ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣ ಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ ಸಾರಿ ಹೇಳಿದೆ:

“ಅದು ಸರ್ವಲೋಕಗಳ ಪಾಲಕ ಪ್ರಭುವಿನಿಂದ ಅವತೀರ್ಣ ಗೊಂಡಿದೆ. ನೀವು (ದೇವವತಿಯಿಂದ ದೇವ ಸೃಷ್ಟಿಗಳಿಗೆ) ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ, ಪ್ರಾಮಾಣಿಕ ಆತ್ಮವು ಇದರ ಜೊತೆ ನಿಮ್ಮ ಹೃದಯಕ್ಕೆ ಇಳಿದಿದೆ. ಇದು ಸುಸ್ಪಷ್ಟ ಅರಬೀ ಭಾಷೆಯಲ್ಲಿದೆ.”  (26:192-195)

ಪವಿತ್ರ ಕುರ್‍ಆನಿಗಿಂತ ಮುಂಚೆ ಅವತೀರ್ಣಗೊಂಡ ದೇವಗ್ರಂಥಗಳಾದ ತೌರಾತ್ ಮತ್ತು ಇಂಜೀಲ್‍ಗಳಲ್ಲಿ ಇದರ ಬಗ್ಗೆ ಭವಿಷ್ಯವಾಣಿ ಮತ್ತು ಸುವಾರ್ತೆಗಳಿದ್ದುವು. ಒಂದು ಅಂತಿಮ ದೇವಗ್ರಂಥ ಬರಲಿಕ್ಕಿದೆ ಮತ್ತು ಓರ್ವ ಅಂತಿಮ ಪ್ರವಾದಿ ಬರಲಿಕ್ಕಿರುವರು ಎಂದು ಅವು ಭವಿಷ್ಯ ನುಡಿದಿದ್ದುವು. ಪವಿತ್ರ ಕುರ್‍ಆನ್ ಆ ಭವಿಷ್ಯ ನುಡಿಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಆ ಗ್ರಂಥದಲ್ಲೇ ಸ್ಪಷ್ಟಪಡಿಸಲಾಗಿದೆ-

“ಕುರ್‍ಆನಿನಲ್ಲಿ ವಿವರಿಸಲ್ಪಡುತ್ತಿರುವುದೆಲ್ಲ ಕೃತಕ ವಿಷಯಗಳಲ್ಲ. ಪರಂತು ಇದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢೀಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ ಸತ್ಯವಿಶ್ವಾಸವನ್ನು ಸ್ವೀಕರಿಸಿಕೊಳ್ಳುವವರಿಗೆ ಸನ್ಮಾರ್ಗದರ್ಶನವೂ ಅನುಗ್ರಹವೂ ಆಗಿರುತ್ತದೆ.” (12:111)

ಬೈಬಲ್‍ನ ಪುರಾವೆಗಳು

ತಮ್ಮ ಅನುಯಾಯಿಗಳಿಂದ ಹಸ್ತಕ್ಷೇಪಕ್ಕೆ ಒಳಗಾಗಿ ತಿದ್ದುಪಡಿಗೊಂಡು ವಿಕೃತವಾಗಿರುವ ತೌರಾತ್ ಮತ್ತು ಇಂಜೀಲ್‍ಗಳ ಇಂದಿನ ಅವಶೇಷವಾದ ಬೈಬಲ್‍ನಲ್ಲಿ ಕೂಡಾ ಅನೇಕ ಕಡೆಗಳಲ್ಲಿ ಈ ಸುವಾರ್ತೆಯ ಉಲ್ಲೇಖವಿರುವುದು ಕಂಡು ಬರುತ್ತದೆ.

(ನೋಡಿರಿ: ಮತ್ತಾಯನು ಬರೆದ ಸುವಾರ್ತೆ 21:42-45, ಯೋಹಾನನು ಬರೆದ ಸುವಾರ್ತೆ 16:12-13, 14:15-17, 29-30, 16:7-8)

ಯೇಸು ಅವರಿಗೆ ಹೇಳಿದನು: ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದ ಆಯಿತು; ನಿಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದ್ದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವುದು. ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅವನನ್ನು ಪುಡಿಪುಡಿ ಮಾಡುವುದು.       (ಮತ್ತಾಯನು ಬರೆದ ಸುವಾರ್ತೆ- 21:42-45)

ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮ ಬಂದಾಗ ಆತನು ನಿಮ್ಮನ್ನು ನಡೆಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.        (ಯೋಹಾನನು ಬರೆದ ಸುವಾರ್ತೆ- 16:12-13)

ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾ ಕಾಲ ನಿಮ್ಮ ಸಂಗಡ ಇರುವುದಕ್ಕೆ ಕೊಡುವನು. (ಯೋಹಾನನು ಬರೆದ ಸುವಾರ್ತೆ- 14:15-17)

ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು.  (ಯೋಹಾನನು ಬರೆದ ಸುವಾರ್ತೆ- 14:26)

ಅದೆಲ್ಲಾ ನಡೆಯುವಾಗ ನೀನು ನಮ್ಮನ್ನು ನಂಬುವಂತೆ ಅದು ನಡೆಯುವುದಕ್ಕಿಂತ ಮುಂಚೆಯೇ ಈಗ ನಿಮಗೆ ಹೇಳಿದ್ದೇನೆ. ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳ ನ್ನಾಡುವುದಿಲ್ಲ. ಏಕೆಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವುದೊಂದೂ ನನ್ನಲ್ಲಿಲ್ಲ.                 (ಯೋಹಾನನು ಬರೆದ ಸುವಾರ್ತೆ- 14:29-30)

ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವುದು ನಿಮಗೆ ಹಿತಕರವಾಗಿದೆ, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿ ಕೊಡುತ್ತೇನೆ. ಆತನು ಬಂದು ಪಾಪ, ನೀತಿ, ನ್ಯಾಯ ತೀರ್ಪಿಗೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು.        (ಯೋಹಾನನು ಬರೆದ ಸುವಾರ್ತೆ- 16:7-8)

ಈ ಉದ್ಧರಣೆಗಳಲ್ಲಿ ಬಂದಿರುವ ಭವಿಷ್ಯವಾಣಿಯು ಪ್ರವಾದಿ ಮುಹಮ್ಮದ್(ಸ) ಮತ್ತು ಪವಿತ್ರ ಕುರ್‍ಆನಿನ ಬಗೆಗಾಗಿದೆ ಎಂಬುದು ಸ್ಪಷ್ಟ.

