ನಿನ್ನನ್ನು ನೀನರಿಯೋ ಮಾನವ!

ಅತಿದೊಡ್ಡ ಸಮಸ್ಯೆ!

“ಇಂದಿನ ಮಾನವನ ಅತಿ ದೊಡ್ಡ ಸಮಸ್ಯೆ ಯಾವುದು?” ಎಂದು ಒಂದು ಸಭೆಯಲ್ಲಿ ಜನರನ್ನು ಕೇಳಿದರೆ, ಅದಕ್ಕೆ ಒಬ್ಬೊಬ್ಬರು ಒಂದೊಂದು ಉತ್ತರ ಕೊಡಬಹುದು. ಅಣ್ವಸ್ತ್ರಗಳೇ ಆಧುನಿಕ ಮಾನವನ ಅತಿದೊಡ್ಡ ಸಮಸ್ಯೆ ಎಂದು ಒಬ್ಬನು ಹೇಳಿದರೆ, ಇನ್ನೊಬ್ಬನು ಹೆಚ್ಚುತ್ತಿರುವ ಜನಸಂಖ್ಯೆಯೇ ಮಹಾ ಸಮಸ್ಯೆ ಎನ್ನಬಹುದು. ಮತ್ತೊಬ್ಬನು ಉತ್ಪಾದನೆ ಮತ್ತು ವಿತರಣೆಯ ವ್ಯವಸ್ಥೆಯನ್ನು ಸರಿಪಡಿಸುವುದೇ ಈ ಯುಗದ ಅತಿದೊಡ್ಡ ಸಮಸ್ಯೆ ಎಂದು ಹೇಳಬಹುದು. ಒಟ್ಟಿನಲ್ಲಿ ಒಂದು ಪ್ರಶ್ನೆಗೆ ವಿವಿಧ ಬಗೆಯ ಉತ್ತರಗಳು ಬರಬಹುದು.

ಮನುಷ್ಯನು ಇನ್ನೂ ಮನುಷ್ಯನನ್ನು ಗುರುತಿಸಿಲ್ಲ ಎಂಬುದೇ ಹೀಗಾಗಲು ಕಾರಣ. ಒಂದು ವೇಳೆ ಆತ ತನ್ನನ್ನೇ ತಾನು ಅರಿತಿದ್ದರೆ ಈ ರೀತಿ ವಿವಿಧ ಉತ್ತರಗಳು ಬರುತ್ತಿರಲಿಲ್ಲ. ಎಲ್ಲರ ಉತ್ತರ ಒಂದೇ ಆಗಿರುತ್ತಿತ್ತು. ಮನುಷ್ಯನು ತನ್ನ ವಾಸ್ತವಿಕತೆ ಯನ್ನು ಮರೆತಿರುವುದೇ ಇಂದಿನ ಅತಿದೊಡ್ಡ ಸಮಸ್ಯೆ ಎಂದೇ ಎಲ್ಲರೂ ಹೇಳುತ್ತಿ ದ್ದರು. ತನಗೊಂದು ದಿನ ಸಾಯಲಿಕ್ಕಿದೆ, ಸತ್ತ ನಂತರ ತನ್ನ ಒಡೆಯನ ಮುಂದೆ ತನ್ನ ಬದುಕಿನ ಬಗ್ಗೆ ಲೆಕ್ಕ ಸಮರ್ಪಿಸಲಿಕ್ಕಿದೆ ಎಂಬುದನ್ನು ಮನುಷ್ಯನು ನಿಜಕ್ಕೂ ಮರೆತಿದ್ದಾನೆ. ನಾವು ಜೀವನದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡರೆ ಇಹಲೋಕದ ಬದಲು ಪರಲೋಕವನ್ನೇ ನಮ್ಮ ನಿಜವಾದ ಸಮಸ್ಯೆಯೆಂದು ಪರಿಗಣಿಸುವೆವು.

ಇಂದು ಕೂಡಾ ಲೋಕದ ಹೆಚ್ಚಿನೆಲ್ಲ ಮನುಷ್ಯರು ದೇವನನ್ನೂ ಪರಲೋಕವನ್ನೂ ನಂಬುತ್ತಾರೆ. ಅವರು ಈ ವಾಸ್ತವಗಳನ್ನು ನಿರಾಕರಿಸುವುದಿಲ್ಲ. ಆದರೆ ಅವರ ಈ ನಂಬಿಕೆಗೂ ಅವರ ಕರ್ಮಗಳಿಗೂ ಯಾವುದೇ ನಂಟು ಇಲ್ಲವಾಗಿದೆ. ನಿಜ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇಹ ಜೀವನವನ್ನು ಯಾವ ರೀತಿ ಯಶಸ್ವಿಗೊಳಿಸಬೇಕು ಎಂಬ ಬಗ್ಗೆ ಮಾತ್ರ ಚಿಂತಿಸುತ್ತಾನೆ.

ಒಂದು ದಿನ ನಮ್ಮ ವೈಜ್ಞಾನಿಕ ವೀಶ್ಷೇಷಣಾ ಕೇಂದ್ರಗಳು ಹಠಾತ್ತನೆ, “ಭೂಮಿ ತನ್ನ ಗುರುತ್ವಾಕರ್ಷಣ ಶಕ್ತಿಯನ್ನು ಕಳೆದುಕೊಂಡಿದೆ. ಅದು ಗಂಟೆಗೆ ಆರು ಸಾವಿರ ಮೈಲು ವೇಗದಲ್ಲಿ ಸೂರ್ಯನೆಡೆಗೆ ಸೆಳೆಯಲ್ಪಡುತ್ತಿದೆ” ಎಂದು ಘೋಷಿಸಿ ಬಿಟ್ಟರೆ ಆ ಕ್ಷಣವೇ ಇಡೀ ಭೂಮಿಯಲ್ಲಿ ಕೋಲಾಹಲವೆದ್ದೀತು. ಏಕೆಂದರೆ ಕೆಲವೇ ದಿನಗಳಲ್ಲಿ ಈ ಭೂಮಿಯಲ್ಲಿನ ಎಲ್ಲ ಜೀವಿಗಳು ನಾಶವಾಗುವುವು ಎಂಬುದೇ ಈ ಪ್ರಕಟನೆಯ ಅರ್ಥವಲ್ಲವೇ?

