ಧರ್ಮ ಸಹಿಷ್ಣುತೆ

ಇತಿಹಾಸದ ಕೆಲ ಘಟನೆಗಳ ಕಾರಣದಿಂದಲೋ ಅಥವಾ ಇಸ್ಲಾಮಿನ ವಿರೋಧಿಗಳ ವ್ಯವಸ್ಥಿತ ಕುಪ್ರಚಾರಗಳ ಕಾರಣದಿಂದಲೋ ಇಸ್ಲಾಮ್ ಹಾಗೂ ಮುಸ್ಲಿಮರು ತಪ್ಪುಕಲ್ಪನೆಗಳಿಗೆ ಗ್ರಾಸವಾಗಿದ್ದಾರೆ. ಇದರಲ್ಲಿ ಮುಸ್ಲಿಮರಿಗೆ ಅನ್ಯ ಧರ್ಮಿಯರೊಂದಿಗೆ ಸೇರಿ ಜೀವಿಸಲು ಸಾಧ್ಯವಿಲ್ಲ ಎಂಬ ಬಾವನೆ ಮೂಡಿಸಲು ಪ್ರಯತ್ನಿಸಲಾಗಿದೆ. ಅದಕ್ಕೆ ಪೂರಕವಾಗಿ ಧರ್ಮ ಮತ್ತು ಆರಾಧನೆಯ ಯತಾರ್ಥತೆ ಅರಿಯದ ಕೆಲ ನಾಮದಾರಿ ಮುಸ್ಲಿಮರಿಂದ ಇಸ್ಲಾಮ್‍ಗೆ ದಕ್ಕೆಯಾಗುತ್ತಿದೆ. ದೇವನ ಕುರಿತು ಮತ್ತು ಅನ್ಯಧರ್ಮಗಳ ಕುರಿತು ತಾಳಬೇಕಾದ ಇಸ್ಲಾಮಿನ ಧೋರಣೆಯು ಓರ್ವ ಮುಸ್ಲಿಮನನ್ನು ಧಾರ್ಮಿಕ ಅಸಹಿಷ್ಣುತೆಯಿಂದ ಸಂಪೂರ್ಣ ತಡೆಯುತ್ತ ದೆ. ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲರ ಸೃಷ್ಟಿಕರ್ತ ಒಬ್ಬನೇ ಆಗಿದ್ದಾನೆ. ಅವನು ಏಕನಾಗಿದ್ದಾನೆ. ಸರ್ವಲೋಕಗಳ ಪರಿಪಾಲಕ, ಅಖಿಲ ಚರಾಚರ ಸೃಷ್ಟಿಗಳ ಒಡೆಯ ಅವನಾಗಿದ್ದಾನೆಂಬುದೇ ಇಸ್ಲಾಮಿನ ನಿಯಮ. ಇತರ ಮತಗಳಿಗಿಂತ ಇಸ್ಲಾಮ್ ಬಿನ್ನವಾಗಿರುವುದು ಏಕದೇವತ್ವದ ಬಲವಾದ ಪ್ರತಿಪಾದನೆಯ ಕಾರಣದಿಂದಾಗಿದೆ. ಏಕದೇವತ್ವದ ಕುರಿತು ಇಸ್ಲಾಮ್ ಯಾವುದೇ ರಾಜಿಗೂ ಸಿದ್ದವಿಲ್ಲ. ಆದ್ದರಿಂದ ಬಹುದೇವ ವಿಶ್ವಾಸಿಗಳೊಡನೆ, ನಾಸ್ತಿಕರೊಡನೆ, ಕಪಟ ವಿಶ್ವಾಸಿಗಳೊಂದಿಗೂ ಅದು ಸಹಿಷ್ಣುತೆಯಿಂದ ವರ್ತಿಸಲು ಆದೇಶಿಸುತ್ತದೆ. ಯಾಕೆಂದರೆ ಜಗತ್ತಿನ ಸರ್ವ ಮಾನವರೂ ಒಂದೇ ದೇವನ ಸೃಷ್ಟಿಗಳಾಗಿದ್ದು ಅವನು ನೀಡಿದ ಗಾಳಿಯಲ್ಲಿ ಉಸಿರಾಡಿ ನೀರನ್ನು ಸೇವಿಸುವವರಾಗಿದ್ದಾರೆ. ಭೂಮಿಯಲ್ಲಿ ಅವನು ನೀಡಿದ ಎಲ್ಲ ಸೌಲಭ್ಯಗಳನ್ನು ಅವರು ಬಳಸುತ್ತಿರುತ್ತಾರೆ. ಭೂಮಿಯಲ್ಲಿರುವ ಸರ್ವರನ್ನೂ ಒಂದೇ ಆತ್ಮದಿಂದ ಸೃಷ್ಟಿಸಲಾಗಿದೆ ಎಂದು ಕುರ್‍ಆನ್ ಹೇಳುತ್ತದೆ.