‘ಮುಖ್ಯವಾದ ಮೂಲೆಗಲ್ಲಾಯಿತು’ ಅಂದರೆ ಕೊನೆಗೆ ನಾಯಕತ್ವ ಪದವಿ ಪಡೆಯಿತು ಎಂದರ್ಥ’.

“ಆದರೆ ಸದ್ಯಕ್ಕೆ ನೀವು ಅದನ್ನು ಹೊರಲಾರಿರಿ” ಎಂದರೆ ಇನ್ನಷ್ಟು ದೇವ ವಿಧಿಗಳ ಭಾರ ಹೊರುವ ಶಕ್ತಿ ನಿಮ್ಮಲ್ಲಿಲ್ಲ. ಆದ್ದರಿಂದ ಅಲ್ಲಾಹನು ನನ್ನ ಮೂಲಕ ತನ್ನಧರ್ಮವನ್ನು ಪೂರ್ಣಗೊಳಿಸದೆ ಅದಕ್ಕಾಗಿ ಇನ್ನೊಬ್ಬ ಪ್ರವಾದಿಯನ್ನು ನಿಯೋಗಿಸುವ ನೆಂದರ್ಥ.

‘ಸಹಾಯಕ’ ಎಂಬ ಪದದ ಹಿಬ್ರೂ ಮೂಲವನ್ನು ಅರಬಿ ಬೈಬಲ್‍ನಲ್ಲಿ ‘ಫಾರ್ಕಲೀತ್’ ಎಂದು ಅನುವಾದಿಸಲಾಗಿದೆ. ಇದು ಮುಹಮ್ಮದ್ ಮತ್ತು ಅಹ್ಮದ್ ಎಂಬ ಪದಗಳಿಗೆ ಸಮಾನವಾದ ಅರ್ಥವುಳ್ಳ ಪದವಾಗಿದೆ.

‘ಸದಾ ಕಾಲ ನಿಮ್ಮ ಸಂಗಡ’ ಇರುವುದಕ್ಕೆ ಎಂದರೆ ಅವನು ತರುವ ಧರ್ಮಗ್ರಂಥವು ತೌರಾತ್ ಮತ್ತು ಇಂಜೀಲ್‍ಗಳಂತೆ ಒಂದು ಸೀಮಿತ ಕಾಲಾವಧಿಗೆ ಆಗಿರದೆ ಸಾರ್ವಕಾಲಿಕ ವಾಗಿರುವುದೆಂದರ್ಥ.

‘ಇಹಲೋಕಾಧಿಪತಿ’ ಎಂದರೆ ಸಂಪೂರ್ಣ ವಿಶ್ವ ಮತ್ತು ಸಮಸ್ತ ಮಾನವಕುಲಕ್ಕೆ ಅಲ್ಲಾಹನ ಪ್ರವಾದಿ. ಯಾವುದೇ ಪ್ರತ್ಯೇಕ ಜನಾಂಗ ಅಥವಾ ರಾಷ್ಟ್ರಕ್ಕೆ ಅಲ್ಲ.

“ಅವನಿಗೆ ಸಂಬಂಧಪಟ್ಟ ಯಾವೊಂದೂ ನನ್ನಲ್ಲಿಲ್ಲ” ಎಂದರೆ ಅವನು ನನಗಿಂತ ಬಹಳ ಉನ್ನತ ಸ್ಥಾನಮಾನಗಳ ಪ್ರವಾದಿಯಾಗಿರುವನು ಎಂದರ್ಥ.

ಈ ವಚನಗಳ ಇಂಗಿತ ತಿಳಿಯಲು ಈ ಸಂಕ್ಷಿಪ್ತ ವಿವರಣೆ ಸಾಕು.

ಪವಿತ್ರ ಕುರ್‍ಆನ್ ಮಾನವ ಕೃತಿಯಾಗಿದ್ದರೆ 23 ವರ್ಷಗಳ ದೀರ್ಘ ಅವಧಿಯಲ್ಲಿ ಭಿನ್ನ ಭಿನ್ನ  ಪರಿಸ್ಥಿತಿಗಳಲ್ಲಿ ಪೂರ್ಣಗೊಂಡ 114 ಅಧ್ಯಾಯಗಳ ಮತ್ತು 6236 ಸೂಕ್ತಗಳ ಈ ಬೃಹತ್ ಗ್ರಂಥದಲ್ಲಿ ಒಂದಲ್ಲ ಒಂದು ಕಡೆ ವಿರೋಧಾಭಾಸವಿರುವುದು ಅನಿವಾರ್ಯ ವಾಗಿತ್ತು. ಅಂತೆಯೇ ಇದರ ವಿಷಯಗಳು, ತತ್ವಗಳು, ವಿಚಾರಗಳು ಮತ್ತು ಶಿಕ್ಷಣಗಳಲ್ಲಿ ಸ್ವಾಭಾವಿಕವಾಗಿಯೂ ಭಿನ್ನತೆಗಳಿರುತ್ತಿದ್ದುವು. ಆದರೆ ಪವಿತ್ರ ಕುರ್‍ಆನಿನಲ್ಲಿ ಇಂತಹ ವಿರೋಧಾ ಭಾಸದ ಛಾಯೆಯನ್ನು ನಾವು ಕಾಣುವುದಿಲ್ಲ. ಕುರ್‍ಆನ್ ಸ್ವತಃ ಈ ರೀತಿ ಹೇಳುತ್ತದೆ:

“ಅದು ಅಲ್ಲಾಹನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಇದರಲ್ಲಿ ಅನೇಕ ವಿರೋಧಾಭಾಸಗಳು ಕಂಡು ಬರುತ್ತಿದ್ದುವು.”         (4:82)