ನಿಜವಾಗಿ ಈ ಜಗತ್ತು ಇದಕ್ಕಿಂತಲೂ ದೊಡ್ಡ ವಿಪತ್ತೊಂದನ್ನು ಎದುರಿಸುತ್ತಿದೆ. ಆದರೆ ಆ ವಿಪತ್ತಿನ ಬಗ್ಗೆ ಯಾರೂ ಚಿಂತಿತರಾಗಿಲ್ಲ. ಆ ವಿಪತ್ತು ಯಾವುದು?

ಅದುವೇ ಅಂತಿಮ ದಿನ ಅಥವಾ ಪ್ರಳಯ ದಿನದ ವಿಪತ್ತು. ಭೂಮಿ-ಆಕಾಶ ಗಳನ್ನು ಸೃಷ್ಟಿಸಲಾದ ದಿನವೇ, ಮುಂದೊಂದು ದಿನ ಅವು ಈ ವಿಪತ್ತಿಗೆ ಸಿಲುಕುವುದು ನಿರ್ಣಯವಾಗಿದೆ. ನಾವೆಲ್ಲರೂ ಬಹಳ ವೇಗವಾಗಿ ಆ ವಿಪತ್ತಿನೆಡೆಗೇ ಸಾಗುತ್ತಿದ್ದೇವೆ. ನಂಬಿಕೆಯ ಮಟ್ಟಿಗೆ ಪ್ರತಿಯೊಬ್ಬರೂ ಈ ಸತ್ಯವನ್ನು ಒಪ್ಪುತ್ತಾರೆ. ಆದರೆ ಈ ವಿಷಯದ ಕುರಿತು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವನ್ನು ಮನಗಂಡವರು ಮಾತ್ರ ಬಹಳ ಕಡಿಮೆ.

ನೀವು ಸಂಜೆಯ ಹೊತ್ತು ಯಾವುದಾದರೂ ಪೇಟೆಗೆ ಹೋಗಿ ಅಲ್ಲಿ ಇರುವ ಜನರ ಚಟುವಟಿಕೆಗಳನ್ನೆಲ್ಲಾ ನೋಡಿ ಅವರ ಉದ್ದೇಶವನ್ನು ಗಮನಿಸಿದರೆ, ಇಂದಿನ ಮಾನವರು ಯಾವುದನ್ನು ತಮ್ಮ ನೈಜ ಸಮಸ್ಯೆಯೆಂದು ಪರಿಗಣಿಸುತ್ತಿದ್ದಾರೆಂಬುದು ನಿಮಗೆ ಸ್ಪಷ್ಟವಾಗಿ ಬಿಡುತ್ತದೆ. ಸ್ವಲ್ಪ ಊಹಿಸಿ! ಆ ಪೇಟೆಗೆ ಅಷ್ಟೆಲ್ಲಾ ವಾಹನಗಳು ಏಕೆ ಬಂದು ಹೋಗುತ್ತಿವೆ? ವ್ಯಾಪಾರಿಗಳೇಕೆ ಆ ರೀತಿ ಅಂಗಡಿಗಳನ್ನಿಟ್ಟು ಕುಳಿತಿದ್ದಾರೆ? ಜನರೇಕೆ ಅಲ್ಲಿಗೆ ಅಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆಯುತ್ತಿದ್ದಾರೆ? ಅವರು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ? ಅಲ್ಲಿ ಒಬ್ಬರು ಇನ್ನೊಬ್ಬರನ್ನು ಕಂಡು ಮಾತನಾಡುತ್ತಿರುವುದರ ಉದ್ದೇಶವೇನು? ಜನರು ಯಾವುದರಲ್ಲಿ ಆಸಕ್ತರಾಗಿದ್ದಾರೆ? ಅವರ ಪ್ರತಿಭೆ-ಸಾಮರ್ಥ್ಯಗಳು, ಅವರ ಜೇಬಿನ ಹಣ ಇವೆಲ್ಲಾ ಯಾತಕ್ಕಾಗಿ ಬಳಕೆಯಾಗುತ್ತಿವೆ? ಸಂತುಷ್ಟರಾಗಿರುವವರು ತಮಗೆ ಏನು ಸಿಕ್ಕಿತೆಂಬ ಕಾರಣಕ್ಕಾಗಿ ಸಂತುಷ್ಟರಾಗಿದ್ದಾರೆ? ಸಪ್ಪೆ ಮೋರೆ ಹಾಕಿ ಕೊಂಡಿರುವವರು ಆ ರೀತಿ ಸಪ್ಪೆಯಾಗಿರಲು ಕಾರಣವೇನಿರಬಹುದು? ಜನರು ತಮ್ಮ ಮನೆಯಿಂದ ಏನನ್ನು ತರುತ್ತಾರೆ? ಮರಳಿ ಏನನ್ನು ಮನೆಗೆ ಒಯ್ಯಬಯಸುತ್ತಾರೆ!

