಅವನು ಪರಿಶುದ್ಧನು. ಅವನು, ಏನಾದರೂ ಆಗಬೇಕೆಂದು ತೀರ್ಮಾನಿಸಿದರೆ ‘ಆಗು’ ಎಂದು ಬಿಡುತ್ತಾನೆ ಮತ್ತು ಅದು ಆಗಿಬಿಡುತ್ತದೆ.” (19:16-35)

ಹ.ಮರ್ಯಮ್(ಅ) ಬೈತುಲ್ ಮಕ್ದಿಸ್‍ನ ಒಂದು ಕೋಣೆಯಲ್ಲಿ ತಪಶ್ಚರ್ಯೆಗೆ ಕುಳಿತಿದ್ದರು. ಆ ಕೋಣೆಯು ಬೈತುಲ್ ಮಕ್ದಿಸ್‍ನ ಪೂರ್ವ ದಿಕ್ಕಿನಲ್ಲಿತ್ತು. ಸಾಮಾನ್ಯವಾಗಿ ತಪಶ್ಚರ್ಯೆಗೆ ಕುಳಿತವರು ಮಾಡುವಂತೆ ಹ.ಮರ್ಯಮ್‍ರು(ಅ) ಒಂದು ಪರದೆಯನ್ನು ಇಳಿಬಿಟ್ಟು ತಮ್ಮನ್ನು ವೀಕ್ಷಕರ ದೃಷ್ಟಿಯಿಂದ ಮರೆಸಿಕೊಂಡಿದ್ದರು. ಅಲ್ಲಾಹನ ಆಜ್ಞೆಯಂತೆ ಹ.ಮರ್ಯಮ್‍ರು(ಅ) ಗರ್ಭವತಿಯಾದಾಗ ದೂರದ ಬೆತ್ಲೆಹಮ್‍ಗೆ ಹೋದರು. ಹ.ಮರ್ಯಮ್‍ರು(ಅ) ಬೈತುಲ್ ಮಕ್ದಿಸ್‍ನಲ್ಲಿ ತಮ್ಮ ತಪಶ್ಚರ್ಯೆಯಿಂದ ಹೊರಬಂದು ಬೆತ್ಲೆಹಮ್‍ಗೆ ಹೋದದ್ದು ಒಂದು ಸಹಜ ಕ್ರಿಯೆ ಯಾಗಿತ್ತು. ಅವರು ಇಸ್ರಾಈಲ್ ಜನಾಂಗದ ಅತ್ಯಂತ ಪಾವನವಾದ ಹಾರೂನ್ ಮನೆತನದ ಕುವರಿಯಾಗಿದ್ದರು. ಮಾತ್ರವಲ್ಲ ಅಲ್ಲಾಹನ ಪವಿತ್ರ ಭವನವಾದ ಬೈತುಲ್ ಮಕ್ದಿಸ್‍ನಲ್ಲಿ ಅವನಿಗಾಗಿ ತಪಶ್ಚರ್ಯೆಯಲ್ಲಿ ಕುಳಿತಿದ್ದರು. ಅವರು ತಮ್ಮ ಜೀವಮಾನವನ್ನು ದೇವಭಕ್ತಿ ಮತ್ತು ಧರ್ಮಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ಅವರು ಒಮ್ಮೆಲೇ ಗರ್ಭವತಿಯಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ ಅವರು ತಮ್ಮ ತಪಶ್ಚರ್ಯೆಯ ಸ್ಥಾನದಲ್ಲೇ ಕುಳಿತಿರುತ್ತಿದ್ದರೆ ಮತ್ತು ಜನರಿಗೆ ಅವರ ಗರ್ಭಧಾರಣೆಯ ಸುದ್ದಿ ಮುಟ್ಟುತ್ತಿದ್ದರೆ ಅವರ ಪರಿವಾರದವರು ಮಾತ್ರವಲ್ಲ ಜನಾಂಗದ ಇತರ ಜನರೂ ಅವರ ಜೀವನವನ್ನು ಅಸಹನೀಯ ಗೊಳಿಸುತ್ತಿದ್ದರು. ಆದ್ದರಿಂದ ಈ ಕಠಿಣ ಪರೀಕ್ಷೆಗೆ ಒಳಗಾದ ನಂತರ ಹ. ಮರ್ಯಮ್(ಅ) ಸದ್ದಿಲ್ಲದೆ ತಮ್ಮ ತಪಶ್ಚರ್ಯೆಯ ಕೋಣೆಯನ್ನು ಬಿಟ್ಟು ಹೊರಟು ಹೋಗುತ್ತಾರೆ. ತನ್ಮೂಲಕ ಅಲ್ಲಾಹನ ಇಚ್ಛೆಯು ಈಡೇರುವ ತನಕ ಜನಾಂಗದ ಛೀಮಾರಿ ಮತ್ತು ಸಾರ್ವಜನಿಕ ಅವಮಾನದಿಂದ ದೂರ ಉಳಿಯುತ್ತಾರೆ. ಹ. ಮರ್ಯಮ್(ಅ) ತನ್ನ ಗರ್ಭಧಾರಣೆಯಿಂದಾಗಿ ಬಹಳ ಚಿಂತಾಕ್ರಾಂತರಾಗಿದ್ದರು. ಹೆರಿಗೆಯ ನೋವು ಆರಂಭವಾದಾಗ ಅವರ ಬಾಯಿಯಿಂದ ಹೊರಟ, “ಅಕಟ! ನಾನು ಇದಕ್ಕಿಂತ ಮುಂಚೆಯೇ ಸತ್ತು ಹೋಗಿ ಹೇಳ ಹೆಸರಿಲ್ಲದಂತೆ ಆಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂಬ ಪದಗಳು ಅವರ ಚಿಂತೆಯ ತೀವ್ರತೆಯನ್ನು ಪ್ರಕಟಿಸುತ್ತವೆ. ಈ ಪದಗಳು ಅವರ ಬಾಯಿಯಿಂದ ಪ್ರಸವ ವೇದನೆಯಿಂದಾಗಿ ಹೊರಟದ್ದಲ್ಲ. ಅಲ್ಲಾಹನು ಅವರನ್ನು ಗುರಿಪಡಿಸಿ ದ್ದಂತಹ ಕಠಿಣ ಪರೀಕ್ಷೆಯಿಂದ ಯಶಸ್ವಿಯಾಗಿ ಪಾರಾಗುವುದು ಹೇಗೆಂಬುದೇ ಅವರ ಚಿಂತೆಗೆ ಕಾರಣವಾಗಿತ್ತು. ಗರ್ಭವನ್ನಂತೂ ಈ ತನಕ ಹೇಗೂ ಅಡಗಿಸಿದ್ದಾಯಿತು. ಈಗ ಈ ಮಗುವನ್ನು ಎಲ್ಲಿಗೆ ಒಯ್ಯಲಿ ಎಂಬುದು ಅವರ ಚಿಂತೆಯಾಗಿತ್ತು. ಅಂತಹ ಸಂದರ್ಭದಲ್ಲಿ ಅಲ್ಲಾಹನು ಅವರಿಗೆ ಸಾಂತ್ವನ ನೀಡುತ್ತಾನೆ. ಆ ಮಗುವಿನ ಕುರಿತು ನಿನಗೇನೂ ಹೇಳುವ ಪ್ರಮೇಯ ಬರಲಾರದು. ಅದರ ಹುಟ್ಟಿನ  ಬಗ್ಗೆ  ಆಕ್ಷೇಪಿಸುವವರಿಗೆ ಉತ್ತರಿಸುವ ಹೊಣೆಯು ನನ್ನ ಮೇಲಿರುವುದು ಎಂದು ಅಲ್ಲಾಹನು ಅವರಿಗೆ ಭರವಸೆ ನೀಡಿದನು. ಇಸ್ರಾಈಲ್ ಜನಾಂಗದಲ್ಲಿ ಮೌನವ್ರತ ಆಚರಿಸುವಂತಹ ಪದ್ಧತಿಯಿತ್ತು. ಆ ಪ್ರಕಾರ ತಾನು ಪರಮ ದಯಾಮಯನಾದ ಅಲ್ಲಾಹನಿಗಾಗಿ ಮೌನವ್ರತ ಆಚರಿಸಿರುವೆನೆಂದು ಹೇಳಿಬಿಡುವಂತೆ ಅಲ್ಲಾಹನು ಅವರಿಗೆ ಆದೇಶಿಸಿದನು.
ಪ್ರವಾದಿ ಈಸಾರ(ಅ) ಜನನವು ಒಂದು ಅದ್ಭುತ ಪವಾಡವಾಗಿದೆಯೆಂಬುದು ಖಚಿತ. ಆದರೆ ಆ ರೀತಿಯ ಜನನದಿಂದಾಗಿ ಅವರು ದೇವಪುತ್ರನೆನಿಸುತ್ತಾರೆಂಬುದು  ಮಾತ್ರ ಒಂದು ಭ್ರಾಮಕ ಮತ್ತು ಅತಿಶಯೋಕ್ತ ನಂಬಿಕೆಯಾಗಿದೆ. ಸೃಷ್ಟಿಯು ಎಂದೂ ಅಲ್ಲಾಹನ ಪುತ್ರನಾಗುವುದು ಸಾಧ್ಯವಿಲ್ಲ. ಪ್ರಥಮ ಮಾನವ ಹ. ಆದಮ್(ಅ) ಅವರನ್ನು ಅಲ್ಲಾಹನು ತಂದೆ-ತಾಯಿಗಳಿಬ್ಬರೂ ಇಲ್ಲದೆಯೇ ನೇರವಾಗಿ ಮಣ್ಣಿನಿಂದ ಸೃಷ್ಟಿಸಿದನು. ಅದಕ್ಕೆ ತನ್ನ ಆತ್ಮವನ್ನು ಊದಿದಾಗ ಆದಮ್(ಅ) ಅಸ್ತಿತ್ವಕ್ಕೆ ಬಂದರು. ಆ ರೀತಿಯ ಪವಾಡಸದೃಶ ಸೃಷ್ಟಿಯಿಂದಾಗಿ ಹ.ಆದಮ್(ಅ) ಅವರನ್ನು ಯಾರೂ ಅಲ್ಲಾಹನ ಪುತ್ರನೆನ್ನುವುದಿಲ್ಲ. ನೈಸರ್ಗಿಕ ನಿಯಮಗಳಿಗೆ ಅತೀತವಾಗಿ ಸೃಷ್ಟಿಯಾದ ಕಾರಣದಿಂದ ಒಬ್ಬನು ದೇವ ಪುತ್ರನಾಗುವುದಾದರೆ ತಂದೆಯಿಲ್ಲದೆ ಕೇವಲ ತಾಯಿಯಿಂದ ಜನಿಸಿದ ಈಸಾ(ಅ) ಅವರಿಗಿಂತ, ತಂದೆ-ತಾಯಿಗಳಿಬ್ಬರೂ ಇಲ್ಲದೆಯೇ  ಜನಿಸಿದ ಹ.ಆದಮ್(ಅ) ದೇವಪುತ್ರನೆನಿಸಿಕೊಳ್ಳಲು ಹೆಚ್ಚು ಅರ್ಹರಾಗಿದ್ದಾರೆ!
ಅದೇ ರೀತಿ ಹ. ಯಹ್ಯಾರ(ಅ) ಜನನವೂ ಇನ್ನೊಂದು ಪವಾಡದ ಮೂಲಕವೇ ಆಗಿದೆ. ಹಣ್ಣು ಮುದುಕನಾದ ತಂದೆ ಮತ್ತು ಬಂಜೆಯಾದ ತಾಯಿಯ ಮೂಲಕ ಹ.ಯಹ್ಯಾರ(ಅ) ಜನನವು ಹ.ಈಸಾರ(ಅ) ಜನನಕ್ಕಿಂತ ಕೇವಲ ಆರು  ತಿಂಗಳ ಹಿಂದೆ ನಡೆದಿತ್ತು. ಅವರನ್ನು ಯಾರೂ ದೇವಪುತ್ರನೆನ್ನುವುದಿಲ್ಲ. ಕ್ರೈಸ್ತ ವರದಿಗಳ ಪ್ರಕಾರವೇ, ಹ. ಯಹ್ಯಾ(ಅ) ಮತ್ತು ಹ. ಈಸಾ(ಅ) ಅವರಿಬ್ಬರೂ ವಿಭಿನ್ನ ರೀತಿಯಲ್ಲಿ ಪವಾಡದಿಂದ ಜನಿಸಿದ್ದರು. ಲೂಕನ ಬೈಬಲ್‍ನಲ್ಲಿ ಕುರ್‍ಆನಿನಂತೆಯೇ ಈ ಎರಡೂ ಪವಾಡಗಳನ್ನು ಒಂದೇ ವಿವರಣಾ ಪರಂಪರೆಯಲ್ಲಿ ವಿವರಿಸಲಾಗಿದೆ. ಆದರೆ ಒಂದು ಪವಾಡದಿಂದ ಜನಿಸಿದವರನ್ನು ಅಲ್ಲಾಹನ ದಾಸನೆಂದೂ ಇನ್ನೊಂದು ಪವಾಡದ ಮೂಲಕ ಜನಿಸಿದವರನ್ನು ಅಲ್ಲಾಹನ ಪುತ್ರನೆಂದೂ ಸಾರುವುದು ವಿರೋಧಾಭಾಸವಲ್ಲವೆ?

ಈಸಾರ(ಅ) ಪವಾಡಗಳು
ಪ್ರವಾದಿ ಈಸಾ(ಅ) ಅವರಿಂದ ಪ್ರಕಟವಾದ ಪವಾಡಗಳ ಕುರಿತು ಪವಿತ್ರ ಕುರ್‍ಆನಿನಲ್ಲಿ ಹೀಗೆ ಹೇಳಲಾಗಿದೆ:
“ತೂಟ್ಟಿಲಲ್ಲಿಯೂ ಅತಿ ವೃದ್ಧಾಪ್ಯಕ್ಕೆ ತಲುಪಿದಾಗಲೂ ಜನರೊಡನೆ ಮಾತನಾಡುವನು ಮತ್ತು ಅವನೊಬ್ಬ ಸಜ್ಜನನಾಗಿರುವನು. ಇದನ್ನು ಕೇಳಿ ಮರ್ಯಮ್ ಹೇಳಿದರು, ‘ಓ ನನ್ನ ಪ್ರಭೂ, ನನ್ನಲ್ಲಿ ಮಗುವಾಗುವುದೆಲ್ಲಿಂದ? ನನ್ನನ್ನಂತು ಪುರುಷನಾರೂ ಸ್ಪರ್ಶಿಸಿಲ್ಲ.’ ಉತ್ತರ ಸಿಕ್ಕಿತು- ‘ಹಾಗೆಯೇ ಸಂಭವಿಸುವುದು.’ ಅಲ್ಲಾಹ್ ತಾನಿಚ್ಛಿಸಿದುದನ್ನು ಸೃಷ್ಟಿಸುತ್ತಾನೆ. ಅವನು ಯಾವುದಾದರೊಂದು ಕಾರ್ಯವನ್ನು ಮಾಡಲು ನಿರ್ಧರಿಸಿದಾಗ, ‘ಆಗು’ ಎನ್ನುತ್ತಾನೆ ಮತ್ತು ಅದು ಆಗಿ ಬಿಡುತ್ತದೆ. (ದೇವಚರರು ತಮ್ಮ ಮಾತು ಮುಂದುವರಿಸುತ್ತ ಹೇಳಿದರು)- ‘ಅಲ್ಲಾಹ್  ಅವನಿಗೆ ಗ್ರಂಥ ಮತ್ತು ಯುಕ್ತಿಯ ಶಿಕ್ಷಣ ನೀಡುವನು. ತೌರಾತ್ ಮತ್ತು ಇಂಜೀಲಿನ ವಿದ್ಯೆ ಕಲಿಸುವನು. ಮತ್ತು ಅವನನ್ನು ಬನೀಇಸ್ರಾಈಲರ ಕಡೆಗೆ ಸಂದೇಶವಾಹಕ ನನ್ನಾಗಿ ನೇಮಕ ಮಾಡುವನು.’ (ಅವನು ಸಂದೇಶವಾಹಕನ ನೆಲೆಯಲ್ಲಿ ಬನೀಇಸ್ರಾಈಲರ ಬಳಿಗೆ ಬಂದಾಗ ಹೀಗೆ ಹೇಳಿದನು) ನಾನು ನಿಮ್ಮ ಪ್ರಭುವಿನ ವತಿಯಿಂದ ನಿಮ್ಮ ಬಳಿಗೆ ಕುರುಹುಗಳೊಂದಿಗೆ ಬಂದಿರುತ್ತೇನೆ. ನಾನು ನಿಮ್ಮ ಮುಂದೆ ಪಕ್ಷಿ ರೂಪದ ಆಕೃತಿ ಮಾಡುತ್ತೇನೆ ಮತ್ತು ಅದಕ್ಕೆ ಉಸಿರೂದಿ ಬಿಡುತ್ತೇನೆ. ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗುತ್ತದೆ. ನಾನು ಅಲ್ಲಾಹನ ಅಪ್ಪಣೆಯಿಂದ ಹುಟ್ಟು ಕುರುಡರನ್ನೂ ಕುಷ್ಠ ರೋಗಿಗಳನ್ನೂ ಗುಣಪಡಿಸುತ್ತೇನೆ ಮತ್ತು ಅವನ ಅಪ್ಪಣೆ ಯಿಂದ ಸತ್ತವರನ್ನು ಜೀವಂತ ಗೊಳಿಸುತ್ತೇನೆ. ನೀವು ಏನು ಉಣ್ಣುತ್ತೀರೆಂಬುದನ್ನೂ ನಿಮ್ಮ ಮನೆಗಳಲ್ಲಿ ಏನೇನನ್ನು ದಾಸ್ತಾನು ಮಾಡಿಡುತ್ತೀರೆಂಬುದನ್ನೂ ಹೇಳುತ್ತೇನೆ. ನೀವು ವಿಶ್ವಾಸವಿರಿಸುವವರಾದರೆ ನಿಮಗೆ ಇದರಲ್ಲಿ ಸಾಕಷ್ಟು ನಿದರ್ಶನವಿದೆ.” (3:36-49)
ಇನ್ನೊಂದೆಡೆ ಹೀಗೆ ಹೇಳಲಾಗಿದೆ:
“ಅಲ್ಲಾಹನು ಹೀಗೆ ಹೇಳಲಿರುವ ಆ ಸಂದರ್ಭವನ್ನು ಊಹಿಸಿರಿ- ಓ ಮರ್ಯಮರ ಪುತ್ರ ಈಸಾ, ನಾನು ನಿನಗೂ ನಿನ್ನ ಮಾತೆಗೂ ದಯಪಾಲಿಸಿದ್ದ ‘ಭವ್ಯ ಕೊಡುಗೆಗಳನ್ನು’ ಜ್ಞಾಪಿಸು. ನಾನು ಪವಿತ್ರಾತ್ಮನ ಮೂಲಕ ನಿನಗೆ ಸಹಾಯ ಮಾಡಿದೆ. ನೀನು ತೊಟ್ಟಿಲಲ್ಲಿಯೂ ವೃದ್ಧಾಪ್ಯದಲ್ಲಿಯೂ ಮಾತಾಡುತ್ತಿದ್ದೆ. ನಾನು ನಿನಗೆ ಗ್ರಂಥ ಮತ್ತು ಯುಕ್ತಿ, ತೌರಾತ್ ಮತ್ತು ಇಂಜೀಲ್‍ಗಳನ್ನು ಕೊಟ್ಟಿದ್ದೆ. ನೀನು ನನ್ನ ಅಪ್ಪಣೆಯಿಂದ ಮಣ್ಣಿನಿಂದ ಪಕ್ಷಿಯ ಪ್ರತಿರೂಪವನ್ನು ರಚಿಸುತ್ತಿದ್ದೆ ಮತ್ತು ಅದಕ್ಕೆ ಊದುತ್ತಿದ್ದೆ. ಅದು ನನ್ನ ಅಪ್ಪಣೆಯಿಂದ ಪಕ್ಷಿಯಾಗಿ ಬಿಡುತ್ತಿತ್ತು. ನೀನು ಹುಟ್ಟು ಕುರುಡರನ್ನೂ ಕುಷ್ಠರೋಗಿಗಳನ್ನೂ ನನ್ನ ಅಪ್ಪಣೆಯಿಂದ ವಾಸಿ ಮಾಡುತ್ತಿದ್ದೆ. ಮೃತ ದೇಹಗಳನ್ನು ನನ್ನ ಅಪ್ಪಣೆಯಿಂದ ಎಬ್ಬಿಸುತ್ತಿದ್ದೆ. ಮುಂದೆ ನೀನು ಬನೀಇಸ್ರಾಈಲರ ಬಳಿಗೆ ಸುವ್ಯಕ್ತ ದೃಷ್ಟಾಂತಗಳನ್ನು ಕೊಂಡು ಹೋದಾಗ ಅವರಲ್ಲಿದ್ದ ಸತ್ಯನಿಷೇಧಿಗಳು ಈ ದೃಷ್ಟಾಂತಗಳು ಮಾಟಗಾರಿಕೆಯ ವಿನಾ ಬೇರೇನೂ ಅಲ್ಲವೆಂದರು. ಆಗ ನಾನೇ ನಿನ್ನನ್ನು ಅವರಿಂದ ರಕ್ಷಿಸಿದೆನು.” (5:110)

ಹವಾರೀಗಳ ಸತ್ಯವಿಶ್ವಾಸ ಸ್ವೀಕಾರ
ಹ. ಈಸಾ(ಅ) ಅವರ ಮೇಲೆ ವಿಶ್ವಾಸವಿರಿಸಿ ಅವರ ಅನುಯಾಯಿಗಳಾದವರನ್ನು ಪವಿತ್ರ ಕುರ್‍ಆನಿನಲ್ಲಿ ‘ಹವಾರೀಗಳು’ ಎನ್ನಲಾಗಿದೆ. ‘ಹವಾರೀ’ ಎಂದರೆ ಸಹಾಯಕ. ಇದೇ ಅರ್ಥವನ್ನು ಸೂಚಿಸುವ ಇನ್ನೊಂದು ಪದ ಕುರ್‍ಆನಿನಲ್ಲಿ ಬಳಕೆಯಾಗಿದೆ. ಅದುವೇ  ‘ಅನ್ಸಾರ್.’ ಸಾಮಾನ್ಯವಾಗಿ ಬೈಬಲ್‍ನಲ್ಲಿ ಪ್ರವಾದಿ ಈಸಾರ(ಅ) ಅನುಯಾಯಿಗಳಿಗೆ ‘ಶಿಷ್ಯರು’ ಎಂಬ ಪದವನ್ನು ಬಳಸಲಾಗಿದೆ. ಕೆಲವು ಕಡೆಗಳಲ್ಲಿ ಅವರನ್ನು ದೂತರು  ಎಂದು ಕರೆಯಲಾಗಿದೆ. ಪ್ರವಾದಿ ಈಸಾರು(ಅ) ತಮ್ಮ ಅನುಯಾಯಿಗಳನ್ನು ತಮ್ಮ ಪ್ರತಿನಿಧಿಯೆಂಬ ನೆಲೆಯಲ್ಲಿ ಧರ್ಮ ಪ್ರಚಾರದ ಕಾರ್ಯಕ್ಕಾಗಿ ಕಳುಹಿಸುತ್ತಿದ್ದರು. ಇದೇ ಅರ್ಥದಲ್ಲಿ ಅವರನ್ನು ದೂತರು ಎಂದು ಹೇಳಲಾಗಿದೆಯೇ ಹೊರತು ಅವರು ಅಲ್ಲಾಹನ ಸಂದೇಶವಾಹಕರಾಗಿದ್ದರು ಎಂಬರ್ಥದಲ್ಲಿ ಅಲ್ಲ.