ಕುರ್‍ಆನಿನ ಭವಿಷ್ಯವಾಣಿಗಳು

ಕುರ್‍ಆನಿನಲ್ಲಿ ಅನೇಕ ಭವಿಷ್ಯವಾಣಿಗಳಿದ್ದು ಅವೆಲ್ಲವೂ ಪೂರ್ಣಗೊಂಡಿವೆ. ಸಾಮಾನ್ಯವಾಗಿ ಈ ಭವಿಷ್ಯವಾಣಿಗಳು ಪೂರ್ಣಗೊಳ್ಳುವ ಯಾವುದೇ ಪ್ರತ್ಯಕ್ಷ ಸೂಚನೆ ಲಭ್ಯವಿಲ್ಲದಿದ್ದ ಪರಿಸ್ಥಿತಿಗಳಲ್ಲಿ ಅವು ನುಡಿಯಲ್ಪಟ್ಟಿವೆ. ಆದರೆ ಅದರ ಒಂದೇ ಒಂದು ಭವಿಷ್ಯವಾಣಿಯೂ ಸುಳ್ಳಾಗಿಲ್ಲ. ಎಲ್ಲವೂ ಪೂರ್ಣಗೊಂಡದ್ದನ್ನು ಜಗತ್ತು ಕಂಡಿದೆ.

ಹಿಜರಿಶಕೆ 6ರಲ್ಲಿ ನಡೆದ ಹುದೈಬಿಯಾ ಸಂಧಿಯ ಸಂದರ್ಭದಲ್ಲಿ ಕುರ್‍ಆನ್ ಮುಸ್ಲಿಮರಿಗೆ ಈ ಸುವಾರ್ತೆಯನ್ನು ನೀಡಿತ್ತು:

“ಅಲ್ಲಾಹನಿಚ್ಛಿಸಿದರೆ, ನೀವು ಖಂಡಿತವಾಗಿಯೂ ಸಂಪೂರ್ಣ ಶಾಂತಿಯೊಂದಿಗೆ ಮಸ್ಜಿದುಲ್ ಹರಾಮನ್ನು ಪ್ರವೇಶಿಸುವಿರಿ. ನಿಮ್ಮ ತಲೆ ಬೋಳಿಸಿಕೊಳ್ಳುವಿರಿ ಮತ್ತು ಕೂದಲು ಕತ್ತರಿಸಿಕೊಳ್ಳುವಿರಿ ಮತ್ತು ನಿಮಗೆ ಯಾವ ಭಯವೂ ಇರಲಾರದು.”        (ಪವಿತ್ರ ಕುರ್‍ಆನ್, 48:27)

ಇಷ್ಟು ದೊಡ್ಡ ಭರವಸೆ ನೀಡುವ ಈ ಸೂಕ್ತ ಅವತೀರ್ಣಗೊಂಡಾಗ ಇದ್ದ ಪರಿಸ್ಥಿತಿ ಬಹಳ ಗಮನಾರ್ಹ. ಹಿ.ಶ. 6ರಲ್ಲಿ ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿ ಗಳೊಂದಿಗೆ ಕಅಬಾ ಸಂದರ್ಶಿಸಲು ಮದೀನಾದಿಂದ ಮಕ್ಕಾದೆಡೆಗೆ ಹೊರಟಾಗ ಮಕ್ಕಾದ ಸತ್ಯವಿರೋಧಿಗಳು ಅವರನ್ನು ನಡುದಾರಿಯಲ್ಲೇ ತಡೆದರು ಮತ್ತು ಮೇಲ್ನೋಟಕ್ಕೆ ಅತ್ಯಂತ ಅಪಮಾನಕಾರಿಯೆಂದು ತೋರುವಂತಹ ಒಂದು ಒಪ್ಪಂದ ಮಾಡಿಕೊಳ್ಳುವಂತೆ ಪ್ರವಾದಿ ವರ್ಯರನ್ನು(ಸ) ನಿರ್ಬಂಧಿಸಿದರು. ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳು ತೀರಾ ದುಃಖತಪ್ತರಾಗಿ ಅಲ್ಲಿಂದಲೇ ಮರಳಿ ಬರಬೇಕಾಯಿತು. ಮುಂದೆಂದಾದರೂ ಮುಸ್ಲಿಮರಿಗೆ ಮಕ್ಕಾ ಪಟ್ಟಣವನ್ನು ವಿಜಯಿಗಳಾಗಿ ಪ್ರವೇಶಿಸಲು ಸಾಧ್ಯವಾದೀತೆಂದು ನಂಬಲು ಅಲ್ಲಿ ಅವಕಾಶವೇ ಇರಲಿಲ್ಲ. ಪರಿಸ್ಥಿತಿಯು ಅಷ್ಟು ಪ್ರತಿಕೂಲವಾಗಿತ್ತು. ಆದರೂ ಹಾಗೆಯೇ ಆಗಲಿದೆ ಎಂದು ಪವಿತ್ರ ಕುರ್‍ಆನ್ ದೃಢ ಸ್ವರದಲ್ಲಿ ಸಾರಿತು. ಕೇವಲ ಎರಡೇ ವರ್ಷಗಳಲ್ಲಿ ಈ ಸುವಾರ್ತೆ ಪೂರ್ಣಗೊಂಡಿತು. ಹಿ.ಶ. 8ರಲ್ಲಿ ಪ್ರವಾದಿ ಮುಹಮ್ಮದ್(ಸ) ಮತ್ತು ಅವರ ಸಂಗಾತಿಗಳು ವಿಜಯಿಗಳಾಗಿ ಮಕ್ಕಾ ಪಟ್ಟಣವನ್ನು ಪ್ರವೇಶಿಸಿದರು.