ಜನರ ಚಟುವಟಿಕೆಗಳು, ಅವರ ಮಾತುಕತೆ, ವ್ಯವಹಾರ ಇತ್ಯಾದಿಗಳನ್ನೆಲ್ಲಾ ನೋಡಿ ಅದರಿಂದ ಮೇಲಿನ ಪ್ರಶ್ನೆಗಳಿಗೆಲ್ಲಾ ಉತ್ತರ ಕಂಡುಕೊಳ್ಳಲು ನಿಮಗೆ ಸಾಧ್ಯ ವಾದರೆ, ಇಂದಿನ ಮನುಷ್ಯನು ಯಾವ ವಸ್ತುವನ್ನು ತನ್ನ ನೈಜ ಸಮಸ್ಯೆಯೆಂದು ಪರಿಗಣಿಸಿದ್ದಾನೆ ಮತ್ತು ಅವನು ಏನನ್ನು ಸಂಪಾದಿಸ ಬಯಸುತ್ತಾನೆ ಎಂಬ ಪ್ರಶ್ನೆಯ ಉತ್ತರವೂ ನಿಮಗೆ ಖಂಡಿತ ಸಿಗುತ್ತದೆ.

ವಾಸ್ತವದಲ್ಲಿ ಈ ಪೇಟೆ-ಮಾರುಕಟ್ಟೆಗಳು, ಜನನಿಬಿಡ ಬೀದಿಗಳು ಮತ್ತು ಜನರ ನಿರಂತರ ಚಲನವಲನಗಳೆಲ್ಲಾ ಇಂದಿನ ಮಾನವ ತನ್ನ ಸ್ವೇಚ್ಛೆಯ ಬೆನ್ನಟ್ಟುತ್ತಿದ್ದಾನೆ ಮತ್ತು ಪರಲೋಕದ ಬದಲು ಇಹಲೋಕದ ಯಶಸ್ಸನ್ನು ಸಾಧಿಸ ಬಯಸುತ್ತಾನೆ ಎಂಬುದನ್ನೇ ಸಾರಿ ಹೇಳುತ್ತಿವೆ. ಇಂದಿನ ಮಾನವ ಸಂತುಷ್ಟ ನೆಂದಾದರೆ ಆತನ ಲೌಕಿಕ ಇಚ್ಛೆಗಳು ಈಡೇರಿವೆ ಎಂಬುದೇ ಆ ಸಂತಸಕ್ಕೆ ಕಾರಣ, ಆತ ದುಃಖಿತನೆಂದಾದರೆ ಆತನ ಲೌಕಿಕ ಇಚ್ಛೆಗಳು ಈಡೇರುತ್ತಿಲ್ಲ ಎಂಬುದೇ ಆ ದುಃಖಕ್ಕೆ ಕಾರಣ.

ಇಂದಿನ ಅಗತ್ಯಗಳ ಪೂರೈಕೆ, ಇಂದಿನ ಸುಖ, ಇಂದಿನ ಗೌರವ, ಇಂದಿನ ಲಾಭ… ಇವುಗಳನ್ನು ಗಳಿಸುವುದೇ ಗೆಲುವು ಎಂದು ಜನರು ಭಾವಿಸುತ್ತಿದ್ದಾರೆ. ಹಾಗೆಯೇ ಇವುಗಳನ್ನೆಲ್ಲಾ ಗಳಿಸಲು ಸಾಧ್ಯವಾಗದೆ ಹೋದರೆ ಅವರ ದೃಷ್ಟಿಯಲ್ಲಿ ಅದುವೇ ಸೋಲು. ಆದ್ದರಿಂದ ಸಂಪೂರ್ಣ ಮನುಷ್ಯ ಪರಿವಾರವಿಂದು ಇದೇ ವಸ್ತುಗಳ ಹಿಂದೆ ಓಡುತ್ತಿದೆ. ಮುಂದಿನ ಬದುಕಿನ ಚಿಂತೆ ಯಾರಿಗೂ ಇಲ್ಲವಾಗಿದೆ. ಪ್ರತಿಯೊಬ್ಬನೂ ಇಂದಿನ ಬಗ್ಗೆ ಚಿಂತಿತನಾಗಿದ್ದು, ಇಂದಿನ ಬೆನ್ನು ಹತ್ತಿದ್ದಾನೆ.