ಹವಾರೀಗಳ ಸತ್ಯವಿಶ್ವಾಸ ಸ್ವೀಕಾರದ ಕುರಿತು ಪವಿತ್ರ ಕುರ್‍ಆನ್ ಈ ರೀತಿ ಹೇಳುತ್ತದೆ:
“ನನ್ನ ಮೇಲೂ ನನ್ನ ಸಂದೇಶವಾಹಕರ ಮೇಲೂ ವಿಶ್ವಾಸವಿಡಿರೆಂದು ಹವಾರಿಗಳಿಗೆ ನಾನು ಸೂಚನೆ ಕೊಟ್ಟಾಗ, ನಾವು ವಿಶ್ವಾಸವಿಟ್ಟೆವೆಂದೂ ನಾವು ಮುಸ್ಲಿಮರಾಗಿರುವ ಬಗ್ಗೆ ಸಾಕ್ಷಿ ನಿಲ್ಲಿರೆಂದೂ ಅವರು ಹೇಳಿದರು. (ಹವಾರಿಗಳಿಗೆ ಸಂಬಂಧಿಸಿದ) ಈ ಫಟನೆಯೂ ನೆನಪಿರಲಿ: ಹವಾರಿಗಳು, ‘ಓ ಮರ್ಯಮರ ಪುತ್ರ ಈಸಾ, ನಿಮ್ಮ ಪ್ರಭು ನಮ್ಮ ಮೇಲೆ ಆಕಾಶದಿಂದ ಊಟದ ಹರಿವಾಣವನ್ನು ಇಳಿಸ ಬಲ್ಲನೇ?’ ಎಂದು ಕೇಳಿದಾಗ ಈಸಾರವರು ನೀವು ಸತ್ಯವಾದಿಗಳಾಗಿದ್ದರೆ ಅಲ್ಲಾಹನನ್ನು ಭಯಪಡಿರೆಂದರು. ಆಗ ಅವರು, ‘ನಾವು ಆ ಹರಿವಾಣದಿಂದ ಉಣ್ಣುವಂತಾಗಲಿಕ್ಕೂ ಅದರಿಂದ ನಮ್ಮ ಮನಸ್ಸಿಗೆ ಶಾಂತಿಯುಂಟಾಗಲಿಕ್ಕೂ ತಾವು ನಮ್ಮೊಡನೆ ಹೇಳಿದುದೆಲ್ಲ ಸತ್ಯವೆಂದು ನಮಗೆ ತಿಳಿದುಬರಲಿಕ್ಕೂ ನಾವು ಅದರ ಬಗ್ಗೆ ಸಾಕ್ಷಿಗಳಾಗಿರಲಿಕ್ಕೂ ಬಯಸುತ್ತೇವೆ’ ಎಂದರು. ಆಗ ಮರ್ಯಮರ ಪುತ್ರ ಈಸಾರವರು ಹೀಗೆ ಪ್ರಾರ್ಥಿಸಿದರು: ‘ಓ ಅಲ್ಲಾಹ್, ನಮ್ಮ ಪ್ರಭೂ, ಆಕಾಶದಿಂದ ನಮಗೊಂದು ಊಟದ ಹರಿವಾಣವನ್ನು ಇಳಿಸು. ಅದು ನಮಗೂ ನಮ್ಮ ಹಿಂಗಾಮಿಗಳಿಗೂ ಮುಂಗಾಮಿಗಳಿಗೂ ಸಂತಸದ ಸಂದರ್ಭವಾಗಿಯೂ ನಿನ್ನ ಕಡೆಯಿಂದ ಒಂದು ದೃಷ್ಟಾಂತವಾಗಿಯೂ  ಪರಿಣಮಿಸಲಿ. ನಮಗೆ ಆಹಾರ ಪ್ರದಾನ ಮಾಡು. ನೀನು ಅತ್ಯುತ್ತಮ ಅನ್ನದಾತನು.’ ಅಲ್ಲಾಹನು ಉತ್ತರವಿತ್ತನು: ನಾನು ಅದನ್ನು ನಿಮ್ಮ ಮೇಲೆ ಇಳಿಸುವವನಿದ್ದೇನೆ. ಆದರೆ ಅನಂತರ ನಿಮ್ಮ ಪೈಕಿ ಸತ್ಯನಿಷೇಧ ಕೈಗೊಂಡವನಿಗೆ ಜಗತ್ತಿನಲ್ಲಿ ಬೇರಾರಿಗೂ ಕೊಡದಂಥ ಶಿಕ್ಷೆ ಕೊಡುವೆನು.” (5:33-37)

ಈ ಸೂಕ್ತಗಳಿಂದ ಕೆಲವು ಪ್ರಮುಖ ವಿಷಯಗಳು ತಿಳಿದುಬರುತ್ತವೆ:
1. ಹವಾರಿಗಳು ಪ್ರವಾದಿ ಈಸಾ(ಅ) ಅವರ ಮೇಲೆ ವಿಶ್ವಾಸವಿರಿಸುವುದಕ್ಕೆ ಮುಖ್ಯ ಕಾರಣ ಅಲ್ಲಾಹನ ಅನುಗ್ರಹ ಮತ್ತು ಅವನು ದಯಪಾಲಿಸಿದ ಸೌಭಾಗ್ಯವಾಗಿದೆ. ಅನ್ಯಥಾ ಆ ಸತ್ಯನಿಷೇಧಿಗಳ ಜನಾಂಗದಲ್ಲಿ ಒಬ್ಬನೇ ಒಬ್ಬ ವಿಶ್ವಾಸಿಯನ್ನು ಉಂಟು ಮಾಡುವುದು ಪ್ರವಾದಿ ಈಸಾ(ಅ) ಅವರ ಸಾಮರ್ಥ್ಯಕ್ಕೆ ವಿೂರಿದ ವಿಷಯವಾಗಿತ್ತು.
2. ಎಲ್ಲ ಪ್ರವಾದಿಗಳ ಅನುಯಾಯಿಗಳಂತೆ ಹವಾರೀಗಳು ಕೂಡಾ ಮುಸ್ಲಿಮರೇ (ದೇವನಿಗೆ ಶರಣಾದವರು) ಆಗಿದ್ದರು. ಯಾವ ಪ್ರವಾದಿಯೂ ಒಂದು ಹೊಸ ಧರ್ಮವನ್ನು ಸ್ಥಾಪಿಸಲು ಬಂದಿರಲಿಲ್ಲ. ಎಲ್ಲರೂ ದೇವನಿಗೆ ಶರಣಾಗಿ ಬಾಳುವ ಒಂದೇ ಒಂದು ಧರ್ಮ ವನ್ನು ತಂದಿದ್ದರು. ಅದನ್ನೇ ಅರಬಿ ಭಾಷೆಯಲ್ಲಿ ಇಸ್ಲಾಮ್ ಎನ್ನಲಾಗುತ್ತದೆ. ಇಸ್ಲಾಮ್ ಎಂದರೆ ವಿಧೇಯತೆ, ಅನುಸರಣೆ, ಶರಣಾಗತಿ ಮತ್ತು ಶಾಂತಿ ಎಂದಾಗಿದೆ. ಪ್ರವಾದಿ ಈಸಾ(ಅ) ಅವರ ಅನುಯಾಯಿಗಳು ತಮ್ಮನ್ನು ಮುಸ್ಲಿಮರು ಎಂದೇ ಗುರುತಿಸಿಕೊಂಡಿದ್ದರು.
3. ಹವಾರೀಗಳು ತಮಗಾಗಿ ಒಂದು ಊಟದ ಹರಿವಾಣವು ಆಕಾಶದಿಂದ ಇಳಿದು ಬರಬೇಕೆಂದು ಬಯಸಿದಾಗ, ನೀವು ನಿಮ್ಮ ಪ್ರಭುವಾದ ಅಲ್ಲಾಹನಲ್ಲಿ ಪ್ರಾರ್ಥಿಸಿ ನಮಗಾಗಿ ಒಂದು ಊಟದ ಹರಿವಾಣವನ್ನು ಇಳಿಸುವಂತೆ ಬೇಡಬೇಕೆಂದು ಕೋರಿದ್ದರು. ಅರ್ಥಾತ್ ಅವರು ಈಸಾ(ಅ) ಅವರನ್ನು ಅಲ್ಲಾಹನ ದಾಸರೆಂದೇ ನಂಬಿದ್ದರು. ಅವರು ತಮ್ಮ ಗುರು ಮತ್ತು ಪ್ರವಾದಿಯನ್ನು ದೇವನೆಂದೋ, ದೇವಾಂಶ ಸಂಭೂತನೆಂದೋ ದೇವಪುತ್ರನೆಂದೋ ದೇವ ಸಹಭಾಗಿಯೆಂದೋ ಭಾವಿಸುತ್ತಿರಲಿಲ್ಲ. ಈಸಾ(ಅ) ಅವರೂ ತಮ್ಮನ್ನು ದೇವನ ದಾಸ ಮತ್ತು ಪ್ರವಾದಿಯೆಂಬ ನೆಲೆಯಲ್ಲೇ ಜನರ ಮುಂದಿರಿಸಿದ್ದರು.
4. ಕ್ರೈಸ್ತರು ಈಸಾ(ಅ) ಅವರನ್ನು ಮಾತ್ರ ದೇವಪುತ್ರನೆಂದು ಸಾರಿದ್ದಲ್ಲ. ಪವಿತ್ರಾತ್ಮನನ್ನು ದೇವತ್ವದಲ್ಲಿ ಸಹಭಾಗಿಯಾಗಿ ಮಾಡಿದ್ದರು. ಮಾತ್ರವಲ್ಲದೆ ಈಸಾ(ಅ) ಅವರ ತಾಯಿಯಾದ ಮರ್ಯಮ್(ಅ) ಅವರನ್ನೂ ಅವರು ಆರಾಧ್ಯರಾಗಿ ಮಾಡಿಕೊಂಡಿದ್ದಾರೆ. ಹ. ಮರ್ಯಮ್(ಅ) ಅವರ ದೇವತ್ವದ ಕುರಿತು ಯಾವುದೇ ಸೂಚನೆ ನಮಗೆ ಬೈಬಲ್‍ನಲ್ಲಿಯೂ ಸಿಗುವುದಿಲ್ಲ. ಈಸಾ(ಅ) ಅವರ ಬಳಿಕ ಮೂರು ಶತಮಾನಗಳ ತನಕ ಕ್ರೈಸ್ತ ಜಗತ್ತಿನಲ್ಲಿ ಈ ಕಲ್ಪನೆಯೇ ಇರಲಿಲ್ಲ. ಕ್ರಿ.ಶ. ಮೂರನೆಯ ಶತಮಾನದ ಕೊನೆಯ ವೇಳೆಗೆ ಅಲೆಕ್ಸಾಂಡ್ರಿಯದ ಕೆಲವು ಧಾರ್ಮಿಕ ವಿದ್ವಾಂಸರು ಪ್ರಥಮ ಬಾರಿಗೆ ಹ. ಮರ್ಯಮ್(ಅ) ಅವರಿಗೆ ‘ದೇವಮಾತೆ’ ಎಂಬ ಪದಗಳನ್ನು ಬಳಸಿದರು. ಅನಂತರ  ಮರ್ಯಮ್‍ರ ದೇವತ್ವದ ಕಲ್ಪನೆ ಮತ್ತು ಮರ್ಯಮ್‍ರನ್ನು ಪೂಜಿಸುವ ಕ್ರಮವು ಕ್ರೈಸ್ತರಲ್ಲಿ ವ್ಯಾಪಿಸತೊಡಗಿತು. ಆದರೆ ಮೊದಮೊದಲು ಆ ಕಲ್ಪನೆಯನ್ನು ಚರ್ಚ್ ವಿಧಿಯುಕ್ತವಾಗಿ ಅಂಗೀಕರಿಸಿರಲಿಲ್ಲ. ಮರ್ಯಮ್‍ರನ್ನು(ಅ) ಆರಾಧಿಸುವವರನ್ನು ವಿಶ್ವಾಸ ಕೆಟ್ಟವರೆಂದೇ ಅವರು ಪರಿಗಣಿಸುತ್ತಿದ್ದರು. ಈಸಾ(ಅ) ಅವರ ಅಸ್ತಿತ್ವದಲ್ಲಿ ಎರಡು  ವಿಭಿನ್ನ ವ್ಯಕ್ತಿತ್ವಗಳು ಒಟ್ಟುಗೂಡಿದ್ದುವು ಎಂಬ ನಸ್ಟೂರೈಸ್‍ನ ಕಲ್ಪನೆಯ ಬಗ್ಗೆ ಕ್ರೈಸ್ತ ಜಗತ್ತಿನಲ್ಲಿ ವಾದ-ವಿವಾದಗಳ ಒಂದು ಕೋಲಾಹಲವೇ ಎದ್ದಿತ್ತು. ಅದರ ತೀರ್ಮಾನಕ್ಕಾಗಿ ಕ್ರಿ.ಶ. 431ರಲ್ಲಿ ಅಫ್‌ಸೋಸ್ ಎಂಬ ನಗರದಲ್ಲಿ ಒಂದು ಪರಿಷತ್ತು ಏರ್ಪಟ್ಟಿತ್ತು. ಆ ಪರಿಷತ್ತಿನಲ್ಲಿ ಪ್ರಥಮ ಬಾರಿಗೆ ಮರ್ಯಮ್(ಅ) ಅವರಿಗೆ ‘ದೇವಮಾತೆ’ ಎಂಬ ಬಿರುದನ್ನು ಬಳಸಲಾಯಿತು. ಇದರಿಂದಾಗಿ ಆ ತನಕ ಚರ್ಚ್‍ನ ಹೊರಗಡೆ ವ್ಯಾಪಿಸಿದ್ದಂತಹ ಮರ್ಯಮರನ್ನು ಪೂಜಿಸುವ ವ್ಯಾಧಿಯು ಕ್ಷಿಪ್ರವಾಗಿ ಚರ್ಚ್‍ನ ಒಳಗೂ ವ್ಯಾಪಿಸ ತೊಡಗಿತ್ತು. ಪವಿತ್ರ ಕುರ್‍ಆನಿನ ಅವತೀರ್ಣದ ವೇಳೆಗೆ ಮರ್ಯಮ್ ದೊಡ್ಡ ‘ದೇವಿ’ಯಾಗಿ ಮಾರ್ಪಟ್ಟಿದ್ದರು. ತಂದೆ-ಮಗ ಮತ್ತು ಪವಿತ್ರಾತ್ಮರಿಗಿಂತಲೂ ಹಿರಿದಾದ ಸ್ಥಾನವು ಈ ‘ದೇವಮಾತೆ’ಗೆ ಸಲ್ಲತೊಡಗಿತ್ತು. ಅವರ ಮೂರ್ತಿಯನ್ನು ಅಲ್ಲಲ್ಲಿ ಪ್ರತಿಷ್ಠಾಪಿಸಲಾಯಿತು. ಅವುಗಳ ಮುಂದೆ ಪೂಜಾ ವಿಧಿಗಳು ನಡೆಯತೊಡಗಿದ್ದುವು. ಅವುಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿತ್ತು. ಅವರನ್ನು ಪ್ರಾರ್ಥನೆಗಳನ್ನು ಮನ್ನಿಸುವವರು, ಬೇಡಿಕೆಗಳನ್ನು ಈಡೇರಿಸುವವರು, ಸಂಕಷ್ಟಗಳನ್ನು ನೀಗಿಸುವವರು ಮತ್ತು ದೀನದಲಿತರ ಬೆಂಬಲಿಗರೆಂದು ಪರಿಗಣಿಸಲಾಗುತ್ತಿತ್ತು. ‘ದೇವಮಾತೆ’ಯ ಬೆಂಬಲ ಗಳಿಸುವುದೇ ಕ್ರೈಸ್ತರ ಅತಿದೊಡ್ಡ ಆಸರೆಯಾಗಿ ಮಾರ್ಪಟ್ಟಿತು. ಸೀಸರ್ ಜೈಂಟೈನ್ ತನ್ನ ಕಾನೂನು ಗ್ರಂಥದ ಪ್ರಸ್ತಾವನೆಯಲ್ಲಿ ಮರ್ಯಮ್(ಅ) ಅವರನ್ನು ತನ್ನ ಸಾಮ್ರಾಜ್ಯದ ಬೆಂಬಲಿಗಳು ಮತ್ತು ಸಹಾಯಕಳೆಂದು ವರ್ಣಿಸಿದ್ದಾನೆ. ಅವನ ಸುಪ್ರಸಿದ್ಧ ದಂಡನಾಯಕ ಗರ್‍ಸೀಸ್ ರಣಾಂಗಣದಲ್ಲಿ ಹ. ಮರ್ಯಮ್(ಅ) ಅವರ ಮಾರ್ಗದರ್ಶನಕ್ಕಾಗಿ ಬೇಡುತ್ತಾನೆ. ಪ್ರವಾದಿ ಮುಹಮ್ಮದ್(ಸ) ಅವರ ಸಮಕಾಲೀನ ಸೀಸರ್ ಹಕ್ರ್ಯುಲಿಸ್ ತನ್ನ ಧ್ವಜದಲ್ಲಿ ದೇವಮಾತೆಯ ಚಿತ್ರವನ್ನು ಬಿಡಿಸಿದ್ದನು. ಈ ಚಿತ್ರದ ಮಹಿಮೆಯಿಂದಾಗಿ ಆ ಧ್ವಜವು ಎಂದೂ ಕೀಳಾಗದು ಎಂದು ಆತ ನಂಬಿದ್ದನು. ಅನಂತರದ ಶತಮಾನಗಳಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರ ಸುಧಾರಣಾ ಚಳವಳಿಯಿಂದಾಗಿ ಕ್ರೈಸ್ತರಲ್ಲಿ ಮರ್ಯಮರ ಪೂಜೆಯ ವಿರುದ್ಧ ಬಂಡಾಯದ ಕಹಳೆ ಮೊಳಗಿತ್ತಾದರೂ ಕೆಥೊಲಿಕ್ ಚರ್ಚ್ ಇಂದಿಗೂ ಆ ವಿಶ್ವಾಸವನ್ನೇ ಅಪ್ಪಿಕೊಂಡಿದೆ.