ಪವಿತ್ರ ಕುರ್‍ಆನಿನ ಇನ್ನೊಂದು ಭವಿಷ್ಯ ನುಡಿ ಈ ರೀತಿ ಇದೆ,

“ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದವರೊಡನೆ, ಅಲ್ಲಾಹನು ಅವರಿಗಿಂತ ಮುಂಚಿನವರನ್ನು ಭೂಮಿಯಲ್ಲಿ ಪ್ರತಿನಿಧಿಗಳಾಗಿ ಮಾಡಿದಂತೆಯೇ ಅವರನ್ನು ಮಾಡುವ ನೆಂದು ವಾಗ್ದಾನ ಮಾಡಿರುವನು. ತಾನು ಅವರಿಗಾಗಿ ಮೆಚ್ಚಿರುವ ಅವರ ಧರ್ಮವನ್ನು ಸುಭದ್ರ ಬುನಾದಿಗಳಲ್ಲಿ ಸ್ಥಾಪಿಸುವನು ಮತ್ತು ಅವರ (ಪ್ರಚಲಿತ) ಭಯಾವಸ್ಥೆಯನ್ನು ಶಾಂತಿಯಾಗಿ ಮಾರ್ಪಡಿಸಿ ಬಿಡುವನು.”  (24:55)

ಇದು ಮುಸ್ಲಿಮರು ತೀವ್ರ ಭಯ ಮತ್ತು ಆತಂಕದಲ್ಲಿ ಬಾಳುತ್ತಿದ್ದ ಸಂದರ್ಭದಲ್ಲಿ ಅವತೀರ್ಣಗೊಂಡ ಸೂಕ್ತವಾಗಿತ್ತು. ಧರ್ಮವು ದುರ್ಬಲವಾಗಿತ್ತು. ಅಧಿಕಾರ ಮತ್ತು ಮೇಲ್ಮೆ ಇಸ್ಲಾಮಿನ ಶತ್ರುಗಳ ಕೈಯಲ್ಲಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿ ಅರಬ್ ದೇಶವು ಸಂಪೂರ್ಣವಾಗಿ ಮುಸ್ಲಿಮರ ಅಧೀನಕ್ಕೆ ಬಂದು ಬಿಟ್ಟಿತೆಂಬುದಕ್ಕೆ ಇತಿಹಾಸ ಸಾಕ್ಷಿ ಇದೆ. ಪವಿತ್ರ ಕುರ್‍ಆನಿನ ರಕ್ಷಣೆಯ ಹೊಣೆಯನ್ನು ಅಲ್ಲಾಹನೇ ವಹಿಸಿಕೊಂಡಿರು ವನು. ಪವಿತ್ರ ಕುರ್‍ಆನ್ ಆ ಬಗ್ಗೆ ಈ ರೀತಿ ಸಾರುತ್ತದೆ:

“ಈ ‘ಉಪದೇಶ’ವನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.”          (15:9)

ಈ ಘೋಷಣೆಯು ಒಂದು ವಾಸ್ತವಿಕ ಘಟನೆಯ ರೂಪದಲ್ಲಿ ನಮ್ಮ ಮುಂದಿದೆ. ಇದನ್ನು ಇಸ್ಲಾಮಿನ ಅನುಯಾಯಿಗಳು ಮಾತ್ರವಲ್ಲ ಅದರ ಪ್ರಾಮಾಣಿಕ ನಿಷೇಧಿಗಳು ಕೂಡಾ ಅಲ್ಲಗಳೆಯುವಂತಿಲ್ಲ. ಈ ಹಿಂದೆ ಬಂದಂತಹ ದೈವಿಕ ಗ್ರಂಥಗಳ ಪೈಕಿ ಒಂದಾದರೂ ತನ್ನ ಮೂಲ ರೂಪದಲ್ಲಿಲ್ಲ. ಅದು ಮೂಲ ರೂಪದಲ್ಲೇ ಇದೆ ಎಂದು ಸ್ವತಃ ಆ ಗ್ರಂಥಗಳೂ ವಾದಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪವಿತ್ರ ಕುರ್‍ಆನ್ ತನ್ನ ಮೂಲ ರೂಪದಲ್ಲಿ ಒಂದಕ್ಷರದ ವ್ಯತ್ಯಾಸವೂ ಇಲ್ಲದೆ ಉಳಿದುಕೊಂಡು ಬಂದಿದೆ.

ಇವುಗಳಲ್ಲದೆ ಪವಿತ್ರ ಕುರ್‍ಆನಿನಲ್ಲಿ ಇನ್ನೂ ಅನೇಕ ಭವಿಷ್ಯ ನುಡಿಗಳಿವೆ. ಅವುಗಳೆಲ್ಲಾ ಅಕ್ಷರಶಃ ಪೂರ್ಣಗೊಂಡಿರುವುದಕ್ಕೆ ಮಾನವ ಇತಿಹಾಸವು ಸಾಕ್ಷ್ಯ ವಹಿಸುತ್ತದೆ. ಅವುಗಳ ಪೈಕಿ ಒಂದೂ ಸುಳ್ಳಾಗಲಿಲ್ಲ. ಈ ಭವಿಷ್ಯ ನುಡಿಗಳು ಊಹೆ ಮತ್ತು ಗುಮಾನಿ ಖಂಡಿತ ಆಗಿರಲಿಲ್ಲ. ಅದು ಪರೋಕ್ಷದ ಸ್ಪಷ್ಟ ಮತ್ತು ನಿರ್ಣಾಯಕ ಜ್ಞಾನದ  ಆಧಾರವನ್ನು ಹೊಂದಿತ್ತೆಂಬುದು ಖಚಿತ. ಅಲ್ಲಾಹನ ಹೊರತು ಇನ್ನಾರಿಗೂ ಅದೃಶ್ಯದ ಸ್ಪಷ್ಟ ಮತ್ತು ಖಚಿತ ಜ್ಞಾನ ಇಲ್ಲವೆಂಬುದು ವ್ಯಕ್ತ. ಹಾಗಿರುವಾಗ ಇದು ಮಾನವ ಕೃತಿಯಾಗಿರಲು ಸಾಧ್ಯವೇ ಇಲ್ಲ.

ಪವಿತ್ರ ಕುರ್‍ಆನ್ ಗತ ಪ್ರವಾದಿಗಳ ಇತಿಹಾಸವನ್ನು ಕಣ್ಣಾರೆ ಕಂಡಂತೆ ವಿವರಿಸುತ್ತದೆ. ನಿರಕ್ಷರಸ್ಥರಾದ ಪ್ರವಾದಿ ಮುಹಮ್ಮದ್(ಸ) ಅವರಿಗಾಗಲೀ ಅವರ ಜನಾಂಗಕ್ಕಾಗಲೀ ಆ ಇತಿಹಾಸ ಬೇರಾವುದೇ ಮೂಲದಿಂದ ತಿಳಿದಿರಲಿಲ್ಲ.