ಇದು ಕೇವಲ ದೊಡ್ಡದೊಡ್ಡ ನಗರಗಳ ವಿಷಯವಲ್ಲ, ಕೆಲವೇ ಮಂದಿ ತಿರುಗಾಡುವಂತಹ ಸಣ್ಣಪುಟ್ಟ ಪ್ರದೇಶಗಳಲ್ಲೂ ಜನರ ಅವಸ್ಥೆ ಇಷ್ಟೇ. ನೀವು ಯಾರನ್ನು ಬೇಕಿದ್ದರೂ ನೋಡಿ, ಪ್ರತಿಯೊಬ್ಬನೂ ಇದೇ ಚಿಂತೆಯಲ್ಲಿ ಮಗ್ನನಾಗಿದ್ದಾನೆ. ಗಂಡಿರಲಿ – ಹೆಣ್ಣಿರಲಿ, ಬಡವನಿರಲಿ – ಶ್ರೀಮಂತನಿರಲಿ, ತರುಣನಿರಲಿ – ವೃದ್ಧನಿರಲಿ, ವಿದ್ಯಾವಂತನಿರಲಿ – ಅವಿದ್ಯಾವಂತನಿರಲಿ, ಹಳ್ಳಿಗನಿರಲಿ- ಪಟ್ಟಣಿಗನಿರಲಿ, ಮಾತ್ರವಲ್ಲ ಧಾರ್ಮಿಕ ವ್ಯಕ್ತಿಯಿರಲಿ ಅಥವಾ ಧಾರ್ಮಿಕನಲ್ಲ ದವನಿರಲಿ… ಪ್ರತಿಯೊಬ್ಬರೂ ಒಂದೇ ದಿಕ್ಕಿನೆಡೆಗೆ ಓಡುತ್ತಿದ್ದಾರೆ. ಲೋಕದಲ್ಲಿ ತನಗೆ ಸಾಧ್ಯವಿದ್ದಷ್ಟು ಹೆಚ್ಚು ಸಂಪಾದಿಸಬೇಕು ಎಂಬುದೇ ಪ್ರತಿಯೊಬ್ಬನ ಮಹದಾಶೆ ಆಗಿರುತ್ತದೆ, ಇದನ್ನೇ ಅವರು ತಮ್ಮ ಕರ್ತವ್ಯ ಎಂದು ಭಾವಿಸಿದ್ದಾರೆ. ತಮ್ಮ ಅತ್ಯುತ್ತಮ ಸಮಯ-ಸಾಮರ್ಥ್ಯಗಳನ್ನೆಲ್ಲಾ ಇದಕ್ಕಾಗಿಯೇ ಮುಡಿಪಿಟ್ಟಿದ್ದಾರೆ. ಹಗಳಿರುಳೂ ಇದೇ ಚಿಂತೆಯಲ್ಲಿ ಮುಳುಗಿರುತ್ತಾರೆ. ಕೊನೆಗೆ ತಮ್ಮ ಧರ್ಮ-ನಂಬಿಕೆ, ಆತ್ಮಸಾಕ್ಷಿ ಎಲ್ಲವನ್ನೂ ಅಡವಿಟ್ಟು ಅಥವಾ ಮಾರಿ ಲೌಕಿಕ ಯಶಸ್ಸು ಸಿಗುತ್ತದೆಂದಾದರೆ ಅವರು ಅದಕ್ಕೂ ಸಿದ್ಧ. ಲೌಕಿಕತೆಯ ‘ಭೂತ’ದೆದುರು ಎಲ್ಲವನ್ನೂ ಬಲಿಕೊಡಲು ಅವರು ತಯಾರು. ಅವರಿಗೆ ಲೌಕಿಕ ಸುಖ ಬೇಕು ಅದು ಹೇಗೆ ಸಿಕ್ಕಿದರೂ ಆದೀತು.

ಆದರೆ, ಈ ರೀತಿ ಸಿಗುವ ಯಶಸ್ಸು ಕೇವಲ ಈ ಲೋಕದ ಯಶಸ್ಸಾಗಿರುತ್ತದೆ. ಪರಲೋಕದಲ್ಲಿ ಇದು ಯಾವ ಕೆಲಸಕ್ಕೂ ಬಾರದು. ಈ ರೀತಿ ಲೌಕಿಕ ಯಶಸ್ಸಿನ ಚಿಂತೆಯಲ್ಲಿ ಮಗ್ನನಾಗಿ, ಪರಲೋಕದ ಯಶಸ್ಸಿನ ಬಗ್ಗೆ ಮರೆತು ಬಿಟ್ಟವನು ತನ್ನ ಯೌವನದಲ್ಲಿ, ತನ್ನ ವೃದ್ಧಾಪ್ಯಕ್ಕಾಗಿ ಏನೂ ಮಾಡಿಡದ ವ್ಯಕ್ತಿಗೆ ಸಮಾನನೆನ್ನ ಬಹುದು. ಆತ ಮುದುಕನಾಗಿ, ನಿಶ್ಶಕ್ತನಾಗಿ, ಇನ್ನು ಅವನಿಂದ ಕೆಲಸವೇನೂ ಮಾಡಲಿಕ್ಕಾಗುವುದಿಲ್ಲ ಎಂದಾದಾಗ, ಹಠಾತ್ತನೆ ಅವನಿಗೆ ತನಗೀಗ ಯಾವುದೇ ನೆಲೆ ಇಲ್ಲ ಎಂಬುದು ಮನವರಿಕೆಯಾಗುತ್ತದೆ. ಆದರೆ ಆಗ ಅವನಿಗೆ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ವಿವಿಧ ಋತುಗಳಲ್ಲಿ ತನ್ನನ್ನು ಸುರಕ್ಷಿತ ವಾಗಿಡಲು ಬೇಕಾದ ವಸ್ತ್ರಾದಿಗಳು ತನ್ನಲ್ಲಿಲ್ಲ ಎಂಬುದು ಅವನಿಗೆ ತಿಳಿಯುತ್ತದೆ. ಆದರೆ ಆ ವಸ್ತುಗಳನ್ನು ಸಂಪಾದಿಸಿ ತರಲು ಅವನಿಗೆ ಸಾಧ್ಯವಾಗುವುದಿಲ್ಲ. ತನ್ನ ಬಳಿ ಆಹಾರವೇನೂ ಇಲ್ಲ ಎಂಬುದು ಅವನಿಗೆ ತಿಳಿಯುತ್ತದೆ. ಆದರೆ ಆಹಾರ ಸಂಪಾದಿಸಿ ತರುವ ಸಾಮರ್ಥ್ಯ ಅವನಲ್ಲಿರುವುದಿಲ್ಲ. ಆತ ಹತಾಶನಾಗುತ್ತಾನೆ. ಯಾರದೋ ಜಗಲಿಯಲ್ಲಿ ಬಿದ್ದು ಕೊಂಡಿರುತ್ತಾನೆ. ಅವನನ್ನು ಕಂಡರೆ ನಾಯಿಗಳು ಬೊಗಳ ತೊಡಗುತ್ತವೆ, ಮಕ್ಕಳು ಕಲ್ಲೆಸೆಯುತ್ತಾರೆ, ಇಂತಹ ದೃಶ್ಯಗಳನ್ನು ನಾವು ನಿತ್ಯ ಕಾಣುತ್ತಿರುತ್ತೇವೆ. ಈ ಲೋಕದಲ್ಲಿರುವಾಗ ಪರಲೋಕಕ್ಕಾಗಿ ಸಂಪಾದಿಸದ ವ್ಯಕ್ತಿ ಪರಲೋಕದಲ್ಲಿ ಎಂತಹ ದುಸ್ಥಿತಿಗೆ ಒಳಗಾಗಬೇಕಾದೀತು ಎಂಬುದನ್ನು ಊಹಿಸಲು ಇಂತಹ ದೃಶ್ಯಗಳು ಸ್ವಲ್ಪಮಟ್ಟಿಗೆ ನಮಗೆ ಸಹಾಯಕವಾಗುತ್ತವೆ. ಆದರೆ ಇಷ್ಟಾಗಿಯೂ ನಮ್ಮಲ್ಲಿ ಯಾವುದೇ ಕಳಕಳಿ ಉಂಟಾಗುವುದಿಲ್ಲ! ನಮ್ಮ ಪೈಕಿ ಪ್ರತಿಯೊಬ್ಬನೂ ನಾಳಿನ ಬಗ್ಗೆ ನಿಶ್ಚಿಂತನಾಗಿ ಕೇವಲ ಇಂದಿನ ಬಗ್ಗೆ ಮಾತ್ರ ಚಿಂತಿತನಾಗಿದ್ದಾನೆ.