ಈಸಾ(ಅ) ತಾನು ದೇವಪುತ್ರನೆಂದು ಹೇಳಿರಲಿಲ್ಲ
ಹ. ಈಸಾ(ಅ) ಅವರು ತಮ್ಮನ್ನು ದೇವಪುತ್ರನೆಂದು ಹೇಳಿದ್ದರೆಂಬುದನ್ನು ನಿರಾಕರಿಸುವುದನ್ನು ಪವಿತ್ರ ಕುರ್‍ಆನ್ ಹೀಗೆ ಉಲ್ಲೇಖಿಸುತ್ತದೆ-
ಅಲ್ಲಾಹನು (ಈ ಅನುಗ್ರಹಗಳನ್ನು ನೆನಪಿಸುತ್ತಾ) ಹೇಳುವನು:
“(ಈ ಉಪಕಾರಗಳನ್ನೆಲ್ಲ ನೆನಪಿಸಿ) ಅಲ್ಲಾಹನು, ‘ಓ ಮರ್ಯಮರ ಪುತ್ರ ಈಸಾ, ಅಲ್ಲಾಹನ ಹೊರತು ನನ್ನನ್ನೂ ನನ್ನ ಮಾತೆಯನ್ನೂ ದೇವರನ್ನಾಗಿ ಮಾಡಿಕೊಳ್ಳಿರೆಂದು ನೀವು ಜನರೊಡನೆ ಹೇಳಿದ್ದಿರಾ?’ ಎಂದು ಕೇಳುವಾಗ ಅವರು ಉತ್ತರಿಸುವರು: ನೀನು ಪರಮ ಪಾವನನು. ನನಗೆ ಹೇಳಲು ಹಕ್ಕಿಲ್ಲದಂತಹ ಮಾತನ್ನು ಹೇಳುವ ಕಾರ್ಯ ನನ್ನದಾಗಿರಲಿಲ್ಲ. ನಾನು ಹಾಗೆ ಹೇಳಿರುತ್ತಿದ್ದರೆ ಅದು ಖಂಡಿತವಾಗಿಯೂ ನಿನಗೆ ತಿಳಿದಿರುತ್ತಿತ್ತು. ನನ್ನ ಮನಸ್ಸಿನಲ್ಲಿರುವುದು ನಿನಗೆ ಗೊತ್ತಿದೆ. ನಿನ್ನ ಮನಸ್ಸಿನಲ್ಲಿರುವುದು ನನಗೆ ಗೊತ್ತಿಲ್ಲ. ನೀನು ಸಕಲ ರಹಸ್ಯ ಪರಮಾರ್ಥಗಳ ಜ್ಞಾನಿಯಾಗಿರುತ್ತಿ. ನೀನು ನನಗೆ ನೀಡಿದ ಆಜ್ಞೆಯ ವಿನಾ ಇನ್ನೇನನ್ನೂ ನಾನು ಅವರಲ್ಲಿ ಹೇಳಿಲ್ಲ- ಅದು ‘ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ’ ಎಂದಾಗಿತ್ತು. ನಾನು ಅವರ ನಡುವೆ ವಾಸಿಸಿದ್ದ ಕಾಲದವರೆಗೆ ಮಾತ್ರ ನಾನು ಅವರ ಮೇಲ್ವಿಚಾರಕನಾಗಿದ್ದೆ. ನೀನು ನನ್ನನ್ನು ಹಿಂದಕ್ಕೆ ಕರೆಸಿಕೊಂಡ ಮೇಲೆ ನೀನೇ ಅವರ ಮೇಲ್ವಿಚಾರಕ ನಾಗಿರುತ್ತಿ ಮತ್ತು ನೀನಂತು ಸಕಲ ವಸ್ತುಗಳ ಮೇಲ್ನೋಟವಿರಿಸುವವನಾಗಿರುತ್ತಿ.” (5:116-117)
ಪುನರುತ್ಥಾನ ದಿನ ಅಲ್ಲಾಹನ ಮುಂದೆ ಎಲ್ಲ ಮಾನವರೂ ಹಾಜರಾಗುವಾಗ ಅಲ್ಲಾಹನು ಈ ಭೂಮಿಯ ಮೇಲೆ ಮನುಷ್ಯರಲ್ಲಿದ್ದ ಎಲ್ಲ ವಿವಾದಗಳನ್ನೂ ಇತ್ಯರ್ಥ ಪಡಿಸುವನು. ಕ್ರೈಸ್ತರು ಹ. ಈಸಾ(ಅ) ಅವರನ್ನು ದೇವಪುತ್ರನೆಂದು ನಂಬಿ ಆರಾಧಿಸುತ್ತಿದ್ದ ಬಗ್ಗೆಯೂ ಅಲ್ಲಾಹನು ತೀರ್ಮಾನ ಮಾಡುವನು. ಆ ಸನ್ನಿವೇಶದ ಒಂದು ಚಿತ್ರಣವನ್ನು ಮೇಲಿನ ಸೂಕ್ತಗಳಲ್ಲಿ ಕೊಡಲಾಗಿದೆ. ಈಸಾ(ಅ) ಅವರು ತಮ್ಮನ್ನು ದೇವಪುತ್ರನೆಂದು ಸಾರಿದ್ದರೆಂದೂ ಆ ಪ್ರಕಾರ ನಾವು ಅವರನ್ನು ನಂಬಿ ಆರಾಧಿಸುತ್ತಿರುವೆವೆಂದೂ ಕ್ರೈಸ್ತರು ವಾದಿಸುತ್ತಾರೆ. ಈ ವಾದದ ಕುರಿತು ಅಲ್ಲಾಹನು ನೇರವಾಗಿ ಹ. ಈಸಾ(ಅ) ಅವರನ್ನು ವಿಚಾರಿಸುವನೆಂದೂ ಅವರು ಅದನ್ನು ಸ್ಪಷ್ಟವಾಗಿ ನಿರಾಕರಿಸುವರೆಂದೂ ಈ ಸೂಕ್ತಗಳು ತಿಳಿಸುತ್ತವೆ. ಹ. ಈಸಾ(ಅ) ಅವರಿಗೆ ಅವರನ್ನು ಅವರ ಅನುಯಾಯಿಗಳು ದೇವಪುತ್ರನೆಂದು ಸಾರಿ ಆರಾಧಿಸುತ್ತಿದ್ದುದು ಮತ್ತು ಅವರ ತಾಯಿಯನ್ನು ಅಲ್ಲಾಹನ ಜತೆ ಆರಾಧನೆಗೆ ಅರ್ಹರೆಂದು ಭಾವಿಸಿದ್ದುದು ತಿಳಿದೇ ಇರಲಾರದು. ಅವರು ಈ ವಿಷಯವನ್ನು ನಿರಾಕರಿಸಿ ತಾನು ಕೇವಲ ಅಲ್ಲಾಹನ ಪ್ರವಾದಿಯಾಗಿದ್ದು ಅವನನ್ನು ಮಾತ್ರ ಆರಾಧಿಸುತ್ತಿದ್ದುದಾಗಿಯೂ ಅವನನ್ನು ಮಾತ್ರ ಆರಾಧಿಸಲು ಜನರಿಗೆ ಕರೆ ನೀಡಿದ್ದುದಾಗಿಯೂ ಸಾಕ್ಷ್ಯವಹಿಸುವರು. ಮಾತ್ರವಲ್ಲ ಅವರ ಈ ಕೃತ್ಯಗಳಿಂದ ಸಂಪೂರ್ಣವಾಗಿ ತಮ್ಮ ಹೊಣೆ ಮುಕ್ತತೆಯನ್ನು ಘೋಷಿಸುವರೆಂದೂ ಈ ವಚನಗಳು ತಿಳಿಸುತ್ತವೆ.

“ನನ್ನ ಮತ್ತು ನಿಮ್ಮ ಪ್ರಭು ಅಲ್ಲಾಹನಾಗಿರುವನು”
ಅಲ್ಲಾಹನನ್ನು ಪ್ರವಾದಿ ಈಸಾ(ಅ), “ನನ್ನ ಪ್ರಭು ಮತ್ತು ನಿಮ್ಮೆಲ್ಲರ ಪ್ರಭು” ಎಂದು ಘೋಷಿಸಿದ್ದರೇ ವಿನಾ “ನನ್ನ ತಂದೆ ಮತ್ತು ನಿಮ್ಮೆಲ್ಲರ ಪ್ರಭು”ವೆಂದು ಸಾರಿರಲೇ ಇಲ್ಲವೆಂದು ಪವಿತ್ರ ಕುರ್‍ಆನ್ ಖಚಿತವಾಗಿ ಹೇಳುತ್ತದೆ:
“ಈಸಾ ಪ್ರತ್ಯಕ್ಷ ನಿದರ್ಶನಗಳೊಂದಿಗೆ ಬಂದಾಗ ಹೇಳಿದ್ದರು, ನಾನು ನಿಮ್ಮ ಬಳಿಗೆ ಸದ್ವಿವೇಕವನ್ನು ತಂದಿದ್ದೇನೆ ಮತ್ತು ನೀವು ಪರಸ್ಪರ ಭಿನ್ನಾಭಿಪ್ರಾಯವಿಟ್ಟುಕೊಂಡಿರುವ ಕೆಲವು ವಿಷಯಗಳ ವಾಸ್ತವಿಕತೆಯನ್ನು ನಿಮ್ಮ ಮುಂದೆ ಪ್ರಕಟಗೊಳಿಸಲಿಕ್ಕಾಗಿ ಬಂದಿದ್ದೇನೆ. ಆದುದರಿಂದ ನೀವು ಅಲ್ಲಾಹನನ್ನೇ ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. ವಾಸ್ತವದಲ್ಲಿ ಅಲ್ಲಾಹನೇ ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುತ್ತಾನೆ. ನೀವು ಅವನನ್ನೇ ಆರಾಧಿಸಿರಿ, ಇದುವೇ ನೇರಮಾರ್ಗ.” (43:63-64)
ಈಸಾ(ಅ) ಅವರು “ನಾನು ದೇವನಾಗಿರುವೆ ಅಥವಾ ದೇವಪುತ್ರನಾಗಿರುವೆ, ನೀವು ನನ್ನನ್ನು ಆರಾಧಿಸಿರಿ” ಎಂದು ಎಂದೂ ಹೇಳಿರಲೇ ಇಲ್ಲ. ಬದಲಾಗಿ ಅವರ ಸಂದೇಶವು ಇತರೆಲ್ಲ ಪ್ರವಾದಿಗಳ ಸಂದೇಶವೇ ಆಗಿತ್ತು. ಅಂತಿಮ ಪ್ರವಾದಿ ಹ.ಮುಹಮ್ಮದ್(ಸ) ಅವರು ಅದೇ ಸಂದೇಶವನ್ನು ಜನರ ಮುಂದಿಟ್ಟಿದ್ದರು. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಒಡೆಯನೂ ಅಧಿಪತಿಯೂ ಆದ ಅಲ್ಲಾಹನೇ ನನ್ನ ಪ್ರಭುವೂ ನಿಮ್ಮ ಪ್ರಭುವೂ ಆಗಿರುವನು. ಆದ್ದರಿಂದ ನೀವು ಅವನ ದಾಸ್ಯ-ಆರಾಧನೆ ಮಾತ್ರ ಮಾಡಿರಿ, ಎಂಬುದೇ ಆ ಸಂದೇಶದ ತಿರುಳಾಗಿತ್ತು.

ಈಸಾರನ್ನು(ಅ) ದೇವಪುತ್ರನೆನ್ನುವುದು
ಯಹೂದಿಗಳು ಮತ್ತು ಕ್ರೈಸ್ತರು ತಮ್ಮ ಮಹಾಪುರುಷರು ಮತ್ತು ಪ್ರವಾದಿಗಳನ್ನು ದೇವಪುತ್ರರೆನ್ನುವುದರ ಕುರಿತು ಪವಿತ್ರ ಕುರ್‍ಆನ್ ಹೀಗೆ ಹೇಳುತ್ತದೆ:
“‘ಉಝೈರ್’ ದೇವಪುತ್ರನೆಂದು ಯಹೂದಿಯರು ಹೇಳುತ್ತಾರೆ. ಮಸೀಹ್ (ಈಸಾ) ದೇವಪುತ್ರನೆಂದು ಕ್ರೈಸ್ತರು ಹೇಳುತ್ತಾರೆ. ಅವರು ತಮಗಿಂತ ಹಿಂದೆ ಸತ್ಯನಿಷೇಧಿಗಳಾಗಿದ್ದವರನ್ನು ಅನುಕರಿಸುತ್ತ ತಮ್ಮ ಬಾಯಿಗಳಿಂದ ಹೊರಡಿಸುವ ಅಸಂಬದ್ಧ ಮಾತುಗಳಿವು. ದೇವನ ಪ್ರಹಾರವಿದೆ ಅವರ ಮೇಲೆ. ಅವರು ಎಲ್ಲಿಂದ ಮೋಸಹೋಗುತ್ತಿರುವರೋ! ಅವರು ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ ಸಂತರನ್ನೂ ತಮ್ಮ ಪ್ರಭುಗಳನ್ನಾಗಿ ಮಾಡಿಕೊಂಡಿರುತ್ತಾರೆ. ಇದೇ ರೀತಿಯಲ್ಲಿ ಮರ್ಯಮರ ಪುತ್ರ ಮಸೀಹರನ್ನೂ (ಪ್ರಭುವಾಗಿ ಮಾಡಿಕೊಂಡಿದ್ದಾರೆ.) ವಸ್ತುತಃ ಅವರಿಗೆ ಏಕದೇವನನ್ನು ಹೊರತು ಇನ್ನಾರದೇ ದಾಸ್ಯ ಆರಾಧನೆಯನ್ನೂ ಮಾಡಲಿಕ್ಕೆ ಅಪ್ಪಣೆ ಕೊಡಲಾಗಿಲ್ಲ. ಆತನ ಹೊರತು ಅನ್ಯ-ಆರಾಧ್ಯರಾರೂ ಇಲ್ಲ. ಅವರಾಡುತ್ತಿರುವ ದೇವಸಹಭಾಗಿತ್ವ ಪರ ಮಾತುಗಳಿಂದ ಅವನು ಅತ್ಯಂತ ಪರಿಶುದ್ಧನು.” (9:30-31)
ಉಝೈರ್ ಅಥವಾ ಎಝ್ರಾ ಎಂಬ ಓರ್ವ ಧರ್ಮ ಸುಧಾರಕನನ್ನು ಯಹೂದಿಗಳು ನಂಬುತ್ತಾರೆ. ಅವರ ಜೀವನ ಕಾಲವು ಕ್ರಿ.ಪೂ. 450. ಇಸ್ರಾಈಲರ  ವರದಿಗಳ ಪ್ರಕಾರ ಹ.ಸುಲೈಮಾನ್(ಅ) ಅವರ ಕಾಲಾನಂತರ ಬನೀ ಇಸ್ರಾಈಲರ  ಮೇಲೆ ಸಂಕಷ್ಟಗಳ ಸುರಿಮಳೆಯಾಗಿತ್ತು. ಆಗ ತೌರಾತ್ ಕಾಣೆಯಾಗಿತ್ತು. ಬೆಬಿಲೋನಿಯದಲ್ಲಿ ಬಂಧಿತರಾಗಿದ್ದ ಇಸ್ರಾಈಲ್ ಸಂತತಿಗಳು ತಮ್ಮ ಧರ್ಮಶಾಸ್ತ್ರ, ಆಚಾರ-ಸಂಪ್ರದಾಯಗಳು ಮತ್ತು ತಮ್ಮ ಜನಾಂಗದ ಭಾಷೆಯಾದ ಹಿಬ್ರೂವನ್ನು ಮರೆತು ಬಿಟ್ಟಿದ್ದರು. ಕೊನೆಗೆ ಎಝ್ರಾ ಅವರು ಬೈಬಲ್‍ನ ಹಳೆಯ ಒಡಂಬಡಿಕೆಯನ್ನು ಕ್ರೋಡೀಕರಿಸಿದರು ಮತ್ತು ಅವರ ಧರ್ಮಶಾಸ್ತ್ರವನ್ನು ಜೀವಂತಗೊಳಿಸಿದರು. ಅದರಿಂದಾಗಿ ಯಹೂದಿಗಳು ಅವರನ್ನು ಬಹಳವಾಗಿ ಗೌರವಿಸುತ್ತಾರೆ. ಈ ಗೌರವ ಎಷ್ಟರ ಮಟ್ಟಿಗೆ ಹೆಚ್ಚಾಯಿತೆಂದರೆ ಕೆಲವು ಯಹೂದಿ ಗೋತ್ರಗಳು ಅವರನ್ನು ದೇವಪುತ್ರನೆಂದು ಸಾರಿಬಿಟ್ಟವು. ಪುರಾತನ ನಾಗರಿಕತೆಯ ಕೇಂದ್ರಗಳಾದ ಈಜಿಪ್ಟ್, ಗ್ರೀಸ್, ರೋಮ್, ಇರಾನ್ ಮತ್ತಿತರ ರಾಷ್ಟ್ರ್ರಗಳ ಪಥಭ್ರಷ್ಟ ಜನಾಂಗಗಳ ತತ್ವಶಾಸ್ತ್ರ, ಪುರಾಣಗಳು ಮತ್ತು ಮೂಢನಂಬಿಕೆಗಳಿಂದ ಪ್ರೇರಿತರಾಗಿ  ಅವರು ಈ ರೀತಿಯ ಪಥಭ್ರಷ್ಟ ಸಿದ್ಧಾಂತಗಳನ್ನು ಆವಿಷ್ಕರಿಸಿದ್ದರು.