ವೈಜ್ಞಾನಿಕ ವಾಸ್ತವಿಕತೆಗಳು

ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಾಗಿರದೆ ಸರ್ವಜ್ಞನಾದ ಅಲ್ಲಾಹನಿಂದ ಅವತೀರ್ಣಗೊಂಡಿದೆ ಎಂಬುದಕ್ಕೆ ಇನ್ನೊಂದು ಪುರಾವೆ ಅದರಲ್ಲಿ ವಿವರಿಸಲಾಗಿರುವ ವೈಜ್ಞಾನಿಕ ವಾಸ್ತವಿಕತೆಗಳಾಗಿವೆ. ಪವಿತ್ರ ಕುರ್‍ಆನ್ ಅವತೀರ್ಣಗೊಂಡ ಕಾಲದ ಜನರಿಗೆ ತಿಳಿದೇ ಇಲ್ಲದ ಅನೇಕ ವೈಜ್ಞಾನಿಕ ವಾಸ್ತವಿಕತೆಗಳನ್ನು ಅದು ವಿವರಿಸಿದೆ. ಉದಾ:

“ಆಕಾಶಗಳೂ ಭೂಮಿಯೂ ಕೂಡಿ ಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನೂ ಕಾಣಲಿಲ್ಲವೇ?”  (21:30)

ವಿಶ್ವವು ತನ್ನ ಪ್ರಸಕ್ತ ರೂಪವನ್ನು ಹೊಂದುವ ಮೊದಲು ಎಲ್ಲವೂ ಒಂದೇ ಒಂದು ವಸ್ತುವಿನ ರೂಪದಲ್ಲಿತ್ತೆಂಬುದು ಪವಿತ್ರ ಕುರ್‍ಆನ್ ಅವತೀರ್ಣಗೊಂಡ ಕೆಲವು ಶತಮಾನಗಳ ಬಳಿಕ ವಿಜ್ಞಾನಿಗಳು ಕಂಡುಕೊಂಡ ವಾಸ್ತವಿಕತೆ ಎಂಬುದು ಇಲ್ಲಿ ಗಮನಾರ್ಹ. ಆ ಮೂಲ ವಸ್ತುವಿನ ಕುರಿತು ಪವಿತ್ರ ಕುರ್‍ಆನ್ ‘ಅದೊಂದು ಹೊಗೆಯಂತಿತ್ತು’  (41:11) ಎಂದು ಹೇಳಿದೆ.

ಎಲ್ಲ ಜೀವಿಗಳಿಗೂ ಮೂಲ ಜಲವಾಗಿದೆ ಎಂಬುದು ಮುಂದಿನ ಶತಮಾನಗಳಲ್ಲಿ ವಿಜ್ಞಾನಿಗಳು ಕಂಡುಕೊಂಡ ವಾಸ್ತವಿಕತೆ. ಅದನ್ನೂ ಪವಿತ್ರ ಕುರ್‍ಆನ್ ಪ್ರಸ್ತಾಪಿಸಿದೆ:

“ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನೂ ಕಾಣಲಿಲ್ಲವೇ?” (21:30)

“ನಾವು ಪ್ರತಿಯೊಂದು ವಸ್ತುವಿನ ಜೋಡಿಗಳನ್ನು ಮಾಡಿರುತ್ತೇವೆ.” (51:49) ಎಂಬುದನ್ನೂ ಪವಿತ್ರ ಕುರ್‍ಆನ್ ಪ್ರತಿಪಾದಿಸುತ್ತದೆ.

ಸೂರ್ಯ-ಚಂದ್ರರ ಕುರಿತು ಪವಿತ್ರ ಕುರ್‍ಆನ್ ಈ ರೀತಿ ಹೇಳುತ್ತದೆ:

“ಆಸೂರ್ಯನು ತನ್ನ ಸ್ಥಾನದ ಕಡೆಗೆ ಚಲಿಸುತ್ತಿದ್ದಾನೆ. ಪ್ರಬಲನೂ ಸರ್ವಜ್ಞನೂ ಆದವನ ನಿರ್ಣಯವಿದು ಮತ್ತು ಚಂದ್ರ – ಅದಕ್ಕೆ ನಾವು ಫಟ್ಟಗಳನ್ನು ನಿಶ್ಚಯಿಸಿಕೊಟ್ಟಿದ್ದು, ಅವುಗಳನ್ನು ಹಾದು ಹೋಗುತ್ತಾ ಕೊನೆಗೆ ಅದು ಖರ್ಜೂರದ ಒಣಗೆಲ್ಲಿನಂತಾಗಿ ಬಿಡುತ್ತದೆ. ಚಂದ್ರನನ್ನು ಹಿಡಿಯಲು ಸೂರ್ಯನಿಂದಾಗದು ಮತ್ತು ರಾತ್ರಿಯು ಹಗಲನ್ನು ವಿೂರಿ ಹೋಗಲಾರದು. ಎಲ್ಲವೂ ಒಂದೊಂದು ಕಕ್ಷೆಯಲ್ಲಿ ತೇಲುತ್ತಿವೆ.”         (36: 38-40)

ಇವೆಲ್ಲವೂ ಇಂದು ವೈಜ್ಞಾನಿಕ ವಾಸ್ತವಿಕತೆಗಳಾಗಿವೆ. ಆದರೆ ಪವಿತ್ರ ಕುರ್‍ಆನ್ ಅವತೀರ್ಣಗೊಂಡ ಕಾಲದ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಈ ವಾಸ್ತವಿಕತೆಗಳ ಗಂಧ ಗಾಳಿಯೂ ಸೋಂಕಿರಲಿಲ್ಲ. ಆ ಕಾಲದಲ್ಲಿ ಮಾತ್ರವಲ್ಲ ಮುಂದಿನ ಅನೇಕ ಶತಮಾನಗಳ ಕಾಲ ವಿಜ್ಞಾನ ಮತ್ತು ಸಂಶೋಧನೆಗೆ ನಿಲುಕಿರದ ವಿಶ್ವದ ಈ ಮಹಾನ್ ವಾಸ್ತವಿಕತೆಗಳು ಓರ್ವ ನಿರಕ್ಷರಿಯ ಬಾಯಿಯಿಂದ ಬರುವುದು ಹೇಗೆ ಸಾಧ್ಯವಾಯಿತು? ಅದು ಮಾನವ ಕೃತಿಯಾಗಿರದೆ ವಿಶ್ವದ ಸೃಷ್ಟಿಕರ್ತನ ಹಾಗೂ ಅದರ ಎಲ್ಲ ರಹಸ್ಯಗಳನ್ನು ಅರಿತ ಸರ್ವಜ್ಞನಾದ ಅಲ್ಲಾಹನಿಂದ ಅವತೀರ್ಣಗೊಂಡ ಗ್ರಂಥವಾಗಿರುವುದರಿಂದ ಮಾತ್ರ ಇದು ಸಾಧ್ಯವಾಯಿತು.