ಯುದ್ಧದ ದಿನಗಳಲ್ಲಿ ಶತ್ರುಗಳ ವಿಮಾನ ದಾಳಿಯ ಬಗ್ಗೆ ಎಚ್ಚರಿಕೆ ಕೊಡಲು ಸೈರನ್ ಬಾರಿಸಲಾಗುತ್ತದೆ. “ಶತ್ರುವಿನ ವಿಮಾನಗಳು ಮಾರಕ ಬಾಂಬುಗಳನ್ನು ನಿಮ್ಮ ಮೇಲೆ ಸುರಿಸಲು ಧಾವಿಸಿ ಬರುತ್ತಿವೆ. ಕೆಲವೇ ಕ್ಷಣಗಳಲ್ಲಿ ಈ ನಿಮ್ಮನಗರ ಹೊಗೆ ಮತ್ತು ಅಗ್ನಿಜ್ವಾಲೆಗಳಿಂದ ತುಂಬಿ ಹೋಗುವುದು. ತಕ್ಷಣ ಓಡಿ ಹೋಗಿ ಸುರಕ್ಷಿತ ತಾಣಗಳಲ್ಲಿ ಅವಿತುಕೊಳ್ಳಿ” ಎಂದು ಈ ಸೈರನ್ ಧ್ವನಿಯು ಸೂಚಿಸಿದಾಗ ಪ್ರತಿಯೊಬ್ಬರೂ ಎಲ್ಲವನ್ನೂ ಮರೆತು ಸುರಕ್ಷಿತ ತಾಣಗಳೆಡೆಗೆ ಓಡತೊಡಗುತ್ತಾರೆ. ಅತ್ಯಂತ ಜನನಿಬಿಡವಾಗಿದ್ದ ರಸ್ತೆಗಳು ಕ್ಷಣ ಮಾತ್ರದಲ್ಲಿ ನಿರ್ಜನವಾಗಿ ಬಿಡುತ್ತವೆ. ಸೈರನ್‍ನ ಶಬ್ದ ಕೇಳಿಯೂ ಹೀಗೆ ಓಡಿ ಹೋಗದ ವ್ಯಕ್ತಿಯನ್ನು ಜನರು ಮೂರ್ಖನೆನ್ನುವರು ಅಥವಾ ಅವನ ತಲೆ ಕೆಟ್ಟಿದೆ ಎಂದು ಭಾವಿಸುವರು.

ಇದು ಒಂದು ಸಣ್ಣ ಲೌಕಿಕ ವಿಪತ್ತಿನ ಮಾತಾಯಿತು. ಆದರೆ ಇದಕ್ಕಿಂತ ಬಹಳಷ್ಟು ದೊಡ್ಡ ವಿಪತ್ತೊಂದು ಖಚಿತವಾಗಿ ನಮಗೆ ಎದುರಾಗಲಿಕ್ಕಿದೆ. ಆ ವಿಪತ್ತಿನ ಬಗ್ಗೆ ಜಗತ್ತಿನ ಸೃಷ್ಟಿಕರ್ತನೇ ಎಚ್ಚರಿಕೆ ಕೊಟ್ಟಿದ್ದಾನೆ: “ಜನರೇ! ನನ್ನನ್ನು ಆರಾಧಿಸಿರಿ, ಪರಸ್ಪರರ ಹಕ್ಕು-ಬಾಧ್ಯತೆಗಳನ್ನು ಪಾಲಿಸಿರಿ, ನನ್ನ ಆಜ್ಞೆಗನುಸಾರ ಬದುಕು ಸಾಗಿಸಿರಿ, ಇದಕ್ಕೆ ತದ್ವಿರುದ್ಧವಾಗಿ ನಡೆದವರಿಗೆ ಅವರು ಊಹಿಸಲಿಕ್ಕೂ ಸಾಧ್ಯವಿಲ್ಲದಷ್ಟು ಉಗ್ರ ಶಿಕ್ಷೆ ಕೊಡಲಾಗುವುದು, ಅವರು ಅತ್ಯಂತ ಯಾತನಾಮಯವಾದ ನಿರಂತರ ಶಿಕ್ಷೆ ಯೊಂದನ್ನು ಶಾಶ್ವತವಾಗಿ ಅನುಭವಿಸುತ್ತಿರುವರು. ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವರಿಗೆಂದೂ ಸಾಧ್ಯವಾಗದು…” ಎಂಬ ಸಂದೇಶವನ್ನು ಅವನು ತನ್ನ ಪ್ರವಾದಿಗಳ ಮೂಲಕ ಜಗತ್ತಿಗೆ ಕೊಟ್ಟಿರುವನು.