ಪ್ರವಾದಿ ಮುಹಮ್ಮದ್(ಸ) ಅವರ ಸಂಗಾತಿಗಳ ಪೈಕಿ ಅದಿಯ್ಯ್ ಬಿನ್ ಹಾತಿಮ್ ಎಂಬವರು ಮೊದಲು ಕ್ರೈಸ್ತರಾಗಿದ್ದರು. ಅವರು ಪ್ರವಾದಿಯವರ(ಸ) ಸನ್ನಿಧಿಗೆ ಬಂದು ಇಸ್ಲಾಮ್ ಸ್ವೀಕರಿಸಿದರು. ಈ ಸೂಕ್ತದಲ್ಲಿ, ಕ್ರೈಸ್ತರು ತಮ್ಮ ವಿದ್ವಾಂಸರನ್ನೂ ಸಂತರನ್ನೂ ದೇವರಾಗಿ ಮಾಡಿಕೊಂಡಿರುವರೆಂಬ ಆರೋಪ ಹೊರಿಸಲಾಗಿರುವ ಕುರಿತು ವಿಚಾರಿಸುತ್ತಾ ಅದರ ವಾಸ್ತವಿಕತೆ ಏನೆಂದು ತಿಳಿಯ ಬಯಸಿದರು. ಆಗ ಪ್ರವಾದಿ(ಸ) ಈ ರೀತಿ ಉತ್ತರಿಸಿದರು: ನಿಮ್ಮ ವಿದ್ವಾಂಸರು ಮತ್ತು ಪುರೋಹಿತರು ಯಾವುದನ್ನು ನಿಷಿದ್ಧವೆನ್ನು ತ್ತಾರೋ ಅದನ್ನು ನೀವು ನಿಷಿದ್ಧವೆಂದು ಪರಿಗಣಿಸುತ್ತಿರಲಿಲ್ಲವೇ? ಅವರು ಯಾವುದನ್ನು, ಧರ್ಮಸಮ್ಮತವೆನ್ನುತ್ತಿದ್ದರೋ ಅದನ್ನು ನೀವು ಧರ್ಮಸಮ್ಮತವೆಂದು ಬಗೆಯುತ್ತಿರಲಿಲ್ಲವೇ? ಇದಕ್ಕೆ ಅದಿಯ್ಯ್ ಬಿನ್ ಹಾತಿಮ್(ರ) ‘ಹೌದೆಂದು’ ಉತ್ತರಿಸಿದಾಗ ಪ್ರವಾದಿ(ಸ)  ಹೇಳಿದರು- “ಇದುವೇ ಅವರನ್ನು ದೇವರೆಂದು ಪರಿಗಣಿಸುವುದಾಗಿದೆ.”

ಮರ್ಯಮರ(ಅ) ಮೇಲೆ ಯಹೂದಿಗಳ ಆರೋಪ
ಮರ್ಯಮರ ಮೇಲೆ ಯಹೂದಿಗಳು ಆರೋಪ ಹೊರಿಸಿದುದರ ಬಗ್ಗೆ ಪವಿತ್ರ ಕುರ್‍ಆನಿನಲ್ಲಿ ಹೀಗಿದೆ:
“ಅವರು ತಮ್ಮ ನಿಷೇಧ ನೀತಿಯಲ್ಲಿ ಮುಂದುವರಿಯುತ್ತ ಮರ್ಯಮಳ ಮೇಲೆ ಉಗ್ರ ಸುಳ್ಳಾರೋಪವನ್ನು ಹೊರಿಸಿ ಬಿಟ್ಟರು.” (4:156)
ಹ.ಈಸಾ(ಅ) ಅವರ ಜನನದ ಬಗ್ಗೆ ಯಹೂದಿ ಜನಾಂಗಕ್ಕೆ ಯಾವುದೇ ರೀತಿಯ ಸಂಶಯವಿರಲಿಲ್ಲ. ಯಹೂದಿಗಳ ಮುಂದೆ ಅವರು ಅಸಾಮಾನ್ಯ ವ್ಯಕ್ತಿತ್ವ ಹೊಂದಿದ್ದು ದಿವ್ಯ ಪವಾಡದ ಮೂಲಕವೇ ಅವರ ಜನನವಾಗಿದೆ ಎಂಬುದು ಅವರು ಹುಟ್ಟಿದ ದಿನವೇ ಸ್ಪಷ್ಟವಾಗಿತ್ತು. ಆದ್ದರಿಂದ ಅವರಿಗೆ ಈಸಾ(ಅ) ಅನೈತಿಕ ಸಂಬಂಧದಿಂದ ಹುಟ್ಟಿದವರೆಂಬ ಸಂಶಯ ಬರುವ ಸಾಧ್ಯತೆಯೇ ಇರಲಿಲ್ಲ. ಮರ್ಯಮ್‍ರು(ಅ) ಇಸ್ರೇಲ್ ಜನಾಂಗದ ಅತ್ಯಂತ ಗೌರವಾರ್ಹ ಮತ್ತು ಸುಪ್ರಸಿದ್ಧ ಧಾರ್ಮಿಕ ಮನೆತನಕ್ಕೆ ಸೇರಿದ ಓರ್ವ ಕನ್ಯಾಮಣಿ ಯಾಗಿದ್ದರು. ಆ ಕನ್ಯೆ ತನ್ನ ಮಡಿಲಲ್ಲಿ ಒಂದು ಶಿಶುವನ್ನು ಹೊತ್ತು ತಂದಾಗ ಯಹೂದಿಗಳ ಆಬಾಲ ವೃದ್ಧರು ಸಹಸ್ರಾರು ಸಂಖ್ಯೆಯಲ್ಲಿ ಅವರ ಮನೆಯ ಬಳಿ  ನೆರೆದರು. ಎಲ್ಲರೂ ಮರ್ಯಮರನ್ನು ನಾನಾ ರೀತಿಯಲ್ಲಿ ಪ್ರಶ್ನಿಸತೊಡಗಿದರು. ಹ.ಮರ್ಯಮ್(ಅ) ಅವರು ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಮೌನವಾಗಿ ಆಗ ತಾನೆ ಹುಟ್ಟಿದ ಆ ಮಗುವಿನ ಕಡೆಗೆ ಬೆರಳು ತೋರಿಸುತ್ತಾ ಅದು ನಿಮಗೆ ಉತ್ತರ ನೀಡುವುದೆಂದು ಸಂಜ್ಞೆಯ ಮೂಲಕ ಹೇಳಿದರು. ಆಗ ನೆರೆದ ಜನಸ್ತೋಮವು ಆಶ್ಚರ್ಯಚಕಿತವಾಗಿ ತೊಟ್ಟಿಲಲ್ಲಿ ಮಲಗಿರುವ ಶಿಶುವಿನಲ್ಲಿ ನಾವೇನು ಕೇಳಬಲ್ಲೆವು ಎಂದಾಗ ಆ ಮಗು ಸ್ಪಷ್ಟವಾಗಿ ಮಾತಾಡುತ್ತಾ ಹೀಗೆ ಹೇಳಿತು: “ನಾನು ಅಲ್ಲಾಹನ ದಾಸನಾಗಿರುವೆನು. ಅವನು ನನಗೆ ಗ್ರಂಥ ನೀಡಿರುವನು ಮತ್ತು ನನ್ನನ್ನು ಪ್ರವಾದಿಯಾಗಿ ಮಾಡಿರುವನು.”
ಈ ರೀತಿ ಅಲ್ಲಾಹನು ಈಸಾ(ಅ) ಅವರ ಜನನದ ಬಗೆಗಿನ ಎಲ್ಲ ಸಂಶಯಗಳನ್ನು ಶಾಶ್ವತವಾಗಿ ನಿವಾರಿಸಿದ್ದನು. ಆದ್ದರಿಂದಲೇ ಈಸಾ(ಅ) ಯುವಕರಾಗುವ ತನಕ ಯಾರೂ ಹ.ಮರ್ಯಮ್(ಅ) ಅವರ ಮೇಲೆ ವ್ಯಭಿಚಾರದ ಆರೋಪ ಹೊರಿಸಿರಲಿಲ್ಲ. ಈಸಾ(ಅ) ಅವರನ್ನು ಜಾರಪುತ್ರನೆಂದು ಅಣಕಿಸಲೂ ಇಲ್ಲ. ಆದರೆ ಮೂವತ್ತು ವರ್ಷ ವಯಸ್ಸಿನಲ್ಲಿ ಅವರು ಪ್ರವಾದಿತ್ವವನ್ನು ಘೋಷಿಸಿದಾಗ, ಯಹೂದಿಗಳ ದುರಾಚಾರಗಳ ಬಗ್ಗೆ ಅವರನ್ನು ವಿಮರ್ಶಿಸಿದಾಗ, ಅವರ ವಿದ್ವಾಂಸರ ಡಂಬಾಚಾರದ ಕುರಿತು ಟೀಕಿಸಿದಾಗ, ಅಲ್ಲಾಹನ ಧರ್ಮದ ಸಂಸ್ಥಾಪನೆಯ ಕಾರ್ಯದಲ್ಲಿ ಎಲ್ಲ ರೀತಿಯ ತ್ಯಾಗ ಬಲಿದಾನಗಳಿಗೆ ಸಿದ್ಧರಾಗುವಂತೆ ಅವರಿಗೆ ಕರೆ ನೀಡಿದಾಗ ಮತ್ತು ಎಲ್ಲ ರಂಗಗಳಲ್ಲೂ ಪೈಶಾಚಿಕ ಶಕ್ತಿಗಳ ವಿರುದ್ಧ ಹೋರಾಟ ಹೂಡಿದಾಗ ಈ ಸ್ವರವನ್ನು ಹತ್ತಿಕ್ಕಲಿಕ್ಕಾಗಿ ಯಹೂದಿಗಳು ಎಲ್ಲ ರೀತಿಯ ಕೆಟ್ಟ ಅಸ್ತ್ರಗಳನ್ನು ಬಳಸಿದರು. ಮೂವತ್ತು ವರ್ಷಗಳ ತನಕ ಅವರು ಹೇಳದೆ ಇದ್ದಂತಹ ಮಾತನ್ನು ಆಗ ಹೇಳಿದರು. ಮರ್ಯಮ್(ಅ) ಅವರನ್ನು ಶೀಲಗೆಟ್ಟವಳೆಂದೂ ಈಸಾ(ಅ) ಅವರನ್ನು ಜಾರ ಸಂತಾನವೆಂದೂ ಸಾರಿದರು (ಶಾಂತಂ ಪಾಪಂ). ವಸ್ತುತಃ ಈ ಪವಿತ್ರ ತಾಯಿ-ಮಗ ಇಬ್ಬರೂ ಈ ಕಳಂಕದಿಂದ ಶುದ್ಧವಾಗಿದ್ದಾರೆಂಬುದು ಅವರಿಗೆ ಚೆನ್ನಾಗಿ  ತಿಳಿದಿತ್ತು. ಇದು ಅವರ ಮನದಲ್ಲಿದ್ದ ಯಾವುದೇ ರೀತಿಯ ಸಂಶಯದ ಕಾರಣ ದಿಂದಾಗಿರಲಿಲ್ಲ. ಇದು ಅವರು ಉದ್ದೇಶಪೂರ್ವಕವಾಗಿ ಸತ್ಯದ ವಿರುದ್ಧ ಮಾಡಿದ ಅಪ್ಪಟ ಸುಳ್ಳಾರೋಪವಾಗಿತ್ತು. ಆದ್ದರಿಂದಲೇ ಅಲ್ಲಾಹನು ಅವರ ಈ ಕೃತ್ಯವನ್ನು ಅನ್ಯಾಯ ಅಥವಾ ಸುಳ್ಳು ಎನ್ನುವ ಬದಲು ಸತ್ಯನಿಷೇಧವೆಂದಿರುವನು. ಏಕೆಂದರೆ ಈ ಆರೋಪದ ಮೂಲಕ ಅವರು ಅಲ್ಲಾಹನ ಸತ್ಯಧರ್ಮದ ಹಾದಿಯನ್ನು ತಡೆಯಬಯಸಿದ್ದರು. ಓರ್ವ ನಿರ್ದೋಷಿ ಮಹಿಳೆಯ ಮೇಲಿನ ಆರೋಪವು ಕೇವಲ ನೆಪವಾಗಿತ್ತು.

ಈಸಾರನ್ನು(ಅ) ಕೊಲೆ ಮಾಡಿದ್ದೇವೆಂಬ ಅವರ ಹೇಳಿಕೆ
ನಾವು ಅಲ್ಲಾಹನ ಪ್ರವಾದಿಯಾಗಿರುವ ಮರ್ಯಮರ ಪುತ್ರ ಈಸಾ(ಅ) ಅವರನ್ನು ವಧಿಸಿರುವೆವೆಂದು ಯಹೂದಿಗಳು ಹೇಳಿಕೊಳ್ಳುತ್ತಾರೆ. ಪವಿತ್ರ ಕುರ್‍ಆನ್ ಈ ವಿಷಯವನ್ನು ಹೀಗೆ ಪ್ರಸ್ತಾಪಿಸಿದೆ:
“ನಾವು ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಈಸಾ ಮಸೀಹರನ್ನು ವಧಿಸಿದೆವೆಂದು ಅವರು ಹೇಳಿದರು. ವಸ್ತುತಃ ಅವರು ಅವರನ್ನು (ಈಸಾರನ್ನು) ವಧಿಸಲೂ ಇಲ್ಲ, ಶಿಲುಬೆಗೇರಿಸಲೂ ಇಲ್ಲ. ನಿಜವಾಗಿ ಆ ಪ್ರಕರಣವು ಅವರಿಗೆ ಅಸ್ಪಷ್ಟಗೊಳಿಸಲಾಯಿತು. ಈ ವಿಷಯದಲ್ಲಿ ಭಿನ್ನಾಭಿಪ್ರಾಯ ತೋರಿದವರೂ ವಾಸ್ತವದಲ್ಲಿ ಸಂಶಯಗ್ರಸ್ತರಾಗಿರುತ್ತಾರೆ. ಅವರಿಗೆ ಈ ಪ್ರಕರಣದ ಅರಿವೇನೂ ಇಲ್ಲ. ಕೇವಲ ಗುಮಾನಿಯನ್ನೇ ಅನುಸರಿಸಲಾಗುತ್ತಿದೆ. ಅವರು ಮಸೀಹರನ್ನು ಖಂಡಿತವಾಗಿಯೂ ವಧಿಸಲಿಲ್ಲ. ನಿಜವಾಗಿ ಅಲ್ಲಾಹನು ಅವರನ್ನು ತನ್ನ ಕಡೆಗೆ ಎತ್ತಿಕೊಂಡನು. ಅಲ್ಲಾಹ್ ಮಹಾ ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆಗಿರುತ್ತಾನೆ.” (4:157-158)
ಇಸ್ರಾಈಲ್ ಜನಾಂಗದ ಅಪರಾಧ ಪ್ರವೃತ್ತಿ ಎಷ್ಟು ಪ್ರಬಲವಾಗಿತ್ತೆಂದರೆ ಅಲ್ಲಾಹನ ಪ್ರವಾದಿಯನ್ನು ಪ್ರವಾದಿಯೆಂದು ತಿಳಿದೂ ಅವರನ್ನು ಕೊಲ್ಲಲು ಮುಂದಾದರು. ಮಾತ್ರವಲ್ಲ ನಾವು ಅವರನ್ನು ವಧಿಸಿಬಿಟ್ಟಿದ್ದೇವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈಸಾ(ಅ) ಅವರು ಶಿಶುವಾಗಿ ತೊಟ್ಟಿಲಲ್ಲಿರುವಾಗಲೇ ತಮ್ಮ ಅದ್ಭುತ ಪವಾಡಸದೃಶ ಜನನದ ಮತ್ತು ಪ್ರವಾದಿತ್ವದ ನಿರಾಕರಿಸಲಾಗದ ಪವಾಡವನ್ನು ಇಸ್ರಾಈಲ್ ಜನಾಂಗದ ಮುಂದೆ ಇರಿಸಿದ್ದರು. ಆ ಬಳಿಕ ಯಹೂದಿಗಳಿಗೆ ಅವರ ಪ್ರವಾದಿತ್ವದ ಬಗ್ಗೆ ಯಾವುದೇ ಸಂಶಯಕ್ಕೆ ಆಸ್ಪದವೇ  ಇರಲಿಲ್ಲ. ಅವರು ಬೆಳೆದು ದೊಡ್ಡವರಾದ ಬಳಿಕ ಕುಷ್ಠರೋಗಿಗಳನ್ನು ಮತ್ತು ಕುರುಡರನ್ನು ಗುಣಪಡಿಸುವ, ಮಣ್ಣಿನಿಂದ ಹಕ್ಕಿಯ ಆಕೃತಿ ಮಾಡಿ ಅದರಲ್ಲಿ ಜೀವ ತುಂಬುವ, ಮೃತರನ್ನು ಜೀವಂತಗೊಳಿಸುವ ಮತ್ತು ಅದೃಶ್ಯ ವಿಷಯಗಳನ್ನು ತಿಳಿಸುವಂತಹ ಪವಾಡಗಳನ್ನು ಇಸ್ರಾಈಲ್ ಜನಾಂಗದ ಮುಂದಿರಿಸಿದ್ದರು. ಇವುಗಳನ್ನು ಕಂಡ ಬಳಿಕವಂತೂ ಅವರು ಅಲ್ಲಾಹನ ಸಂದೇಶವಾಹಕರಾಗಿರುವ ಬಗ್ಗೆ ಅವರಿಗೆ ಒಂದಿನಿತೂ ಅನುಮಾನ ಉಳಿದಿರಲಿಲ್ಲ. ಆದ್ದರಿಂದ ಯಹೂದಿಗಳು ಯಾವುದೇ ತಪ್ಪುಕಲ್ಪನೆಯ ಕಾರಣದಿಂದಾಗಿ ಈಸಾ(ಅ) ಅವರ ಕೊಲೆ ಮಾಡಲು ಮುಂದಾದುದಲ್ಲ. ತಾವು ಕೊಲ್ಲಲು ಪ್ರಯತ್ನಿಸುತ್ತಿ ರುವುದು ಅಲ್ಲಾಹನ ವತಿಯಿಂದ ಸಂದೇಶವಾಹಕರಾಗಿ ಬಂದ ವ್ಯಕ್ತಿಯನ್ನೇ ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು.