ಪವಿತ್ರ ಕುರ್‍ಆನಿನಲ್ಲಿ ಇಂದಿನ ತನಕ ಸ್ಥಿರಗೊಂಡ ಯಾವುದೇ ವೈಜ್ಞಾನಿಕ ವಾಸ್ತವಿಕತೆಗೆ ವಿರುದ್ಧವಾದ ಒಂದೇ ಒಂದು ವಿಷಯವೂ ಪ್ರಸ್ತಾಪಿಸಲ್ಪಟ್ಟಿಲ್ಲ. ಮಾತ್ರವಲ್ಲ ಅದು ಪ್ರತಿಪಾದಿಸುವ ಯಾವ ತತ್ವವನ್ನೂ ಈ ತನಕ ವೈಜ್ಞಾನಿಕವಾಗಿ ನಿರಾಕರಿಸಲು ಸಾಧ್ಯವಾಗಿಲ್ಲ ಎಂಬ ವಾಸ್ತವಿಕತೆಯೂ ಅದರ ದಿವ್ಯ ಮೂಲಕ್ಕೆ ಸಾಕೆನಿಸುವ ಪುರಾವೆಯಾಗಿದೆ.

ಇವುಗಳಲ್ಲದೆ ಪವಿತ್ರ ಕುರ್‍ಆನಿನ ಅಸದೃಶ ವಿವರಣಾ ಶೈಲಿ, ಅದರ ಅಸಾಮಾನ್ಯ ವಾಕ್‍ಝರಿ ಮತ್ತು ಅತ್ಯದ್ಭುತ ಪ್ರಭಾವ ಶಕ್ತಿಯೂ ಅದರ ದೈವಿಕ ಮೂಲಕ್ಕೆ ಇರುವ ಸ್ಪಷ್ಟ ಪುರಾವೆಗಳಲ್ಲೊಂದಾಗಿದೆ. ಅದು ನೀಡುವ ಬೋಧನೆಗಳಲ್ಲಿ ಉನ್ನತ ಮಟ್ಟದ ಸಮತೋಲನ ಮತ್ತು ಸಹಜ ವೈಚಾರಿಕತೆ ತುಂಬಿ ತುಳುಕುತ್ತಿದೆ. ಅದು ಮಾನವಕುಲಕ್ಕೆ ಒಂದು ಸಮಗ್ರ ಮತ್ತು ಸಾರ್ವಕಾಲಿಕ ಮಾರ್ಗದರ್ಶನವಾಗಿದೆ.

ಕುರ್‍ಆನಿನ ಪಂಥಾಹ್ವಾನ

ಪವಿತ್ರ ಕುರ್‍ಆನನ್ನು ದೇವಗ್ರಂಥವಲ್ಲವೆನ್ನುವವರ ಮತ್ತು ಅದನ್ನು ಮಾನವ ಕೃತಿಯೆಂದು ವಾದಿಸುವವರ ಮುಂದೆ ಅದು ಒಂದು ಪಂಥಾಹ್ವಾನವನ್ನು ಇಡುತ್ತದೆ:

“ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯ ವನ್ನಾದರೂ ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನು ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿರಿ. ನೀವು ಸತ್ಯವಾದಿಗಳಾಗಿದ್ದರೆ ಈ ಕಾರ್ಯವನ್ನು ಮಾಡಿ ತೋರಿಸಿರಿ.”     (ಪವಿತ್ರ ಕುರ್‍ಆನ್, 2:23)

ಈ ಪಂಥಾಹ್ವಾನವನ್ನು ಪ್ರಥಮತಃ ಅರಬರಿಗೆ ನೀಡಲಾಗಿತ್ತು. ಅವರಿಗೆ ತಮ್ಮ ವಾಕ್ ವೈಭವದ ಅಸದೃಶತೆಯ ಬಗ್ಗೆ ಹೆಮ್ಮೆ ಇತ್ತು. ಅವರು ಅರಬೇತರರನ್ನು ‘ಅಜಮ್’ ಅಥವಾ ‘ಮೂಕರು’ ಎನ್ನುತ್ತಿದ್ದರು. ಆದರೆ ಈ ಪಂದಾsಹ್ವಾನವನ್ನು ಕೇಳಿ ಸಂಪೂರ್ಣ ಅರಬ್ ಜನಾಂಗವು ಮೂಕವಾಯಿತು.

ಈ ಪಂಥಾಹ್ವಾನವು ಇಂದಿಗೂ ಅಸ್ತಿತ್ವದಲ್ಲಿ ಇದೆ. ಲೋಕದ ಇತರ ದೇವಗ್ರಂಥಗಳಂತೆ ಪವಿತ್ರ ಕುರ್‍ಆನಿನ ಭಾಷೆಯು ಸತ್ತು ಹೋಗಿಲ್ಲ. ಅದು ತನ್ನ ಎಲ್ಲ ನವೀನತೆಗಳ ಹೊರತಾಗಿಯೂ ತನ್ನ ಪುರಾತನ ಶೈಲಿಯನ್ನು ಪೂರ್ಣವಾಗಿ ಉಳಿಸಿಕೊಂಡಿದೆ. ಈಗಲೂ ಅದು ಕೋಟಿಗಟ್ಟಲೆ ಜನರ ಮಾತೃಭಾಷೆಯಾಗಿದೆ. ಜಗತ್ತಿನಾದ್ಯಂತ ಆ ಭಾಷೆಯನ್ನು ಬಲ್ಲ ಕೋಟಿಗಟ್ಟಲೆ ಜನರು ಇದ್ದಾರೆ. ಅವರಲ್ಲಿ ದೊಡ್ಡ ದೊಡ್ಡ ಕವಿಗಳೂ ಹೆಸರಾಂತ ಸಾಹಿತಿಗಳೂ ಇದ್ದಾರೆ. ಅವರ ಪೈಕಿ ಇಸ್ಲಾಮಿನ ಕಡು ವೈರಿಗಳೂ ಅನೇಕರಿದ್ದಾರೆ. ಅವರು ಬೇಕಾದರೆ ಈ ಪಂದಾsಹ್ವಾನವನ್ನು ಇಂದೂ ಸ್ವೀಕರಿಸಬಹುದು. ಆದರೆ 14 ಶತಮಾನಗಳ ಮೌನ ಮುರಿಯುವ ಯಾವ ಲಕ್ಷಣಗಳೂ ಗೋಚರಿಸುವುದಿಲ್ಲ.