ಈ ಸಂದೇಶವನ್ನು ಪ್ರತಿಯೊಬ್ಬರೂ ಕೇಳಿದ್ದಾರೆ. ಪ್ರತಿಯೊಬ್ಬರೂ ಇದು ಸರಿಯೆಂದು ಒಂದಲ್ಲೊಂದು ರೀತಿಯಲ್ಲೂ, ಮಾತಿನಲ್ಲೂ ಒಪ್ಪುತ್ತಾರೆ. ಆದರೂ ಜನರು ಇಷ್ಟೊಂದು ದೊಡ್ಡ ವಿಷಯವನ್ನು, ಏನೂ ಇಲ್ಲ ಎಂಬ ರೀತಿಯಲ್ಲಿ ಕಡೆಗಣಿಸುತ್ತಿದ್ದಾರೆ. ಲೌಕಿಕ ಲೌಭ ಗಳಿಸಲಿಕ್ಕಾಗಿ, ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ. ಜೀವನದ ಗಾಡಿ ಯಾವ ಮಾರ್ಗದಲ್ಲಿ ಹೋಗುವುದು ನಿಷಿದ್ಧವೋ, ಆ ಮಾರ್ಗದಲ್ಲೇ ವೇಗವಾಗಿ ಓಡುತ್ತಿದೆ. ಸೇನಾ ಕೇಂದ್ರದಿಂದ ಕೇಳಿಸುವ ಸೈರನ್‍ನ ಸಂದೇಶವನ್ನು ಪಾಲಿಸಲು ಪ್ರತಿಯೊಬ್ಬರೂ ತಕ್ಷಣವೇ ಲಗುಬಗೆಯಿಂದ ಧಾವಿಸುತ್ತಾರೆ. ಆದರೆ ವಿಶ್ವದೊಡೆಯನು ಯಾವ ವಿಪತ್ತಿನ ವಿರುದ್ಧ ಎಚ್ಚರಿಸಿರುವನೋ ಅದರ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಿಲ್ಲ, ಅವನ ಕರೆಗೆ ‘ಓ’ಗೊಟ್ಟು ಧಾವಿಸುತ್ತಿಲ್ಲ.

ಇದಕ್ಕೆ ಕಾರಣವೇನು?

ಸೇನಾ ಕೇಂದ್ರದಿಂದ ಹೊರಟ ಸೈರನ್ ಧ್ವನಿಯು ಯಾವ ಅಪಾಯದ ವಿರುದ್ಧ ಎಚ್ಚರಿಸುತ್ತದೋ ಆ ಅಪಾಯ, ಸಾಕ್ಷಾತ್ ಇದೇ ಲೋಕದಲ್ಲಿ ಮನುಷ್ಯನ ಕಣ್ಣ ಮುಂದೆಯೇ ಸಂಭವಿಸಲಿದ್ದು ಅದರ ಪರಿಣಾಮವನ್ನು ಅವನು ತಕ್ಷಣವೇ ಅನುಭವಿಸಬೇಕಾಗುತ್ತದೆ. ಆದರೆ ದೇವನು ಯಾವ ಅಪಾಯದ ಬಗ್ಗೆ ಸೂಚಿಸುತ್ತಿರು ವನೋ ಅದು ಎದುರಾಗುವುದು ಮರಣಾನಂತರ ಮಾತ್ರ. ನಮ್ಮ ಮತ್ತು ಆ ವಿಪತ್ತಿನ ಮಧ್ಯೆ ಮರಣವೆಂಬ ಗೋಡೆಯೊಂದು ಅಡ್ಡವಿದೆ. ಆದ್ದರಿಂದ ನಾವಿಂದು ಆ ವಿಪತ್ತನ್ನು ಕಣ್ಣಾರೆ ಕಾಣುವ ಸ್ಥಿತಿಯಲ್ಲಿಲ್ಲ. ವಿಮಾನಗಳಾಗಲೀ, ಬಾಂಬು ಗಳಾಗಲೀ, ಬೆಂಕಿಯಾಗಲೀ, ಹೊಗೆಯಾಗಲೀ ಯಾವುದೂ ನಮಗೆ ಕಾಣಿಸುತ್ತಿಲ್ಲ. ಆದ್ದರಿಂದಲೇ ವಿಮಾನ ದಾಳಿಯ ಬಗ್ಗೆ ಸೈರನ್ ಮೂಲಕ ಕೊಡಲಾಗುವ ಎಚ್ಚರಿಕೆಯನ್ನು ನಾವು ನಂಬುತ್ತೇವಾದರೂ ದೇವನು ಅದಕ್ಕಿಂತ ದೊಡ್ಡ ಮಹಾ ವಿಪತ್ತೊಂದರ ಬಗ್ಗೆ ಎಚ್ಚರಿಸುವಾಗ ಅದನ್ನು ಕೇಳಿ ನಮಗೆ ಕಳವಳವಾಗುವುದಿಲ್ಲ. ಕರ್ಮರಂಗಕ್ಕೆ ಇಳಿಯುವುದನ್ನು ನಮ್ಮ ಪಾಲಿಗೆ ಅನಿವಾರ್ಯಗೊಳಿಸುವಂತಹ ಅಥವಾ ಅದಕ್ಕೆ ನಿರ್ಬಂಧಿಸುವಂತಹ ವಿಶ್ವಾಸ ನಮಗೆ ಈ ಎಚ್ಚರಿಕೆಯ ಮೇಲಿಲ್ಲ.