ಒಬ್ಬ ವ್ಯಕ್ತಿಯನ್ನು ಅಲ್ಲಾಹನ ಪ್ರವಾದಿಯೆಂದು ಚೆನ್ನಾಗಿ ತಿಳಿದ ಬಳಿಕವೂ ಒಂದು ಜನಾಂಗವು ಅವರನ್ನು ಕೊಲ್ಲುವುದೆಂದರೆ ಅದು ನಿಜಕ್ಕೂ ಬಹಳ ವಿಚಿತ್ರವಾದ ವಿಷಯ. ಆದರೆ ಕೆಟ್ಟುಹೋದ ಜನಾಂಗಗಳ ರೀತಿ-ನೀತಿಗಳೇ ವಿಚಿತ್ರವಾಗಿರುತ್ತವೆ. ತಮ್ಮನ್ನು ತಮ್ಮ ಕೆಡುಕುಗಳಿಗಾಗಿ ವಿಮರ್ಶಿಸುವ ಮತ್ತು ತಮ್ಮ ಧರ್ಮಬಾಹಿರ ಕಾರ್ಯಗಳಿಂದ ತಮ್ಮನ್ನು ತಡೆಯುವ ವ್ಯಕ್ತಿಯನ್ನು ಅವರು ತಮ್ಮ ಮಧ್ಯೆ ಎಂದೂ ಸಹಿಸುವುದಿಲ್ಲ. ಇಂತಹ ವ್ಯಕ್ತಿಗಳು ಸುಧಾರಕರಾಗಿರಲಿ, ಮಹಾಪುರುಷರಾಗಿರಲಿ ಅಥವಾ ಅಲ್ಲಾಹನ ಪ್ರವಾದಿಗಳೇ ಆಗಿರಲಿ ಕೆಟ್ಟು ಹೋದ ಜನಾಂಗಗಳು ಅವರನ್ನು ಸೆರೆಮನೆಗೆ ತಳ್ಳುವ, ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುವ ಹಾಗೂ ಅವರನ್ನು ಕೊಲೆಮಾಡುವ ವರೆಗೂ ಮುಂದುವರಿಯುತ್ತವೆ.
ತಲ್ಮೂದ್‍ನ ವರದಿಯ ಪ್ರಕಾರ, ನಬೂಕಡ್ನಸರ್ ಬೈತುಲ್ ಮಕ್ದಿಸನ್ನು ಜಯಿಸಿದಾಗ ಹೈಕಲ್ ಸುಲೈಮಾನಿಗೆ ಪ್ರವೇಶಿಸಿ ಅಲ್ಲಿ ವಿಹಾರಕ್ಕೆ ಹೊರಟನು. ಬಲಿ ಪೀಠದ ಮುಂದೆ ಒಂದು ಗೋಡೆಯಲ್ಲಿ ಅವನಿಗೆ ಬಾಣದ ಗುರುತು ಕಾಣಿಸಿತು. ಇದೆಂತಹ ಗುರುತು  ಎಂದು ಅವನು ಯಹೂದಿಯರಲ್ಲಿ ವಿಚಾರಿಸಿದನು. ಅವರು ಹೇಳಿದರು: “ಇಲ್ಲಿ ನಾವು ಪ್ರವಾದಿ ಝಕರಿಯ್ಯಾರನ್ನು ಕೊಂದಿದ್ದೆವು. ಅವರು ನಮ್ಮ ಕೆಡುಕಿಗಾಗಿ ನಮ್ಮನ್ನು ಆಕ್ಷೇಪಿಸುತ್ತಿದ್ದರು. ಅವರ ಆಕ್ಷೇಪಗಳಿಂದ ರೋಸಿ ಹೋಗಿ ನಾವು ಅವರನ್ನು ಕೊಂದೇಬಿಟ್ಟೆವು.”
ಪ್ರವಾದಿ ಯರ್ಮಿಯಾ ಅವರ ಕುರಿತು ಬೈಬಲ್‍ನ ವರದಿಯ ಪ್ರಕಾರ ಇಸ್ರಾಈಲ್ ಜನಾಂಗದ ಅನೈತಿಕತೆಗಳು ಮಿತಿವಿೂರಿದಾಗ “ನಿಮ್ಮನ್ನು ಈ ಕೆಡುಕುಗಳಿಗಾಗಿ ಅಲ್ಲಾಹನು ಇತರ ಜನಾಂಗಗಳ ಮೂಲಕ ತುಳಿತಕ್ಕೆ ಗುರಿಪಡಿಸುವನು” ಎಂದು ಅವರನ್ನು ಯರ್ಮಿಯಾ  ಎಚ್ಚರಿಸಿದರು. ಆಗ ಅವರು “ಈ ವ್ಯಕ್ತಿ ಕಸದಿಗಳ ಜತೆ ಸೇರಿರುವನು ಮತ್ತು ದೇಶದ್ರೋಹಿ ಯಾಗಿರುವನು” ಎನ್ನುತ್ತಾ ಅವರನ್ನು ಸೆರೆಮನೆಗೆ ತಳ್ಳಿದರು.
ಪ್ರವಾದಿ ಈಸಾ(ಅ) ಅವರ ತಥಾಕಥಿತ ಶಿಲುಬೆಯ ಪ್ರಕರಣಕ್ಕಿಂತ ಎರಡೂವರೆ ವರ್ಷ ಮೊದಲು ಹ.ಯಹ್ಯಾ(ಅ) ಅವರ ಘಟನೆಯೂ ನಡೆದಿತ್ತು. ಹೆಚ್ಚಿನ ಯಹೂದಿಗಳು ಅವರನ್ನು ಪ್ರವಾದಿಯೆಂದು ತಿಳಿದಿದ್ದರು. ಅವರ ಪ್ರವಾದಿತ್ವದ ಮೇಲೆ ವಿಶ್ವಾಸವಿಡದವರು ಕೂಡಾ ಅವರು ತಮ್ಮ ಜನಾಂಗದ ಅತ್ಯಂತ ಸಜ್ಜನ ವ್ಯಕ್ತಿಯೆಂಬುದನ್ನಂತೂ ಒಪ್ಪುತ್ತಿದ್ದರು.  ಆದರೆ ಅವರು ಹಿರೋದೇಶ್ ಎಂಬ ಯಹೂದಿ ರಾಜನ ಆಸ್ಥಾನದಲ್ಲಿ ನಡೆಯುವ ಕೆಡುಕುಗಳ ಬಗ್ಗೆ ವಿಮರ್ಶಿಸಿದಾಗ ಅದು ಅವರಿಗೆ ಸಹ್ಯವಾಗಲಿಲ್ಲ. ಮೊದಲು ಅವರನ್ನು ಸೆರೆಮನೆಗೆ ಹಾಕಿದರು. ಅನಂತರ ರಾಜನ ಪ್ರೇಯಸಿಯ ಬೇಡಿಕೆಯಂತೆ ಅವರ ಶಿರಚ್ಛೇದ ಮಾಡಲಾಯಿತು.
ಯಹೂದಿಗಳ ಈ ಐತಿಹಾಸಿಕ ದಾಖಲೆಗಳನ್ನು ನೋಡಿದ ನಂತರ ಪ್ರವಾದಿ ಈಸಾ(ಅ) ಅವರನ್ನು ಅವರ ಹೇಳಿಕೆಯ ಪ್ರಕಾರ, ಶಿಲುಬೆಗೇರಿಸಿದ ನಂತರ ಎದೆತಟ್ಟಿ “ನಾವು ಅಲ್ಲಾಹನ ಪ್ರವಾದಿಯನ್ನು ವಧಿಸಿದ್ದೇವೆ” ಎಂದು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.

ಈಸಾರ(ಅ) ಆರೋಹಣ
ಮೇಲಿನ ಕುರ್‍ಆನ್ ವಚನದಿಂದ ಸ್ಪಷ್ಟವಾಗುವಂತೆ ಈಸಾ(ಅ) ಅವರು ಶಿಲುಬೆಗೇರಿ ಸಲ್ಪಡುವ ಮೊದಲೇ ಎತ್ತಲ್ಪಟ್ಟಿದ್ದರು. ಹ.ಈಸಾ(ಅ) ಅವರನ್ನು ಶಿಲುಬೆಗೇರಿಸಲಾಯಿ ತೆಂಬುದು ಯಹೂದಿಗಳ ಮತ್ತು ಕ್ರೈಸ್ತರ ಕೇವಲ ತಪ್ಪು ತಿಳುವಳಿಕೆಯಾಗಿದೆ. ಈ ಬಗ್ಗೆ ಪವಿತ್ರ ಕುರ್‍ಆನ್ ಮತ್ತು ಬೈಬಲ್‍ನಲ್ಲಿ ಬಂದಿರುವ ಉಲ್ಲೇಖಗಳನ್ನು ತುಲನಾತ್ಮಕವಾಗಿ ಅಭ್ಯಸಿಸಿದಾಗ ತಿಳಿದುಬರುವುದೇನೆಂದರೆ ಪಿಲಾತನ ಆಸ್ಥಾನದಲ್ಲಿ ಈಸಾ(ಅ) ಅವರನ್ನು ಹಾಜರುಪಡಿಸಲಾಗಿತ್ತು. ಆತ ಅವರಿಗೆ ಮರಣದಂಡನೆಯನ್ನು ಘೋಷಿಸಿದಾಗ ಮತ್ತು ಯಹೂದಿಗಳು ಈಸಾ(ಅ) ಅವರಂತಹ ಪುಣ್ಯಾತ್ಮನನ್ನು ಓರ್ವ ದರೋಡೆಕೋರನಿಗಿಂತಲೂ ಕೀಳೆಂದು ಭಾವಿಸಿ ತಮ್ಮ ಧರ್ಮವಿರೋಧವನ್ನು ಸಾಬೀತುಪಡಿಸಿದಾಗ ಅಲ್ಲಾಹನುಅವರನ್ನು ಪವಾಡಸದೃಶವಾಗಿ ಜೀವಂತ ಎತ್ತಿಕೊಂಡನು. ಅನಂತರ ಯಹೂದಿಗಳು ಶಿಲುಬೆಗೇರಿಸಿದ್ದು ಹ. ಈಸಾ(ಅ) ಅವರನ್ನಾಗಿರಲಿಲ್ಲ. ಆತ ಇನ್ನೊಬ್ಬ ವ್ಯಕ್ತಿಯಾಗಿದ್ದನು. ಅವನನ್ನು ಯಹೂದಿಗಳು ಏಕೆ ಈಸಾ(ಅ) ಎಂದು ಭಾವಿಸಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದರಿಂದ ಯಹೂದಿಗಳ ಅಪರಾಧದ ಭೀಕರತೆಯು ಏನೇನೂ ಕಡಿಮೆಯಾಗುವುದಿಲ್ಲ. ಏಕೆಂದರೆ ಆ ವ್ಯಕ್ತಿಯನ್ನು ಈಸಾ(ಅ) ಎಂದು ಭಾವಿಸಿಯೇ ಆತನಿಗೆ ಅವರು ಮುಳ್ಳಿನ ಕಿರೀಟವನ್ನು ತೊಡಿಸಿದ್ದರು. ಅವನ ಮುಖಕ್ಕೆ ಉಗುಳಿದ್ದರು. ಹೀನಾಯವಾಗಿ ಅವನನ್ನು ಶಿಲುಬೆಗೇರಿಸಿದ್ದರು. ಈ ಪ್ರಕರಣವು ಯಾವ ರೀತಿ ಅವರ ಪಾಲಿಗೆ ಸಂಶಯಾಸ್ಪದ ವಾಯಿತೆಂಬುದನ್ನು ತಿಳಿಯುವ ಯಾವ ಮೂಲವೂ ನಮ್ಮ ಬಳಿಯಿಲ್ಲ. ಈ ಬಗ್ಗೆ ಯಾವುದೇ ಖಚಿತ ಮಾಹಿತಿ ನಮಗೆ ಲಭ್ಯವಿಲ್ಲ. ಈಸಾ(ಅ) ಅವರು ಯಹೂದಿಗಳ ಕೈಯಿಂದ ಪಾರಾದ ನಂತರವೂ ಅವರಿಗೆ ಯಾವನೋ ಒಬ್ಬ ವ್ಯಕ್ತಿಯ ಬಗ್ಗೆ ಅವನು ಈಸಾ(ಅ) ಆಗಿದ್ದಾರೆಂಬ ಸಂಶಯ ಬಂದುದು ಮತ್ತು ಅವನನ್ನು ಗಲ್ಲಿಗೇರಿಸಿ ತಾವು ಈಸಾ(ಅ) ಅವರನ್ನು ಗಲ್ಲಿಗೇರಿಸಿರುವೆವೆಂದು ಅವರು ಭಾವಿಸಿದುದು ಏಕೆ ಎಂಬುದರ ಬಗ್ಗೆ ಕೇವಲ ಗುಮಾನಿ ಮತ್ತು ವದಂತಿಗಳ ಆಧಾರದಲ್ಲಿ ನಾವೇನೂ ಹೇಳುವ ಹಾಗಿಲ್ಲ.
ಕ್ರೈಸ್ತರಲ್ಲಿಯೂ ಈಸಾ(ಅ) ಅವರನ್ನು ಶಿಲುಬೆಗೇರಿಸಿದ ಘಟನೆಯ ಬಗ್ಗೆ ಯಾವುದೇ ಸರ್ವಸಮ್ಮತ ಅಭಿಪ್ರಾಯವಿಲ್ಲ. ಈ ಬಗ್ಗೆ ಹತ್ತಾರು ಹೇಳಿಕೆಗಳಿವೆ. ಇವುಗಳಿಂದ ಕ್ರೈಸ್ತರು ಈ ವಿಷಯದಲ್ಲಿ ಸಂಶಯಗ್ರಸ್ತರಾಗಿದ್ದಾರೆಂಬುದು ವ್ಯಕ್ತವಾಗುತ್ತದೆ. ಕೆಲವರ ಪ್ರಕಾರ ಗಲ್ಲಿಗೇರಿಸಲ್ಪಟ್ಟವರು ಈಸಾ(ಅ) ಆಗಿರಲಿಲ್ಲ. ಈಸಾ(ಅ) ಅವರಂತಹ ರೂಪವಿರುವ ಇನ್ನೊಬ್ಬ ವ್ಯಕ್ತಿಯಾಗಿದ್ದರು. ಆತನನ್ನು ಯಹೂದಿಗಳು ಮತ್ತು ರೋಮನ್ ಸೈನಿಕರು ಅಪಮಾನಕರ ರೀತಿಯಲ್ಲಿ ಗಲ್ಲಿಗೇರಿಸುವಾಗ ಈಸಾ(ಅ) ಅಲ್ಲೇ ಒಂದು ಕಡೆ ನಿಂತು ಅವರ ಈ ಮೂರ್ಖತನದ ಬಗ್ಗೆ ನಗುತ್ತಿದ್ದರು. ಇನ್ನು ಕೆಲವರ ಪ್ರಕಾರ, ಈಸಾ(ಅ) ಅವರನ್ನು ಶಿಲುಬೆಗಂತೂ ಏರಿಸಲಾಗಿತ್ತು. ಆದರೆ ಅವರು ಶಿಲುಬೆಯಲ್ಲಿ ಕೊನೆಯುಸಿರೆಳೆದಿರಲಿಲ್ಲ. ಅವರನ್ನು ಕೆಳಗಿಳಿಸಿದಾಗ ಅವರು ಜೀವಂತವಾಗಿದ್ದರು. ಮತ್ತೆ ಕೆಲವರ ಹೇಳಿಕೆಯಂತೆ, ಅವರು ಶಿಲುಬೆಯಲ್ಲೇ ಮೃತರಾದರು. ಆದರೆ ಅನಂತರ ಜೀವಂತರಾಗಿ ಸುಮಾರು ಹತ್ತು ಸಲ ತಮ್ಮ ಬೇರೆ ಬೇರೆ ಶಿಷ್ಯರೊಂದಿಗೆ ಭೇಟಿಯಾಗಿ ಮಾತನಾಡಿದರು. ಕೆಲವರ ಅಭಿಪ್ರಾಯದಂತೆ, ಈಸಾ(ಅ) ಅವರಿಗೆ ಶಿಲುಬೆಯಲ್ಲೇ ಮರಣ ಬಂದಿತ್ತು ಮತ್ತು ಅವರನ್ನು ದಫನ ಮಾಡಲಾಗಿತ್ತು. ಆದರೆ ಅವರಲ್ಲಿದ್ದ ದೇವಾತ್ಮವು ಆಕಾಶಕ್ಕೆ    ಏರಿಸಲ್ಪಟ್ಟಿತು. ಇನ್ನು ಕೆಲವರ ಪ್ರಕಾರ, ಈಸಾ(ಅ) ಅವರ ಮರಣದ ಬಳಿಕ ಅವರು ಶರೀರ ಸಮೇತ ಜೀವಂತರಾಗಿದ್ದರು ಮತ್ತು ಶರೀರ ಸಹಿತವೇ ಅವರನ್ನು ಆಕಾಶಕ್ಕೆ ಏರಿಸಲಾಯಿತು. ಕ್ರೈಸ್ತರ ಬಳಿ ಈ ಬಗ್ಗೆ ಖಚಿತವಾದ ತಿಳುವಳಿಕೆಯಿರುತ್ತಿದ್ದರೆ ಇಷ್ಟು ವಿಭಿನ್ನ ಅಭಿಪ್ರಾಯಗಳು ಅವರಲ್ಲಿ ವ್ಯಾಪಿಸುತ್ತಿರಲಿಲ್ಲವೆಂಬುದು ವ್ಯಕ್ತ.