ಸುಳ್ಳಾಡದ ವ್ಯಕ್ತಿ

ಕೊನೆಯದಾಗಿ ಪವಿತ್ರ ಕುರ್‍ಆನನ್ನು ಜಗತ್ತಿನ ಮುಂದೆ ಪ್ರಸ್ತುತಪಡಿಸಿದ ಪ್ರವಾದಿ ಮುಹಮ್ಮದ್‍ರವರು(ಸ) ಅದನ್ನು ತಮ್ಮ ಕೃತಿಯೆಂದು ಎಂದೂ ವಾದಿಸಲಿಲ್ಲ. ಬದಲಾಗಿ ಪ್ರತಿಯೊಂದು ಸಲವೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನಿಂದ ತಮ್ಮ  ಮೇಲೆ ಅವತೀರ್ಣಗೊಂಡ ಗ್ರಂಥವೆಂದೇ ಪ್ರತಿಪಾದಿಸಿದರು. ಪ್ರವಾದಿ ಮುಹಮ್ಮದ್‍ರ(ಸ) ಸತ್ಯ ಸಂಧತೆಯು ಎಲ್ಲ ರೀತಿಯಲ್ಲೂ ಸಂಶಯಾತೀತವಾಗಿದೆ. ಅವರ ಕಡುವೈರಿಗಳೂ ಅವರ ಸತ್ಯ ಸಂಧತೆ ಹಾಗೂ ಪ್ರಾಮಾಣಿಕತೆಗಳನ್ನು ನಿರಾಕರಿಸಲಿಲ್ಲ. ಪ್ರವಾದಿತ್ವಕ್ಕೆ ಮೊದಲು ಮಕ್ಕಾ ನಿವಾಸಿ ಗಳು ಅವರಿಗೆ ಸಾದಿಕ್(ಸತ್ಯವಂತ) ಮತ್ತು ಅವಿೂನ್(ಪ್ರಾಮಾಣಿಕ) ಎಂಬ ಬಿರುದುಗಳನ್ನು ನೀಡಿದ್ದರು. ಪ್ರವಾದಿತ್ವ ಘೋಷಣೆಯ ಬಳಿಕವೂ ಜನರು ಅವರ ಪ್ರವಾದಿತ್ವವನ್ನು ಬಿಟ್ಟು ಉಳಿದ ಎಲ್ಲ ವಿಷಯಗಳಲ್ಲೂ ಅವರ ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳುತ್ತಿದ್ದರು. ಒಬ್ಬ ವ್ಯಕ್ತಿ ಜೀವನದಾದ್ಯಂತ ಸತ್ಯವಂತ ನಾಗಿದ್ದು, ಯಾವುದೇ ವಿಷಯ ದಲ್ಲಿ ಜನರೊಂದಿಗೆ ಸುಳ್ಳಾಡದಿದ್ದು ತನ್ನ ಸೃಷ್ಟಿಕರ್ತನಾದ  ದೇವನ ಬಗ್ಗೆ ಇಂತಹ ಬಹಿರಂಗ ಸುಳ್ಳು ಹೇಳುವನೇ? ಅದೂ ಎಂತಹ ಸುಳ್ಳು? ಸರ್ವಜ್ಞನೂ ಸರ್ವಶ್ರುತನೂ ಸರ್ವ ವೀಕ್ಷಕನೂ ಆದ ಅಲ್ಲಾಹನ ಬಗ್ಗೆ ನಿರಂತರ 23 ವರ್ಷಗಳ ಕಾಲ ಸುಳ್ಳು ಹೇಳುತ್ತಿರಲು ಒಬ್ಬ ಸತ್ಯಸಂಧ ನಿಂದ ಸಾಧ್ಯವೇ? ತನ್ನ ಶತ್ರುಗಳ ಮೇಲೂ ಸುಳ್ಳಾರೋಪ ಹೊರಿಸದವನು ತನ್ನ ಪಾಲಕ ಪ್ರಭುವಿನ ಬಗ್ಗೆ ಸದಾ ಸುಳ್ಳು ಹೇಳುತ್ತಿದ್ದನೇ? ಮನುಷ್ಯ ವ್ಯವಹಾರಗಳಲ್ಲಿ ಎಂದೂ ಸುಳ್ಳಾಡದ ಮನುಷ್ಯ ಅಲ್ಲಾಹನ ವಿಷಯದಲ್ಲಿ ಸುಳ್ಳು ಹೇಳಿರಲು ಸಾಧ್ಯವೇ? ಮನೋವಿಜ್ಞಾನವಾಗಲೀ ಅನುಭವವಾಗಲೀ ಬುದ್ಧಿ-ವಿವೇಕಗಳಾಗಲೀ ಇದನ್ನು ಸಮರ್ಥಿಸುತ್ತದೆಯೇ? ಖಂಡಿತ ಇಲ್ಲ. ಆದ್ದರಿಂದ ಪವಿತ್ರ ಕುರ್‍ಆನ್ ದೇವ ಗ್ರಂಥವಾಗಿದೆ ಎಂಬುದಕ್ಕೆ ಪ್ರವಾದಿ ಮುಹಮ್ಮದ್‍ರವರ(ಸ) ಸಾಕ್ಷ್ಯವೇ ಅತಿ ದೊಡ್ಡ ಪುರಾವೆಯಾಗಿದೆ.

ಕಾಲಹರಣಗೊಂಡ ಗ್ರಂಥವೇ?