ಅಲ್ಲಾಹನು ನಮಗೆ ನಮ್ಮ ಮುಂದಿರುವ ವಸ್ತುಗಳನ್ನಷ್ಟೇ ನೋಡಬಲ್ಲ ಹಣೆಯ ಕೆಳಗಿನ ಎರಡು ಕಣ್ಣುಗಳನ್ನು ಮಾತ್ರ ಕೊಟ್ಟಿರುವುದಲ್ಲ, ಜೊತೆಗೆ ಬಹಳಷ್ಟು ದೂರದವರೆಗೆ ನೋಡಬಲ್ಲ, ಅಡಗಿರುವಂತಹ ವಾಸ್ತವಿಕತೆಗಳನ್ನು ಗುರುತಿಸಬಲ್ಲ ಇನ್ನೊಂದು ಕಣ್ಣನ್ನೂ ಅವನು ನಮಗೆ ದಯಪಾಲಿಸಿರುವನು. ಅದುವೇ ಬುದ್ದಿsಯ ಕಣ್ಣು. ಪ್ರಸ್ತುತ ವಿಪತ್ತಿನ ಬಗ್ಗೆ ಮತ್ತು ಪರಲೋಕದ ಬಗ್ಗೆ ಜನರಿಗೆ ಸರಿಯಾದ ವಿಶ್ವಾಸ ಇಲ್ಲದಿರಲು, ಅವರು ಈ ಕಣ್ಣನ್ನು ಬಳಸದಿರುವುದೇ ಕಾರಣ. ಯಾವುದು ಕಣ್ಣಿಗೆ ಕಾಣಿಸುತ್ತದೋ ಅದುವೇ ಸತ್ಯ ಎಂದು ಅವರು ನಂಬಿಕೊಂಡಿದ್ದಾರೆ. ನಿಜವಾಗಿ ನಮ್ಮ ಕಣ್ಣಿಗೆ ಕಾಣಿಸದೆ ಇರುವ ವಸ್ತುವೇ, ಕಣ್ಣಿಗೆ ಕಾಣಿಸುವ ವಸ್ತುವಿಗಿಂತ ಹೆಚ್ಚು ವಿಶ್ವಾಸಯೋಗ್ಯ ಹಾಗೂ ವಾಸ್ತವವಾಗಿದೆ ಎಂಬುದು ಚಿಂತನೆಯಿಂದ ತಿಳಿಯುತ್ತದೆ.

ಈ ಲೋಕದಲ್ಲಿ ಪ್ರತಿಯೊಬ್ಬನೂ ಒಪ್ಪುವ ಸತ್ಯ ಯಾವುದು? ಎಂದು ಪ್ರಶ್ನಿಸಿದರೆ ಅದಕ್ಕಿರುವ ಒಂದೇ ಉತ್ತರ ಮರಣ. ಮರಣ ಸತ್ಯ ಎಂಬುದನ್ನು ಹಿರಿಯ-ಕಿರಿಯರೆನ್ನದೆ ಎಲ್ಲರೂ ಒಪ್ಪುತ್ತಾರೆ. ಯಾವುದೇ ಕ್ಷಣದಲ್ಲಿ ತನ್ನನ್ನು ಮರಣವು ಬಂದು ಆವರಿಸಬಹುದು ಎಂಬುದು ನಮ್ಮ ಪೈಕಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಸಾಮಾನ್ಯವಾಗಿ ಮರಣದ ಆಲೋಚನೆ ಬಂದಾಗಲೆಲ್ಲಾ ಜನರು, “ನನ್ನ ಮರಣದ ಅನಂತರ ನನ್ನ ಮಕ್ಕಳ ಗತಿಯೇನು?” ಎಂದು ಮಾತ್ರ ಚಿಂತಿಸುತ್ತಾರೆ. ಮರಣಕ್ಕೆ ಮುಂಚೆ ಅವರು ತಮ್ಮ ಸ್ವಂತ ಬದುಕಿನ ಬಗ್ಗೆ ಬಹಳಷ್ಟು ಚಿಂತಿಸಿರುತ್ತಾರೆ, ಆದರೆ ಮರಣದ ಅನಂತರದ ಪ್ರಶ್ನೆ ಬಂದಾಗ ಅವರು ಕೇವಲ ತಮ್ಮ ಮನೆ ಮತ್ತು ಮಡದಿ ಮಕ್ಕಳ ಬಗ್ಗೆ ಚಿಂತಿಸಲು ತೊಡಗುತ್ತಾರೆ. ತಮ್ಮ ಮಕ್ಕಳ ಭವಿಷ್ಯದ ನಿರ್ಮಾಣಕ್ಕಾಗಿ ಅವರು ತಮ್ಮ ಸಂಪೂರ್ಣ ಜೀವನವನ್ನು ಸವೆಸಿ ಶ್ರಮಿಸುತ್ತಾರೆ. ಆದರೆ ಸ್ವತಃ ತಮ್ಮ ಭವಿಷ್ಯದ ನಿರ್ಮಾಣಕ್ಕಾಗಿ ಅವರು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅವರ ವರ್ತನೆ ನೋಡಿದರೆ, ಅವರ ಮರಣಾನಂತರ ಅವರ ಮಕ್ಕಳು ಮಾತ್ರ ಉಳಿಯಲಿದ್ದು, ಸ್ವತಃ ಅವರ ಅಸ್ತಿತ್ವ ಸಂಪೂರ್ಣ ನಾಸ್ತಿಯಾಗಿ ಬಿಡುವುದರಿಂದ, ತಮ್ಮ ಭವಿಷ್ಯಕ್ಕಾಗಿ ಏನನ್ನಾದರೂ ಮಾಡಿಡುವ ಅಗತ್ಯವೇ ಅವರಿಗಿಲ್ಲವೋ ಎಂಬಂತಿದೆ.