ಕುರ್‍ಆನ್ ಈ ವಿಷಯದಲ್ಲಿ ಒಂದು ಮಾತನ್ನು ಸ್ಪಷ್ಟವಾಗಿ ಹೇಳಿದೆ. ಅದೇನೆಂದರೆ ಯಹೂದಿಗಳು ಈಸಾ(ಅ) ಅವರನ್ನು ವಧಿಸುವುದರಲ್ಲಿ ಸಫಲರಾಗಲಿಲ್ಲ ಮತ್ತು ಅಲ್ಲಾಹನು ಅವರನ್ನು ತನ್ನ ಕಡೆಗೆ ಎತ್ತಿಕೊಂಡನು. ಇನ್ನು ಎತ್ತಲ್ಪಟ್ಟದ್ದು ಹೇಗೆ ಎಂಬ ಪ್ರಶ್ನೆ. ಆ ಬಗ್ಗೆ ಕುರ್‍ಆನಿನಲ್ಲಿ ಯಾವುದೇ ವಿವರಣೆಯಿಲ್ಲ. ಅವರನ್ನು ಶರೀರ ಮತ್ತು ಆತ್ಮ ಸಹಿತ ಭೂಮುಖದಿಂದ ಎತ್ತಿ ಆಕಾಶಲೋಕದಲ್ಲೆಲ್ಲೋ ಕೊಂಡೊಯ್ಯಲಾಯಿತೆಂದು ಪವಿತ್ರ ಕುರ್‍ಆನ್ ಹೇಳುವುದಿಲ್ಲ. ಅದೇ ರೀತಿ ಅವರಿಗೆ ಸಹಜ ಮರಣ ನೀಡಿ ಕೇವಲ ಅವರ ಆತ್ಮವನ್ನು ಎತ್ತಿಕೊಳ್ಳಲಾಯಿತೆಂದೂ ಅದು ತಿಳಿಸುವುದಿಲ್ಲ. ಆದ್ದರಿಂದ ಕುರ್‍ಆನಿನ ಆಧಾರದಲ್ಲಿ ಈ ಎರಡರ ಪೈಕಿ ಯಾವುದನ್ನು ಸ್ವೀಕರಿಸುವಂತೆಯೂ ಇಲ್ಲ. ನಿರಾಕರಿಸು ವಂತೆಯೂ ಇಲ್ಲ. ಆದರೆ ಆರೋಹಣದ ರೂಪ ಯಾವುದಾಗಿದ್ದರೂ ಒಂದು ವಿಷಯ ಮಾತ್ರ ಸ್ಪಷ್ಟವಿದೆ. ಅಲ್ಲಾಹನು ಅವರ ಜತೆ ಅಸಾಮಾನ್ಯ ರೀತಿಯಲ್ಲಿ ವ್ಯವಹರಿಸಿದ್ದಾನೆ. ಈ ಅಸಾಮಾನ್ಯ ರೂಪವು ಈ ಕೆಳಗಿನ ಮೂರು ಅಂಶಗಳಿಂದ ವ್ಯಕ್ತವಾಗುತ್ತದೆ:

  1. ಈಸಾ(ಅ) ಅವರು ಶರೀರ ಮತ್ತು ಆತ್ಮ ಸಮೇತ ಎತ್ತಲ್ಪಟ್ಟರೆಂಬ ವಿಶ್ವಾಸವು ಕ್ರೈಸ್ತರಲ್ಲಿ ಹಿಂದಿನಿಂದಲೇ ಇತ್ತು. ಈ ನಂಬಿಕೆಯ ಕಾರಣದಿಂದಾಗಿಯೇ ಕ್ರೈಸ್ತರ ಒಂದು ದೊಡ್ಡ ವಿಭಾಗವು ಈಸಾ(ಅ) ಅವರ ದೇವತ್ವದ ಮೇಲೆ ವಿಶ್ವಾಸವಿರಿಸಿತ್ತು. ಆದರೂ ಪವಿತ್ರ ಕುರ್‍ಆನ್ ಅದನ್ನು ಸ್ಪಷ್ಟವಾಗಿ ನಿರಾಕರಿಸಲಿಲ್ಲ. ಬದಲಾಗಿ ಅದು ‘ರಫಅ’ ಎಂಬ ಪದವನ್ನೇ ಅದಕ್ಕೆ ಬಳಸಿದೆ. ಇದೇ ಅರ್ಥದ ಆರೋಹಣ ಎಂಬ ಪದವನ್ನೇ ಕ್ರೈಸ್ತರು ಈ ಘಟನೆಗಾಗಿ ಬಳಸುತ್ತಾರೆ. ಪ್ರಸ್ತುತ ಆರೋಹಣದ ನಂಬಿಕೆಯನ್ನು ಅಲ್ಲಗಳೆಯ ಬೇಕಾಗಿದ್ದರೆ ಪವಿತ್ರ ಕುರ್‍ಆನ್ ಇಂತಹ ಭಾಷೆಯನ್ನು ಬಳಸುತ್ತಿರಲಿಲ್ಲ.
  2. ಈಸಾ(ಅ) ಅವರ ಎತ್ತಲ್ಪಡುವಿಕೆಯು ಪ್ರತಿಯೊಬ್ಬ ವ್ಯಕ್ತಿಯ ಮರಣದ ಬಳಿಕ ನಡೆಯುವ ಸಾಮಾನ್ಯ ಎತ್ತಲ್ಪಡುವಿಕೆಯೇ ಆಗಿದ್ದರೆ ಅಥವಾ ಅದರ ಉದ್ದೇಶ ಅವರ ಸ್ಥಾನಮಾನವನ್ನು ಉನ್ನತಗೊಳಿಸುವುದು ಎಂದಾಗಿದ್ದರೆ ಈ ಹಿಂದೆ ಪವಿತ್ರ ಕುರ್‍ಆನಿನಲ್ಲಿ ಇದ್ರೀಸ್(ಅ) ಅವರ ಕುರಿತು ಬಳಸಿದಂತಹ ಪದಗಳನ್ನೇ ಅದಕ್ಕೂ ಬಳಸಲಾಗುತ್ತಿತ್ತು.
  3. “ದೇವರು ಅವನನ್ನು ಎತ್ತಿಕೊಂಡನು” ಎಂದು ಸಾಮಾನ್ಯವಾಗಿ ನಾವು ಮರಣ ಹೊಂದಿದವರ ಬಗ್ಗೆ ಹೇಳುವಂತೆಯೇ ಈ ಎತ್ತಿಕೊಳ್ಳುವಿಕೆಯಾಗಿದ್ದರೆ ಪ್ರಸ್ತುತ ಕುರ್‍ಆನ್ ವಚನದ ಕೊನೆಯಲ್ಲಿ “ಅಲ್ಲಾಹನು ಮಹಾ ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುತ್ತಾನೆ” ಎಂದು ಹೇಳುವ ಅಗತ್ಯವೇ ಇರಲಿಲ್ಲ. ಅಲ್ಲಾಹನ ಮಹಾನ್ ಸಾಮರ್ಥ್ಯ ಮತ್ತು ಅಸಾಮಾನ್ಯ ಯುಕ್ತಿಯ ಮೂಲಕ ನಡೆದ ಘಟನೆಯ ಕುರಿತು ಮಾತ್ರ ಇಂತಹ ಮಾತು ಸಂದರ್ಭೋಚಿತವೆನಿಸುತ್ತದೆ.

ಈಸಾರ(ಅ) ಪುನರಾಗಮನ
ಪ್ರವಾದಿ ಈಸಾ(ಅ) ಅವರು ಇಹಲೋಕಕ್ಕೆ ಪುನಃ ಅವತರಿಸಿ ಬರುವ ಕುರಿತು ಪವಿತ್ರ ಕುರ್‍ಆನಿನಲ್ಲಿ ಯಾವುದೇ ಉಲ್ಲೇಖವಿಲ್ಲ. ಆದರೆ ಅವರು ಶಿಲುಬೆಗೇರಿಸಲ್ಪಡಲಿಲ್ಲ, ಕೊಲ್ಲಲ್ಪಡಲಿಲ್ಲ ಮತ್ತು ನಿಧನ ಹೊಂದಲಿಲ್ಲ ಎಂದು ಸ್ಪಷ್ಟವಾಗಿ ಸಾರುತ್ತದೆ. ಅವರನ್ನು ಅಲ್ಲಾಹನು ಎತ್ತಿಕೊಂಡನೆಂದೂ ಕುರ್‍ಆನ್ ಹೇಳುತ್ತದೆ. ಆದ್ದರಿಂದ ಅವರು ಸಹಜ ಮರಣಕ್ಕೆ ಮುಂಚಿತವಾಗಿ ಪುನಃ ಈ ಭೂಮಿಗೆ ಆಗಮಿಸಲಿರುವರೆಂದು ಪ್ರವಾದಿ ಮುಹಮ್ಮದ್(ಸ) ಅವರು ತಮ್ಮ ಅನೇಕ ವಚನಗಳ ಮೂಲಕ ಸ್ಪಷ್ಟಪಡಿಸಿರುವರು. ಅವುಗಳ ಪೈಕಿ ಕೆಲವನ್ನು ಇಲ್ಲಿ ಉಲ್ಲೇಖಿಸಲಾಗುತ್ತಿದೆ.:
“ನನ್ನ ಪ್ರಾಣವು ಯಾರ ಕೈಯಲ್ಲಿದೆಯೋ ಅವನ ಆಣೆ, ಮರ್ಯಮರ ಪುತ್ರ ಖಂಡಿತವಾಗಿಯೂ ನಿಮ್ಮ ಮಧ್ಯೆ ನ್ಯಾಯಪೂರ್ಣ ಆಡಳಿತಗಾರನಾಗಿ ಇಳಿಯುವರು. ಅನಂತರ ಅವರು ಶಿಲುಬೆಗಳನ್ನು ಕೆಡಹುವರು, ಹಂದಿಯನ್ನು ವಧಿಸುವರು, ಯುದ್ಧವನ್ನು ಕೊನೆ ಗೊಳಿಸುವರು, (ಇನ್ನೊಂದು ವರದಿಯಲ್ಲಿ ಯುದ್ಧದ ಬದಲು ಜಿಝಿಯಾದ ಪ್ರಸ್ತಾಪವಿದೆ. ಅರ್ಥಾತ್ ಜಿಝಿಯಾವನ್ನು ಕೊನೆಗೊಳಿಸುವರು) ಅಂದು ಸಂಪತ್ತು ಎಷ್ಟು ಹೇರಳವಾಗಿರುವುದೆಂದರೆ ಅದನ್ನು ಸ್ವೀಕರಿಸುವವನು ಯಾರೂ ಇರಲಾರನು ಮತ್ತು ಜನರ ಪಾಲಿಗೆ ಅಲ್ಲಾಹನ ಮುಂದೆ ಒಂದು ಸಾಷ್ಟಾಂಗವೆರಗುವುದು ಈ ಲೋಕ ಮತ್ತು ಅದರ ಎಲ್ಲ ಸಂಪತ್ತಿಗಿಂತಲೂ ಉತ್ತಮವೆನಿಸುವುದು.” (ವರದಿ: ಹ.ಅಬೂ ಹುರೈರಾ(ರ)- ಬುಖಾರಿ, ಮುಸ್ಲಿಮ್, ತಿರ್ಮಿದಿ, ಮುಸ್ನದ್ ಅಹ್ಮದ್)

ಈ ಪ್ರವಾದಿ ವಚನದಲ್ಲಿ ಶಿಲುಬೆಯನ್ನು ಕೆಡಹುವುದು ಮತ್ತು ಹಂದಿಯನ್ನು ಕೊಲ್ಲುವುದೆಂದರೆ ಕ್ರೈಸ್ತ ಮತವು ಒಂದು ಪ್ರತ್ಯೇಕ ಧರ್ಮವೆಂಬ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಕಳಕೊಳ್ಳುವುದೆಂದಾಗಿದೆ. ಏಕೆಂದರೆ ಕ್ರೈಸ್ತ ಧರ್ಮದ ಅಸ್ತಿವಾರವೇ “ಅಲ್ಲಾಹನು ತನ್ನ ಏಕೈಕ ಪುತ್ರನಾದ ಈಸಾರನ್ನು(ಅ) ಶಿಲುಬೆಗೇರಿಸಿ ‘ಶಾಪ’ದ ಮರಣ ನೀಡುವ  ಮೂಲಕ ಅವರನ್ನು ಮನುಷ್ಯರ ಪಾಪಗಳಿಗೆ ಪರಿಹಾರವಾಗಿ ಮಾಡಿದನು” ಎಂಬ ನಂಬಿಕೆಯ ಮೇಲಿದೆ. ಅಲ್ಲಾಹನ ಪ್ರವಾದಿಗಳ ಸಮುದಾಯಗಳ ಪೈಕಿ ಕ್ರೈಸ್ತರ ವೈಶಿಷ್ಟ್ಯವೇನೆಂದರೆ ಅವರು ಕೇವಲ ನಂಬಿಕೆಯೊಂದನ್ನು ಉಳಿಸಿ ಅಲ್ಲಾಹನ ಧರ್ಮದ ಇತರೆಲ್ಲ ವಿಷಯಗಳನ್ನೂ ಅಳಿಸಿಬಿಟ್ಟರು. ಎಲ್ಲಿಯ ವರೆಗೆಂದರೆ ಎಲ್ಲ ಪ್ರವಾದಿಗಳ ಧರ್ಮಶಾಸ್ತ್ರಗಳಲ್ಲೂ ನಿಷಿದ್ಧವಾಗಿದ್ದಂತಹ ಹಂದಿಯನ್ನು ಕೂಡಾ ಅವರು ತಮ್ಮ  ಪಾಲಿಗೆ ಧರ್ಮಸಮ್ಮತ ಗೊಳಿಸಿಕೊಂಡರು.
ಪ್ರಸ್ತುತ ಪ್ರವಾದಿ ವಚನದ ಪ್ರಕಾರ ಈಸಾ(ಅ) ಅವರು ಬಂದು, ತಾನು ಅಲ್ಲಾಹನ ಪುತ್ರನಲ್ಲ, ಶಿಲುಬೆಯಲ್ಲಿ ಪ್ರಾಣಬಿಡಲಿಲ್ಲ ಹಾಗೂ ತಾನು ಮನುಷ್ಯರ ಪಾಪಗಳ ಪ್ರಾಯಶ್ಚಿತ್ತವಾಗಲಿಲ್ಲವೆಂದು ಸಾರುವರು. ಆಗ ಕ್ರೈಸ್ತರ ವಿಶ್ವಾಸಕ್ಕೆ ಯಾವುದೇ ತಳಹದಿ ಉಳಿದಿರಲಾರದು. “ನಾನು ನನ್ನ ಅನುಯಾಯಿಗಳ ಪಾಲಿಗೆ ಹಂದಿಯನ್ನು ಧರ್ಮಬದ್ಧ ಗೊಳಿಸಿರಲಿಲ್ಲ ಅಥವಾ ಅವರನ್ನು ಧರ್ಮಶಾಸ್ತ್ರದ ಅನುಸರಣೆಯಿಂದ ಮುಕ್ತಗೊಳಿಸಿರಲಿಲ್ಲ” ಎಂದು ಈಸಾ(ಅ) ಅವರು ಸಾರಿ ಹೇಳುವಾಗ ಕ್ರೈಸ್ತ ಧರ್ಮದ ಈ ದ್ವಿತೀಯ ವೈಶಿಷ್ಟ್ಯವೂ ಕೊನೆಗೊಳ್ಳುವುದು.
ಪ್ರವಾದಿ ಈಸಾ(ಅ) ಅವರ ಪುನರಾಗಮನದ ಬಳಿಕ ವಿಭಿನ್ನ ಸಮುದಾಯಗಳ ಮಧ್ಯೆ ಇದ್ದಂತಹ ಭಿನ್ನತೆಗಳು ಕೊನೆಗೊಳ್ಳುವುವು. ಎಲ್ಲರೂ ಒಂದೇ ಮುಸ್ಲಿಮ್ ಸಮುದಾಯವಾಗಿ ಮಾರ್ಪಡುವರು. ಆದ್ದರಿಂದ ಅಲ್ಲಿ ಯುದ್ಧವಾಗಲಿ ಇಸ್ಲಾವಿೂ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳ ಮೇಲೆ ವಿಧಿಸುವಂತಹ ರಕ್ಷಣಾ ಕರವಾದ ಜಿಝಿಯಾ ಆಗಲಿ ಉಳಿಯಲಾರದೆಂದೂ ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ.
ಇನ್ನೊಂದು ಪ್ರವಾದಿ ವಚನ ಹೀಗಿದೆ:
“ಈಸಾ(ಅ) ಅವರ ಪುನರಾಗಮನದ ತನಕ ಪುನರುತ್ಥಾನದ ಘಳಿಗೆ ಬರಲಾರದು.” (ವರದಿ: ಅಬೂ ಹುರೈರಾ(ರ) ಬುಖಾರಿ, ಇಬ್ನುಮಾಜಃ)
“ನಮ್ಮ ಮಧ್ಯೆ ಮರ್ಯಮರ ಪುತ್ರ ಇಳಿದು ಬಂದಾಗ ಮತ್ತು ನಿಮ್ಮ ಇಮಾಮ್ ಆಗಲು ನಿಮ್ಮ ಪೈಕಿಯೇ ಒಬ್ಬರಾದಾಗ ನಿಮಗೆ ಹೇಗಾಗಬಹುದು?” (ವರದಿ: ಹ. ಅಬೂ ಹುರೈರಾ(ರ)- ಬುಖಾರಿ, ಮುಸ್ಲಿಮ್, ಅಹ್ಮದ್)
ಅರ್ಥಾತ್ ಪ್ರವಾದಿ ಈಸಾ(ಅ) ಅವರು ನಮಾಝ್‍ನ ನೇತೃತ್ವ ವಹಿಸಲಾರರು. ಬದಲಾಗಿ ಮುಸ್ಲಿಮರಲ್ಲಿರುವ ಇಮಾಮರೇ ಅವರ ನಮಾಝ್‍ನ ನಾಯಕತ್ವ ವಹಿಸುವರು. ಇದರಿಂದ ತಿಳಿದುಬರುವುದೇನೆಂದರೆ ಮರ್ಯಮರ ಪುತ್ರ ಹ.ಈಸಾ(ಅ) ಅವರು ಓರ್ವ ಪ್ರವಾದಿಯೆಂಬ ನೆಲೆಯಲ್ಲಿ ಆಗಮಿಸಿ ಜನತೆಯ ನಾಯಕತ್ವವನ್ನು ವಹಿಸಲಾರರು. ಬದಲಾಗಿ ಅವರು ಅಂತಿಮ ಪ್ರವಾದಿ ಮುಹಮ್ಮದ್(ಸ) ಅವರ ಓರ್ವ ಅನುಯಾಯಿಯಾಗಿ ಆಗಮಿಸುವರು.