14 ಶತಮಾನಗಳಿಗೂ ಹಿಂದೆ ಬಂದಂತಹ ಒಂದು ಗ್ರಂಥದ ಆಧಾರದಲ್ಲಿ ಒಂದು ಆಧುನಿಕ ಸಮಾಜದ ನಿರ್ಮಾಣ ಸಾಧ್ಯವೇ? ಅದರ ಶಿಕ್ಷಣ ಮತ್ತು ಬೋಧನೆಗಳು ಕಾಲಹರಣಗೊಂಡು ಅಪ್ರಸ್ತುತವೆನಿಸಲಿವೆಯೇ? 7ನೆಯ ಶತಮಾನದ ಒಂದು ಅನಾಗರಿಕ ಸಮಾಜದ ಸುಧಾರಣೆಗೆ ಮುಂದಿಡಲ್ಪಟ್ಟಂತಹ ರೂಪರೇಷೆಯನ್ನು 21ನೆಯ ಶತಮಾನದ ಅತ್ಯಾಧುನಿಕ ಮಾನವ ಸಮಾಜಕ್ಕೆ ಅನ್ವಯಿಸುವುದು ನ್ಯಾಯವೇ? ಎಂಬಿತ್ಯಾದಿ ಪ್ರಶ್ನೆಗಳು ಪವಿತ್ರ ಕುರ್‍ಆನಿನ ಕುರಿತು ಆಧುನಿಕ ಮಾನವನ ಮನ-ಮಸ್ತಿಷ್ಕಗಳನ್ನು ಕಾಡುತ್ತಿರುತ್ತದೆ.

ಮಾನವ ನಿರ್ಮಿತ ತತ್ವ ಸಿದ್ಧಾಂತಗಳ ಬಗ್ಗೆ ಈ ರೀತಿಯ ಪ್ರಶ್ನೆಗಳು ಸಹಜ. ಆದರೆ ತ್ರಿಕಾಲಜ್ಞಾನಿಯಾದ ಸರ್ವಲೋಕ ಪ್ರಭುವಿನ ವತಿಯಿಂದ ಮಾನವಕುಲದ ಸಮಗ್ರ ಮಾರ್ಗದರ್ಶನಕ್ಕೆ ಅವತೀರ್ಣಗೊಂಡ ಗ್ರಂಥವೆಂದು ಅದನ್ನು ಒಪ್ಪಿಕೊಂಡ ಬಳಿಕ ಪವಿತ್ರ ಕುರ್‍ಆನಿನ ಕುರಿತು ಈ ರೀತಿಯ ಪ್ರಶ್ನೆಗಳು ಉಳಿಯುವುದೇ ಇಲ್ಲ. 7ನೆಯ ಶತಮಾನದ ಮಾನವನ ಗುಣವಿಶೇಷಗಳು, ಅವರ ಅಭಿರುಚಿ, ಒಲವುಗಳು, ಅವನ ಬಯಕೆ-ಬೇಡಿಕೆಗಳು, ಅವನ ಕುಂದು-ಕೊರತೆಗಳು, ಅವನ ಶಕ್ತಿ-ಸಾಮಥ್ರ್ಯ ಇತ್ಯಾದಿಗಳನ್ನು ತಿಳಿದಿದ್ದ ಅಲ್ಲಾಹನು 21ನೆಯ ಶತಮಾನದಲ್ಲಿ ಅದರಲ್ಲಿ ಉಂಟಾಗಬಹುದಾದ ಮಾರ್ಪಾಟುಗಳನ್ನೂ ಚೆನ್ನಾಗಿ ಅರಿತಿದ್ದಾನೆ.

ವೈಜ್ಞಾನಿಕ ಮತ್ತು ತಾಂತ್ರಿಕ ರಂಗದಲ್ಲಿ, ಸಂಸ್ಕøತಿ ಮತ್ತು ನಾಗರಿಕತೆಯ ಕ್ಷೇತ್ರದಲ್ಲಿ ಮಾನವನು ಎಷ್ಟು ಪ್ರಗತಿ ಸಾಧಿಸಿದರೂ ಅವನ ಮೂಲ ಪ್ರಕೃತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂಬುದು ವ್ಯಕ್ತ. ಅವನಲ್ಲಿರುವ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಉಂಟಾಗಲಿಲ್ಲ. ಆದ್ದರಿಂದ ಈ ಬಗ್ಗೆ ಅವನಿಗೆ ಸಿಗಬೇಕಾದ ಮಾರ್ಗದರ್ಶನದಲ್ಲಿಯೂ ಯಾವುದೇ ವ್ಯತ್ಯಾಸದ ಅಗತ್ಯ ಉಂಟಾಗಿಲ್ಲ.

ಇಷ್ಟು ಮಾತ್ರವಲ್ಲ, ಪವಿತ್ರ ಕುರ್‍ಆನ್ ನೀಡುವ ವಿಶ್ವಾಸ ಶ್ರದ್ಧೆಗಳು, ಆರಾಧನಾ ವಿಧಿಗಳು, ಆಚಾರ-ಸಂಪ್ರದಾಯಗಳು ಮತ್ತು ಜೀವನದ ವಿವಿಧ ರಂಗಗಳಿಗೆ ಅದು ವಿಧಿಸುವ ಬೇಕು-ಬೇಡಗಳಲ್ಲಿ ಯಾವ ವಿಷಯವೂ ಯಾವುದೇ ಕಾಲ, ದೇಶ ಮತ್ತು ಜನಾಂಗಕ್ಕೆ ಸೀಮಿತವಾದುದಿಲ್ಲ. ಅದರ ನಂಬಿಕೆಗಳು, ಆರಾಧನಾ ಕ್ರಮಗಳು ಮತ್ತು ವಿಧಿ-ನಿಷೇಧಗಳು ಸಾರ್ವಕಾಲಿಕವಾಗಿವೆ. ಮನುಷ್ಯನ ವೈಜ್ಞಾನಿಕ ಪ್ರಗತಿಯ ಯಾವ ಹಂತದಲ್ಲೂ ಅದರಲ್ಲಿ ಯಾವುದೇ ಬದಲಾವಣೆಯ ಅಗತ್ಯ ತಲೆದೋರಿಲ್ಲ. ಮುಂದೆ ಹಾಗೆ ಆಗುವ ಸಂಭವವೂ ಇಲ್ಲ.

Add Comment