ಮರಣಾನಂತರ ಒಂದು ಜೀವನ ಇದೆ ಮತ್ತು ವಾಸ್ತವದಲ್ಲಿ ಜೀವನ ಆರಂಭವಾಗುವುದೇ ಮರಣದ ಅನಂತರ ಎಂಬ ಪ್ರಜ್ಞೆ ಜನರಲ್ಲಿ ಇಲ್ಲದಿರುವುದೇ ಅವರು ಈ ರೀತಿ ವರ್ತಿಸುವುದಕ್ಕೆ ಕಾರಣ. ಒಂದು ವೇಳೆ ತಾವು ಸತ್ತು ಗೋರಿಯಲ್ಲಿ ದಫನವಾಗುವ ಮೂಲಕ, ನಿಜವಾಗಿ ದಫನವಾಗುವ ಬದಲು ಬೇರೊಂದು ಲೋಕವನ್ನು ಪ್ರವೇಶಿಸುತ್ತಿದ್ದೇವೆ ಎಂಬ ಪ್ರಜ್ಞೆ ಅವರಲ್ಲಿರುತ್ತಿದ್ದರೆ, ಅವರು ಖಂಡಿತವಾಗಿಯೂ ತಮ್ಮ ಮರಣದ ಆಲೋಚನೆ ಬಂದಾಗ  ತಮ್ಮ  ಮಕ್ಕಳ  ಭವಿಷ್ಯದ ಬಗ್ಗೆ ತಲೆ  ಕೆಡಿಸಿಕೊಳ್ಳುವ ಬದಲು, “ಮರಣಾನಂತರ ನನ್ನ ಗತಿಯೇನು?” ಎಂದು ಚಿಂತಿಸುತ್ತಿದ್ದರು.

ವಾಸ್ತವದಲ್ಲಿ ಆಧುನಿಕ ಯುಗದ ಹೆಚ್ಚಿನೆಲ್ಲಾ ಮನುಷ್ಯರು, ಅವರು ಧಾರ್ಮಿಕ ವ್ಯಕ್ತಿಗಳಾಗಿರಲಿ ಇತರರಿರಲಿ ತಮ್ಮ ಬದುಕು ಮರಣದೊಂದಿಗೇ ಕೊನೆಗೊಳ್ಳು ವುದಿಲ್ಲ, ಮರಣದ ಮೂಲಕ ತಾವು ಈ ಲೋಕದ ಬದುಕಿಗಿಂತ ಹೆಚ್ಚು ವಾಸ್ತವಿಕವಾದ ಮತ್ತು ಇದಕ್ಕಿಂತ ಹೆಚ್ಚು ಮಹತ್ವವುಳ್ಳ ಶಾಶ್ವತ ಬದುಕೊಂದನ್ನು ಪ್ರವೇಶಿಸುತ್ತಿದ್ದೇವೆ ಎಂಬ ವಿಶ್ವಾಸದಿಂದ ವಂಚಿತರಾಗಿದ್ದಾರೆ.

ಮರಣಾನಂತರ ಬರಲಿರುವ ಜೀವನದ ಬಗ್ಗೆ ಸಂದೇಹವುಂಟಾಗಲು ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಪ್ರತಿಯೊಬ್ಬ ಮನುಷ್ಯನು ಸತ್ತ ಬಳಿಕ ಅವನ ಶರೀರ ಮಣ್ಣಲ್ಲಿ ಸೇರಿಕೊಳ್ಳುತ್ತದೆ. ಮನುಷ್ಯನು ಸತ್ತು ಅವನ ಶರೀರ ಮಣ್ಣಾಗಿ ಹೋದ ಬಳಿಕ ಅವನು ಮತ್ತೆ ಹೇಗೆ ಜೀವಂತಗೊಳ್ಳುತ್ತಾನೆ ಎಂಬುದು ನಮಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಎರಡನೆಯದಾಗಿ ಮರಣಾನಂತರ ಇರುವ ಜಗತ್ತು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಈ ಲೋಕ ಪ್ರತಿಯೊಬ್ಬನಿಗೂ ಕಾಣಿಸುತ್ತಿದೆ. ಆದರೆ ಇದರಾಚೆಗಿನ ಲೋಕ ಯಾರ ಕಣ್ಣಿಗೂ ಬೀಳುವುದಿಲ್ಲ. ಆದ್ದರಿಂದ ಈ ಜೀವನದ ಅನಂತರ ಇನ್ನೊಂದು ಜೀವನ ಇದೆ ಎಂದು ನಂಬಲು ನಮಗೆ ಸಾಧ್ಯವಾಗುವುದಿಲ್ಲ.

Add Comment