ಮತ್ತೊಂದು ಪ್ರವಾದಿ ವಚನದಲ್ಲಿ ಈ ರೀತಿಯಿದೆ:
“ಮರ್ಯಮರ ಪುತ್ರ ಈಸಾ(ಅ) ಅವರು ಇಳಿದು ಬರುವರು. ಅನಂತರ ಅವರು ಹಂದಿಯನ್ನು ಕೊಲ್ಲುವರು ಮತ್ತು ಶಿಲುಬೆಯನ್ನು ಅಳಿಸುವರು. ಅವರಿಗಾಗಿ ನಮಾಝನ್ನು ಜಮ್‍ಅï (ಸಂಯುಕ್ತ) ಗೊಳಿಸಲಾಗುವುದು. ಅವರು ಎಷ್ಟು ಸಂಪತ್ತು ವಿತರಿಸುವರೆಂದರೆ ಅದನ್ನು ಸ್ವೀಕರಿಸಲು ಯಾರೂ ಇರಲಾರರು. ಅವರು ಕಪ್ಪವನ್ನು ಅನೂರ್ಜಿತಗೊಳಿಸುವರು. ರೌಹಾ ಎಂಬಲ್ಲಿ (ಮದೀನಾದಿಂದ 35 ಮೈಲು ದೂರದ ಒಂದು ಪ್ರದೇಶ) ತಂಗಿ ಅಲ್ಲಿಂದ ಅವರು ಹಜ್ಜ್ ಅಥವಾ ಉಮ್ರಾ ಮಾಡುವರು. ಅಥವಾ ಎರಡನ್ನೂ ಸಂಯುಕ್ತವಾಗಿ ನಿರ್ವಹಿಸುವರು- ಈ ಪೈಕಿ ಪ್ರವಾದಿ(ಸ) ಏನು ಹೇಳಿದರೆಂದು ವರದಿಗಾರರಿಗೆ ಸಂಶಯವಿದೆ.” (ವರದಿ: ಹ.ಅಬೂ ಹುರೈರಾ(ರ)- ಮುಸ್ನದ್ ಅಹ್ಮದ್)
ಒಂದು ಸಂದರ್ಭದಲ್ಲಿ ‘ದಜ್ಜಾಲ್’ನ ಬಂಡಾಯದ ಕುರಿತು ಪ್ರಸ್ತಾವಿಸಿದ ಬಳಿಕ ಪ್ರವಾದಿ(ಸ) ಈ ರೀತಿ ಹೇಳಿದ್ದರು:
“ಆ ಸಂದರ್ಭದಲ್ಲಿ ಮುಸ್ಲಿಮರು ಅವನೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಾ ಪಂಕ್ತಿಗಳನ್ನು ಕಟ್ಟುತ್ತಿರುವರು- ಮತ್ತು ನಮಾಝ್‍ಗಾಗಿ ‘ಇಕಾಮತ್’ ಹೇಳಿ ಆಗಿರುವುದು. ಆಗ ಮರ್ಯಮರ ಪುತ್ರ ಈಸಾ(ಅ) ಅವತರಿಸುವರು ಮತ್ತು ನಮಾಝ್‍ನಲ್ಲಿ ಮುಸ್ಲಿಮರ ನೇತೃತ್ವ ವಹಿಸುವರು. ಅಲ್ಲಾಹನ ಶತ್ರು (ದಜ್ಜಾಲನು) ಅವರನ್ನು ಕಂಡ ಕೂಡಲೇ ನೀರಿನಲ್ಲಿ ಉಪ್ಪು ಕರಗುವಂತೆ ಕರಗಿಹೋಗುವನು. ಆತನನ್ನು ಅವನಷ್ಟಕ್ಕೇ ಬಿಟ್ಟರೆ ಅವನು ತಾನಾಗಿಯೇ ಕರಗಿ ಸತ್ತು ಹೋಗುವನು. ಆದರೆ ಅಲ್ಲಾಹನು ಅವನ ಕೊಲೆಯನ್ನು ಈಸಾ(ಅ) ಅವರ ಕೈಯಿಂದಲೇ ಮಾಡಿಸುವನು. ತಮ್ಮ ಈಟಿಯಲ್ಲಿ ಅವನ ರಕ್ತವನ್ನುಅವರು ಮುಸ್ಲಿಮರಿಗೆ ತೋರಿಸುವರು.” (ವರದಿ: ಅಬೂ ಹುರೈರಾ(ರ) ಮಿಷ್ಕಾತ್-ಮುಸ್ಲಿಮ್)
ಒಮ್ಮೆ ಪ್ರವಾದಿ(ಸ) ಈ ರೀತಿ ಹೇಳಿದರು-
“ನನ್ನ ಮತ್ತು ಅವರ (ಅರ್ಥಾತ್ ಈಸಾ(ಅ)) ಮಧ್ಯೆ ಯಾವ ಪ್ರವಾದಿಯೂ ಇಲ್ಲ. ಮತ್ತು ಅವರು ಇಳಿಯುವವರಿದ್ದಾರೆ. ನೀವು ಅವರನ್ನು ಕಂಡಾಗ ಗುರುತಿಸಬೇಕು. ಅವರು ಓರ್ವ ಸಾಮಾನ್ಯ ಎತ್ತರದ ವ್ಯಕ್ತಿ. ಅವರು ಕೆಂಪು ಮಿಶ್ರಿತ ಗೌರ ವರ್ಣದವರಾಗಿದ್ದಾರೆ. ಅವರು ಹಳದಿಬಣ್ಣದ ಎರಡು ವಸ್ತ್ರಗಳನ್ನು ಧರಿಸಿರುವರು. ಅವರ ತಲೆಕೂದಲಿನಿಂದ ನೀರು ತೊಟ್ಟಿಕ್ಕುವಂತಿರುವುದು. ವಸ್ತುತಃ ಅವು ಒದ್ದೆಯಾಗಿರಲಾರವು. ಅವರು ಇಸ್ಲಾಮಿಗಾಗಿ ಜನರೊಂದಿಗೆ ಯುದ್ಧ ಮಾಡುವರು. ಶಿಲುಬೆಯನ್ನು ಧ್ವಂಸ ಮಾಡುವರು. ಹಂದಿಯನ್ನು ಕೊಲ್ಲುವರು. ಜಿಝಿಯಾವನ್ನು (ರಕ್ಷಣಾ ತೆರಿಗೆ) ಕೊನೆಗೊಳಿಸುವರು. ಅವರ ಕಾಲದಲ್ಲಿ ಅಲ್ಲಾಹನು ಇಸ್ಲಾಮಿನ ಹೊರತು ಇತರೆಲ್ಲಾ ಸಮುದಾಯಗಳನ್ನೂ ಅಳಿಸುವನು. ಅವರು ಮಸೀಹ್ ದಜ್ಜಾಲ್‍ನನ್ನು ಸಂಹರಿಸುವರು. ಭೂಮುಖದ ಮೇಲೆ ನಲ್ವತ್ತು ವರ್ಷಗಳ ಕಾಲ ಇರುವರು. ಅನಂತರ ಅವರು ನಿಧನ ಹೊಂದುವರು. ಮುಸ್ಲಿಮರು ಅವರ ಜನಾಝ ನಮಾಝ್ ನೆರವೇರಿಸುವರು.” (ವರದಿ: ಅಬೂ ಹುರೈರಾ(ರ)- ಅಬೂ ದಾವೂದ್, ಮುಸ್ನದ್ ಅಹ್ಮದ್)
“ಅನಂತರ ಈಸಾ ಬಿನ್ ಮರ್ಯಮ್(ಅ) ಅವತರಿಸುವರು. ‘ಬನ್ನಿ ತಾವು ನಮಾಝ್ ಮಾಡಿಸಿರಿ ಎಂದು ಮುಸ್ಲಿಮರ ಅವಿೂರ್(ನಾಯಕ) ಅವರಲ್ಲಿ ಹೇಳುವರು. ಆದರೆ ಅವರು ಹೇಳುವರು’ ಇಲ್ಲ. ನೀವೇ ನಿಮ್ಮ ಅವಿೂರ್ ಆಗಿರುವಿರಿ. (ಅದಾರ್sತ್ ನಿಮ್ಮ ನಾಯಕನು ನಿಮ್ಮಿಂದಲೇ ಆಗಿರಬೇಕು)- ಹೀಗೆ ಅವರು, ಅಲ್ಲಾಹನು ಈ ಸಮುದಾಯಕ್ಕೆ ನೀಡಿರುವ ಗೌರವದ ಕಾರಣದಿಂದ ಹೇಳುವರು.” (ವರದಿ: ಜಾಬಿರ್ ಬಿನ್ ಅಬ್ದುಲ್ಲಾ(ರ)- ಮುಸ್ಲಿಮ್, ಮುಸ್ನದ್ ಅಹ್ಮದ್)
ಇನ್ನೊಂದು ಪ್ರವಾದಿ ವಚನದಲ್ಲಿ ಹೀಗಿದೆ:
“ಮರ್ಯಮರ ಪುತ್ರ(ಅ) ದಜ್ಜಾಲನನ್ನು ಉದ್ದ್‍ನ (ಇಸ್ರೇಲ್‍ನ ರಾಜಧಾನಿ ತೆಲ್ಅವೀವ್‍ನಿಂದ ಕೆಲವು ಮೈಲಿಗಳ ದೂರದಲ್ಲಿರುವ ಒಂದು ಸ್ಥಳ. ಇಲ್ಲಿ ದೊಡ್ಡ ವಿಮಾನ ನಿಲ್ದಾಣವೂ ಇದೆ) ದ್ವಾರದಲ್ಲಿ ವಧಿಸುವರು.” (ವರದಿ: ಮುಜಮ್ಮಿಲ್ ಬಿನ್ ಜಾರಿಯಃ ಅನ್ಸಾರಿ- ಮುಸ್ನದ್ ಅಹ್ಮದ್)

ಪ್ರವಾದಿ ಮುಹಮ್ಮದ್‍ರ(ಸ) ಆಗಮನದ ಕುರಿತು ಈಸಾರ(ಅ) ಭವಿಷ್ಯ ನುಡಿ
ಪ್ರವಾದಿ ಮುಹಮ್ಮದ್(ಸ) ಅವರ ಆಗಮನದ ಕುರಿತು ಪ್ರವಾದಿ ಈಸಾ(ಅ) ಅವರು ಸ್ಪಷ್ಟವಾಗಿ ಭವಿಷ್ಯ ನುಡಿದಿದ್ದರೆಂದು ಪವಿತ್ರ ಕುರ್‍ಆನ್ ಹೇಳುತ್ತದೆ:
“ಮತ್ತು ಮರ್ಯಮರ ಪುತ್ರ ಈಸಾ ಹೇಳಿದ ಮಾತನ್ನು ಸ್ಮರಿಸಿರಿ, ಬನೀಇಸ್ರಾಈಲರೇ, ನಾನು ನಿಮ್ಮ ಕಡೆಗೆ ಅಲ್ಲಾಹನಿಂದ ಕಳುಹಿಸಲ್ಪಟ್ಟ ಸಂದೇಶವಾಹಕನಾಗಿರುತ್ತೇನೆ. ನಾನು, ನನಗಿಂತ ಮೊದಲು ಬಂದಿರುವ ತೌರಾತನ್ನು ದೃಢೀಕರಿಸುವವನು ಮತ್ತು ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ರಸೂಲರ ಕುರಿತು ಸುವಾರ್ತೆ ನೀಡುವವನಾಗಿದ್ದೇನೆ.”   (61:6)
ಯೇಸುವಿನ ಆಗಮನದ ವೇಳೆ ಇಸ್ರಾಈಲ್ ಸಂತತಿಗಳು ಮೂವರು ವ್ಯಕ್ತಿಗಳನ್ನು ನಿರೀಕ್ಷಿಸುತ್ತಿದ್ದರು.
1) ಯೇಸ
2) ಏಲಿಯಾ (ಅದಾರ್sತ್ ಪ್ರವಾದಿ ಇಲ್ಯಾಸ್ ಅವರ ಪುನರಾಗಮನ)
3) ‘ಆ ಪ್ರವಾದಿ.’
“ಯೋಹಾನನು ಕೊಟ್ಟ ಸಾಕ್ಷಿ ಏನೆಂದರೆ- ಯಹೂದಿಯರು ಜೆರೂಸಲೇಮಿನಿಂದ  ಯಾಜಕರನ್ನೂ ಲೇವಿಯರನ್ನೂ ಅವನ ಬಳಿಗೆ ಕಳುಹಿಸಿ- ನೀನು ಯಾರೆಂದು ಕೇಳಿದ್ದಕ್ಕೆ ಅವನು ಮರೆ ಮಾಚದೆ- ನಾನು ಕ್ರಿಸ್ತನಲ್ಲವೆಂದು ಎಲ್ಲರ ಮುಂದೆ ಹೇಳಿದನು. ಹಾಗಾದರೆ ನೀನು ಯಾರು? ಏಲಿಯನೋ ಎಂದು ಅವರು ಕೇಳಲು ‘ಅಲ್ಲ’ವೆಂದನು. ನೀನು ಬರಬೇಕಾದ ಆ ಪ್ರವಾದಿಯೇ? ಅಂದದ್ದಕ್ಕೂ ‘ಅಲ್ಲ’ವೆಂದನು. ಆಗ ಅವರು ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳಬೇಕಲ್ಲಾ, ನಿನ್ನ ವಿಷಯವಾಗಿ ಏನು ಹೇಳುತ್ತೀ  ಎಂದು ಕೇಳಲು ಅವನು- ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ ಎಂಬುದಾಗಿ ಯೆಶಾಯ ಪ್ರವಾದಿಯು ಹೇಳಿದನಷ್ಟೆ. ಆ ಶಬ್ದವೇ ನಾನು ಎಂದು ಉತ್ತರಕೊಟ್ಟನು. ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದು- ನೀನು ಕ್ರಿಸ್ತನೂ ಏಲಿಯನೂ ಆ ಪ್ರವಾದಿಯೂ ಅಲ್ಲವಾದರೆ ಸ್ನಾನ ಮಾಡಿಸುವುದೇನು?”  (ಯೋಹಾನನ ಸುವಾರ್ತೆ, 1:19-25)
ಇಸ್ರಾಈಲ್ ಜನಾಂಗದವರು ಹ.ಈಸಾ(ಅ) ಮತ್ತು ಹ.ಇಲ್ಯಾಸ್‍ರ ಹೊರತು ಇನ್ನೊಬ್ಬ ಪ್ರವಾದಿಯ ನಿರೀಕ್ಷೆಯಲ್ಲಿದ್ದರು ಮತ್ತು ಅವರು ಯಹ್ಯಾ(ಅ) ಆಗಿರಲಿಲ್ಲ ಎಂದು ಮೇಲಿನ ವಚನಗಳಿಂದ ಸ್ಪಷ್ಟವಾಗುತ್ತದೆ. ‘ಆ ಪ್ರವಾದಿಯ’ ಆಗಮನದ ನಂಬಿಕೆಯು ಇಸ್ರಾಈಲ್ ಜನಾಂಗದಲ್ಲಿ ಜನಜನಿತವಾಗಿತ್ತು. ಆದ್ದರಿಂದ ಕೇವಲ ‘ಆ ಪ್ರವಾದಿ’ ಎಂದರೆ ಅವರಿಗೆ ತಿಳಿದು ಬಿಡುತ್ತಿತ್ತು. ‘ತೌರಾತ್’ನಲ್ಲಿ ಸುವಾರ್ತೆ ನೀಡಲಾಗಿರುವ ‘ಆ ಪ್ರವಾದಿ’ ಎಂದು ಹೇಳುವ ಅಗತ್ಯವೂ ಇರಲಿಲ್ಲ. ‘ಆ ಪ್ರವಾದಿ’ ಬರುವುದು ಅವರ ಮಟ್ಟಿಗೆ ಖಚಿತವಾಗಿತ್ತು. ಯಹ್ಯಾ(ಅ) ಅವರಲ್ಲಿ ಈ ಪ್ರಶ್ನೆಗಳನ್ನು ಕೇಳಿದಾಗ ಅವರು ಇನ್ನು ಯಾವ ಪ್ರವಾದಿಯೂ ಬರಲಿಕ್ಕಿಲ್ಲವೆಂದು ಹೇಳಿ ನೀವು ಯಾವ ಪ್ರವಾದಿಯ   ಕುರಿತು ಕೇಳುತ್ತಿರುವಿರೆಂದು ಹೇಳಿರಲಿಲ್ಲ.
ಇನ್ನು ಯೋಹಾನನ ಸುವಾರ್ತೆಯಲ್ಲಿ ಬಂದಿರುವ ಭವಿಷ್ಯನುಡಿಗಳ ಕುರಿತು ನೋಡೋಣ:
“ಈಗ ನಾನು ತಂದೆಯನ್ನು ಕೇಳಿಕೊಳ್ಳುವೆನು. ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾಕಾಲ ನಿಮ್ಮ ಸಂಗಡ ಇರುವುದಕ್ಕೆ ಕೊಡುವನು. ‘ಆ ಸಹಾಯಕನು’ ಯಾರೆಂದರೆ ಸತ್ಯದ ಆತ್ಮನೇ. ಲೋಕವು ಆತನನ್ನು ನೋಡದೆಯೂ ತಿಳಿಯದೆಯೂ ಇರುವುದರಿಂದ ಆತನನ್ನು ಹೊಂದಲಾರದು. ನೀವು ಆತನನ್ನು ಬಲ್ಲಿರಿ! ಹೇಗೆಂದರೆ ನಿಮ್ಮ ಬಳಿಯಲ್ಲಿ ವಾಸಮಾಡುತ್ತಾನೆ ಮತ್ತು ನಿಮ್ಮೊಳಗೆ ಇರುವನು.”
(ಯೋಹಾನನ ಸುವಾರ್ತೆ- 14:16-17)
“ಈ ಮಾತುಗಳನ್ನು ನಾನು ಇನ್ನೂ ನಿಮ್ಮ ಬಳಿಯಲ್ಲಿರುವಾಗ ನಿಮಗೆ ಹೇಳಿದ್ದೇನೆ. ಆದರೆ ‘ಆ ಸಹಾಯಕನು’ ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನೂ ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.” (ಯೋಹಾನನ ಸುವಾರ್ತೆ, 14:25-26)
“ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳನ್ನಾಡುವುದಿಲ್ಲ. ಯಾಕೆಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂದಪಟ್ಟದ್ದು ಯಾವುದೊಂದೂ ನನ್ನಲ್ಲಿಲ್ಲ.” (ಯೋಹಾನನ ಸುವಾರ್ತೆ, 14:3ಂ)
“ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು, ಬಂದಾಗ ಆತನು ನನ್ನನ್ನು ಕುರಿತು ಸಾಕ್ಷಿ ಹೇಳುವನು.” (ಯೋಹಾನನ ಸುವಾರ್ತೆ, 15:26)
“ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಕೇಳಿರಿ! ನಾನು ಹೋಗುವುದು ನಿಮಗೆ ಹಿತಕರವಾಗಿದೆ. ಹೇಗೆಂದರೆ ನಾನು ಹೋಗದಿದ್ದರೆ ‘ಆ ಸಹಾಯಕನು’ ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ.”  (ಯೋಹಾನನ ಸುವಾರ್ತೆ, 16:7)
“ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡೆಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು. ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುತ್ತಾ ನನ್ನನ್ನೇ ಮಹಿಮೆ ಪಡಿಸುವನು. ತಂದೆಗೆ ಇರುವುದೆಲ್ಲಾ ನನ್ನದು. ಆದ್ದರಿಂದಲೇ ನನ್ನದರೊಳಗಿಂದ ತೆಗೆದು ಕೊಂಡು ನಿಮಗೆ ತಿಳಿಸುವನೆಂದು ಹೇಳಿದೆನು.” (ಯೋಹಾನನ ಸುವಾರ್ತೆ, 16:12-15)
ಈ ಭವಿಷ್ಯನುಡಿಗಳ ಅರ್ಥವನ್ನು ನಿರ್ಣಯಿಸುವುದಕ್ಕಿಂತ ಮುಂಚೆ ಒಂದು  ವಿಷಯ ತಿಳಿದಿರಬೇಕು. ಈಸಾ(ಅ) ಮತ್ತು ಅವರ ಸಮಕಾಲೀನ ಪೆsಲೆಸ್ತೀನ್ ನಿವಾಸಿಗಳ ಭಾಷೆ ಆರಾಮಿಕ್‍ನ ಆಡುಭಾಷೆಯಾದ ಸಿರಿಯಾಕ್ ಆಗಿತ್ತು. ಈಸಾ(ಅ) ಅವರ ಜನನಕ್ಕಿಂತ ಎರಡೂವರೆ ಶತಮಾನಗಳ ಹಿಂದೆಯೇ ಸೆಲೂಕಿಗಳ ಆಡಳಿತ ಕಾಲದಲ್ಲಿಯೇ ಆ ಪ್ರದೇಶದಿಂದ ಹಿಬ್ರೂಭಾಷೆ ಅಳಿದು ಹೋಗಿ ಅದರ ಸ್ಥಾನವನ್ನು ಸಿರಿಯಾಕ್ ಭಾಷೆಯು ಪಡೆದಿತ್ತು. ಸೆಲೂಕಿ ಮತ್ತು ರೋಮನ್ ಸಾಮ್ರಾಜ್ಯಗಳ ಪ್ರಭಾವದಿಂದ ಗ್ರೀಕ್ ಭಾಷೆಯೂ ಈ ಪ್ರದೇಶಕ್ಕೆ ತಲುಪಿತ್ತು. ಆದರೆ ಅದು ಕೇವಲ ಆಡಳಿತ ವರ್ಗ ಮತ್ತು ಅವರ ನಿಕಟವರ್ತಿಗಳಿಗೆ ಸೀಮಿತವಾಗಿತ್ತು.  ಸಾಮಾನ್ಯ ಜನರಿಗೆ ಆ ಭಾಷೆ ತಿಳಿದಿರಲಿಲ್ಲ. ಆದ್ದರಿಂದಲೇ ಕ್ರಿ.ಶ. 70ರಲ್ಲಿ ಜೆರೂಸಲೇಮ್ ಜಯಿಸಿದ ಬಳಿಕ ರೋಮನ್ ಸೇನಾಧಿಪತಿ ಟೈಟಸ್ ಮಾಡಿದ ಗ್ರೀಕ್ ಭಾಷೆಯ ಭಾಷಣವನ್ನು ಸಿರಿಯಾಕ್ ಭಾಷೆಗೆ ಅನುವಾದಿಸಲಾಗಿತ್ತು. ಆದ್ದರಿಂದ ಈಸಾ(ಅ) ತಮ್ಮ ಶಿಷ್ಯರಿಗೆ ನೀಡಿದ ಬೋಧನೆಯು ಸಿರಿಯಾಕ್ ಭಾಷೆಯಲ್ಲೇ ಆಗಿರಬೇಕು.
ಇಲ್ಲಿ ತಿಳಿದುಕೊಳ್ಳಬೇಕಾದ ಇನ್ನೊಂದು ವಿಷಯವೇನೆಂದರೆ ಬೈಬಲ್‍ನ ನಾಲ್ಕು ಸುವಾರ್ತೆಗಳನ್ನೂ ಈಸಾ(ಅ) ಅವರು ಈ ಲೋಕದಿಂದ ನಿರ್ಗಮಿಸಿದ ಬಳಿಕ ಕ್ರೈಸ್ತ ಧರ್ಮ ವನ್ನು ಸ್ವೀಕರಿಸಿದ ಗ್ರೀಕ್ ಭಾಷೆ ಮಾತಾಡುವವರು ಬರೆದಿರುವರು. ಅವರಿಗೆ ಈಸಾ(ಅ) ಅವರ ವಚನಗಳು ಸಿರಿಯಾಕ್ ಭಾಷೆ ಮಾತಾಡುವ ಕ್ರೈಸ್ತರ ಮೂಲಕ ಬಾಯ್ದೆರೆಯಾಗಿ ತಲುಪಿತ್ತು. ಆ ಸಿರಿಯಾಕ್ ಭಾಷೆಯ ವಚನಗಳನ್ನು ಅವರು ತಮ್ಮ ಭಾಷೆಗೆ ಅನುವಾದಿಸಿದ್ದರು. ಈ ಪೈಕಿ ಯಾವ ಸುವಾರ್ತೆಯೂ ಕ್ರಿ.ಶ.70ಕ್ಕಿಂತ ಮುಂಚೆ ಲಿಖಿತಗೊಂಡಿರಲಿಲ್ಲ. ಯೋಹಾನನ ಸುವಾರ್ತೆಯಂತೂ ಈಸಾ(ಅ) ಅವರ ಒಂದು ಶತಮಾನದ ನಂತರ ಬರೆಯಲ್ಪಟ್ಟಿತು. ಮೂಲ ಗ್ರೀಕ್ ಭಾಷೆಯಲ್ಲಿ ಬರೆಯಲಾದ ಈ ಸುವಾರ್ತೆಗಳ ಯಾವುದೇ ಪ್ರತಿ ಸುರಕ್ಷಿತವಾಗಿಲ್ಲ. ಮುದ್ರಣ ಕಲೆ ಬಳಕೆಗೆ ಬರುವುದಕ್ಕಿಂತ ಮುಂಚೆ ವಿಭಿನ್ನ ಪ್ರದೇಶಗಳಲ್ಲಿ ಇದ್ದಂತಹ ಗ್ರೀಕ್ ಭಾಷೆಯ ಮೂಲ ಪ್ರತಿಗಳಾವುವೂ ನಾಲ್ಕನೆಯ ಶತಮಾನಕ್ಕಿಂತ ಹಿಂದಿನದ್ದಿಲ್ಲ. ಆದ್ದರಿಂದ ಮೂರು ಶತಮಾನಗಳಲ್ಲಿ ಅವುಗಳಲ್ಲಿ ಏನೆಲ್ಲಾ ಬದಲಾವಣೆಯಾಗಿದೆಯೆಂದು ಹೇಳುವಂತಿಲ್ಲ. ಈ ವಿಷಯ ಇನ್ನಷ್ಟು ಸಂಶಯಾಸ್ಪದ ವಾಗುವುದು ಹೇಗೆಂದರೆ ಕ್ರೈಸ್ತರು ತಮ್ಮ ಸುವಾರ್ತೆಗಳಲ್ಲಿ ತಿದ್ದುಪಡಿ-ಬದಲಾವಣೆಗಳನ್ನು ಮಾಡುವುದನ್ನು ಧರ್ಮಸಮ್ಮತವೆಂದು ಭಾವಿಸುತ್ತಾರೆ.
ಎನ್‍ಸೈಕ್ಲೋಪೀಡಿಯಾ ಬ್ರಿಟಾನಿಕಾದ (1946ರ ಆವೃತ್ತಿ) ‘ಬೈಬಲ್’ ಎಂಬ ಲೇಖನದಲ್ಲಿ ಹೀಗೆ ಹೇಳಲಾಗಿದೆ:
“ಸುವಾರ್ತೆಗಳಲ್ಲಿ ಉದ್ದೇಶಪೂರ್ವಕವಾಗಿ ಸ್ಪಷ್ಟ ಬದಲಾವಣೆಗಳನ್ನು ಮಾಡಲಾಗಿದೆ. ಉದಾ: ಕೆಲವು ವಚನಗಳನ್ನು ಇತರ ಮೂಲಗಳಿಂದ ತೆಗೆದು ಈ ಗ್ರಂಥದಲ್ಲಿ ಸೇರಿಸಲಾಗಿದೆ… ಈ ಬದಲಾವಣೆಗಳನ್ನು ಕೆಲವು ಮಂದಿ ಉದ್ದೇಶಪೂರ್ವಕವಾಗಿ ಮಾಡಿರುವರು. ಅವರಿಗೆ  ಈ ಗ್ರಂಥದಲ್ಲಿ ಸೇರಿಸಲಿಕ್ಕೆ ಎಲ್ಲಿಂದ ಯಾವುದೇ ವಿಷಯ ಸಿಕ್ಕಿದರೂ ಈ ಗ್ರಂಥವನ್ನು ಹೆಚ್ಚು ಉತ್ತಮ ಅಥವಾ ಹೆಚ್ಚು ಉಪಯುಕ್ತಪಡಿಸಲು ಅದರಲ್ಲಿ ತಮ್ಮ ಕಡೆಯಿಂದ ವಿಷಯಗಳನ್ನು ಸೇರಿಸುವುದು ತಮ್ಮ ಹಕ್ಕೆಂದು ಭಾವಿಸುತ್ತಿದ್ದರು… ಅನೇಕ ಸೇರ್ಪಡೆಗಳು ಎರಡನೆಯ ಶತಮಾನದಲ್ಲೇ ಆಗಿದ್ದುವು. ಅವುಗಳ ಮೂಲವೇನೆಂಬುದರ ಬಗ್ಗೆ ಏನೂ ತಿಳಿದಿಲ್ಲ.”
ಇಂತಹ ಪರಿಸ್ಥಿತಿಯಲ್ಲಿ ಬೈಬಲ್‍ನಲ್ಲಿ ನಮಗೆ ಸಿಗುವ ಈಸಾ(ಅ) ಅವರ ವಚನಗಳು ಸರಿಯಾಗಿ ಉದ್ಧರಿಸಲ್ಪಟ್ಟಿವೆ ಮತ್ತು ಅವುಗಳಲ್ಲಿ ಯಾವುದೇ ತಿದ್ದುಪಡಿ ಯಾಗಿಲ್ಲವೆಂದು ಖಚಿತವಾಗಿ ಹೇಳುವುದು ಕಷ್ಟ.
ಮತ್ತೊಂದು ಮುಖ್ಯ ವಿಷಯವೇನೆಂದರೆ ಫೆಲೆಸ್ತೀನನ್ನು ಮುಸ್ಲಿಮರು ಜಯಿಸಿದ ಬಳಿಕವೂ ಸುಮಾರು ಮೂರು ಶತಮಾನಗಳ ತನಕ ಕ್ರೈಸ್ತರ ಭಾಷೆಯು ಸಿರಿಯಾಕ್  ಆಗಿತ್ತು. ಅದು ಒಂಬತ್ತನೆಯ ಶತಮಾನದಲ್ಲಿ ಅರಬಿ ಆಗಿ ಮಾರ್ಪಟ್ಟಿತು. ಸಿರಿಯಾಕ್ ಭಾಷೆ ಮಾತನಾಡುವ ಈ ಫೆಲೆಸ್ತೀನ್ ನಿವಾಸಿಗಳ ಮೂಲಕ ಕ್ರೈಸ್ತ ಪರಂಪರೆಯ ಕುರಿತು ಮೊದಲ ಮೂರು ಶತಮಾನಗಳ ಮುಸ್ಲಿಮ್ ವಿದ್ವಾಂಸರಿಗೆ ದೊರೆತ ಮಾಹಿತಿಗಳು ಖಂಡಿತವಾಗಿಯೂ ಸಿರಿಯಾಕ್‍ನಿಂದ ಗ್ರೀಕ್‍ಗೆ, ಗ್ರೀಕ್‍ನಿಂದ ಲ್ಯಾಟಿನ್‍ಗೆ ತರ್ಜುಮೆಯಾಗಿ ಬಂದ ಮಾಹಿತಿಗಳಿಗಿಂತ ಹೆಚ್ಚು ವಿಶ್ವಾಸಾರ್ಹವಾಗಿವೆ. ಏಕೆಂದರೆ ಪ್ರವಾದಿ ಈಸಾ(ಅ) ಅವರ ಬಾಯಿಯಿಂದ ಹೊರಟ ಮೂಲ ಸಿರಿಯಾಕ್ ಪದಗಳು ಅವರಲ್ಲಿ ಸುರಕ್ಷಿತವಿರುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ಸ್ಪಷ್ಟ ಮತ್ತು ನಿರಾಕರಿಸಲಾಗದ ಐತಿಹಾಸಿಕ ಸತ್ಯಗಳನ್ನು ದೃಷ್ಟಿಯಲ್ಲಿಟ್ಟು ಕೊಂಡು ನೋಡಿದಾಗ ಯೋಹಾನನ ಸುವಾರ್ತೆಯಲ್ಲಿ ಬರುವ ಮೇಲ್ಕಾಣಿಸಿದ ವಚನ ಗಳಲ್ಲಿ ಈಸಾ(ಅ) ತಮ್ಮ ನಂತರ ಬರಲಿರುವ ‘ಓರ್ವ ಪ್ರವಾದಿ’ಯ ಬಗ್ಗೆ ಭವಿಷ್ಯ ನುಡಿದಿರುವರು. ಅವರ ಕುರಿತು ಪ್ರವಾದಿ ಈಸಾ(ಅ) ‘ಇಹಲೋಕಾಧಿಪತಿ’ (ಲೋಕನಾಯಕ), “ಸದಾ ಕಾಲ ಇರುವವನು”, “ಸಕಲ ವಿಷಯದಲ್ಲಿ ಸತ್ಯಕ್ಕೆ ಸೇರಿಸುವವನು” ಮತ್ತು ಸ್ವತಃ ಅವರ (ಈಸಾ) ಕುರಿತು ‘ಸಾಕ್ಷಿ ಹೇಳುವವನು’ ಎಂದು ಹೇಳಿರುವರು. ಯೋಹಾನನ ಸುವಾರ್ತೆಯ ಈ ವಚನಗಳಲ್ಲಿ ‘ಪವಿತ್ರಾತ್ಮ’, ‘ಸತ್ಯದ ಆತ್ಮನು’ ಇತ್ಯಾದಿ ಪದಗಳನ್ನು ಸೇರಿಸಿ ಅದರ ಉದ್ದೇಶವನ್ನು ವಿಕೃತಗೊಳಿಸಲು ಪ್ರಯತ್ನಿಸಲಾಗಿದ್ದರೂ ಈ ಎಲ್ಲ ವಚನ ಗಳನ್ನು ಗಮನವಿಟ್ಟು ಓದಿದಾಗ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಬರಲಿರುವ ಪ್ರವಾದಿಯು ಆತ್ಮವಲ್ಲ, ಮನುಷ್ಯ ಆಗಿರುವರು. ನಿರ್ದಿಷ್ಟ ವ್ಯಕ್ತಿಯಾಗಿರುವರು. ಅವರ ಶಿಕ್ಷಣವು ವಿಶ್ವವ್ಯಾಪಿ, ಸಮಗ್ರ ಮತ್ತು ಪ್ರಳಯ ಕಾಲದ ತನಕ ಉಳಿಯುವಂತಹದ್ದಾಗಿರುವುದು. ಆ ನಿರ್ದಿಷ್ಟ ವ್ಯಕ್ತಿಗೆ ಬೈಬಲ್‍ನ ಕನ್ನಡಾನುವಾದದಲ್ಲಿ ‘ಸಹಾಯಕ’ ಎಂಬ ಪದವನ್ನು ಬಳಸಲಾಗಿದೆ. ಗ್ರೀಕ್ ಭಾಷೆಯಲ್ಲಿ ಅದು ಪರಕ್ಲೆಟಸ್ ಆಗಿತ್ತು ಎಂದು ಕ್ರೈಸ್ತರು ಹೇಳುತ್ತಾರೆ. ಗ್ರೀಕ್ ಭಾಷೆಯಲ್ಲಿ ಆ ಪದವು ಮೂಲತಃ ಪರಕ್ಲೇಟ್  ಆಗಿದೆ. ಅದರ ಅರ್ಥ ಯಾವುದೇ ಕಡೆಗೆ ಕರೆಯುವುದು, ಸಹಾಯಕ್ಕಾಗಿ ಕರೆ ನೀಡುವುದು, ಎಚ್ಚರಿಕೆ, ಪ್ರೇರಣೆ, ವಿನಂತಿಸುವುದು, ಪ್ರಾದಿರ್sಸುವುದು. ಬೈಬಲ್‍ನಲ್ಲಿ ಈ ಪದವನ್ನು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲೂ ಅದರ ಯಾವುದೇ ಅರ್ಥ ಅನ್ವಯವಾಗುವುದಿಲ್ಲ.
ಗ್ರೀಕ್ ಭಾಷೆಯಲ್ಲಿ ಪೆರಿಕ್ಲೈಟೋಸ್ ಎಂಬ ಪದವೊಂದಿದೆ. ಅದರ ಅರ್ಥ ಸ್ತುತಿಸಲ್ಪಟ್ಟವನು. ಈ ಪದವು ‘ಮುಹಮ್ಮದ್’ ಎಂಬ ಅರಬಿ ಪದದ  ಸಮಾನಾರ್ಥವಾಗಿದೆ. ಇದರ ಮತ್ತು ಪರಕ್ಲೆಟಸ್‌ನ ಉಚ್ಚಾರದಲ್ಲಿ ಬಹಳ ಸಾಮ್ಯತೆಯಿದೆ. ಇದು ಕೂಡಾ ಕ್ರೈಸ್ತ ವಿದ್ವಾಂಸರ ತಿದ್ದುಪಡಿಯ ಪರಿಣಾಮವಾಗಿದ್ದರೆ ಆಶ್ಚರ್ಯವಿಲ್ಲ. ಯೋಹಾನನು ಬರೆದ ಮೂಲ ಗ್ರೀಕ್ ಭಾಷೆಯ ಸುವಾರ್ತೆ ಎಲ್ಲೂ ಲಭ್ಯವಿಲ್ಲದಿರುವುದರಿಂದ ಅದನ್ನು ಪರೀಕ್ಷಿಸಲು ಸಾಧ್ಯವೂ ಇಲ್ಲ.
“ಆದರೆ ಪ್ರವಾದಿ ಈಸಾ(ಅ) ಅವರು ಬಳಸಿದ ಮೂಲ ಸಿರಿಯಾಕ್ ಭಾಷೆಯಲ್ಲಿ ಆ ಪದವು ‘ಮುಸ್‍ಹಮನ್ನಾ’ ಎಂದಾಗಿದ್ದು ಅದರ ಅರ್ಥ ಗ್ರೀಕ್ ಭಾಷೆಯಲ್ಲಿ ಪೆರಿಕ್ಲೀಟಸ್ ಮತ್ತು ಅರಬಿಯಲ್ಲಿ ‘ಮುಹಮ್ಮದ್’ ಆಗಿದೆ.”   (ಇಬ್ನು ಹಿಶಾಮ್, ಭಾಗ: 1 ಪುಟ: 248)