ಜನರೇ ಅಲ್ಲಾಹನನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಜೋಡಿಯನ್ನು ಉಂಟು ಮಾಡಿದನು ಅವೆರಡರಿಂದ ಅನೇಕಾನೇಕ ಸ್ತ್ರೀ ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು (ಪವಿತ್ರ ಕುರ್‍ಆನ್- 4:1)

ಎಲ್ಲರ ಆದಿಪಿತ ಆದಮರಾಗಿದ್ದಾರೆ. ಸರ್ವರೂ ಅವರ ಸಂತಾನ ಪರಂಪರೆಯಿಂದ ಬಂದವರಾಗಿದ್ದಾರೆ.

“ಜನರೇ ನಾವು ನಿಮ್ಮನ್ನು ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮನ್ನು ವಿವಿಧ ಜನಾಂಗಗಳನ್ನಾಗಿ ಗೋತ್ರಗಳನ್ನಾಗಿ ಮಾಡಿದೆವು.” (ಪವಿತ್ರ ಕುರ್‍ಆನ್ 49:13)

ಪ್ರವಾದಿವರ್ಯರು(ಸ) ಒಮ್ಮೆ ಈ ರೀತಿ ಹೇಳಿದರು. “ನಿಶ್ಚಯವಾಗಿಯೂ ನಿಮಗೆ ಒಬ್ಬ ಒಡೆಯನಿದ್ದಾನೆ. ನಿಮಗೆಲ್ಲರಿಗೂ ಒಬ್ಬ ತಂದೆಯಿದ್ದಾರೆ. ಎಲ್ಲರೂ ಆದಿಪಿತ ಆದಮ್‍ರ ಪುತ್ರರಾಗಿದ್ದಾರೆ. ಆದಮ್‍ರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ. ಆದ್ದರಿಂದ ಅರಬನಿಗೆ ಅರಬೇತರನ ಮೇಲೋ, ಬಿಳಿಯನಿಗೆ ಕರಿಯನ ಮೇಲೋ ಯಾವುದೇ ಮೇಲ್ಮೆ ಇಲ್ಲ, ದೇವಭಕ್ತಿಯ ಹೊರತು.”ಮಾನವ ಕುಲಕ್ಕೆ ದೇವನು ಜೀವನ ಪದ್ದತಿಯನ್ನು ತೋರಿಸಿದ್ದಾನೆ, ಅದಾಗಿದೆ ಧರ್ಮ. ಆದ್ದರಿಂದ ಧರ್ಮವು ದೇವ ನಿರ್ಣಯಿತವಾದದ್ದಾಗಿದೆ. ಕುರ್‍ಆನ್ ಹೇಳುತ್ತದೆ.

“ನಾವು ನಿಮ್ಮ ಪೈಕಿ (ಮಾನವರ) ಪ್ರತಿಯೊಬ್ಬನಿಗೆ ಒಂದು ಧರ್ಮ ನಿಯಮ ಮತ್ತು ಕರ್ಮ ಮಾರ್ಗವನ್ನು ನಿಶ್ಚಯಿಸಿದ್ದೇವೆ. (ಪವಿತ್ರ ಕುರ್‍ಆನ್- 5:48)

ಎಲ್ಲ ಧರ್ಮದ ಮೂಲ ಸಿದ್ಧಾಂತ ಒಂದೇ ಆಗಿದೆ. ಬಿನ್ನತೆಗಳು ಆ ಬಳಿಕ ಉಂಟಾದುದಾಗಿದೆ. ಪುರೋಹಿತರ ಮಧ್ಯಪ್ರವೇಶವೇ ಅದಕ್ಕೆ ಕಾರಣವಾಗಿದೆ. ಎಲ್ಲ ಪ್ರವಾದಿಗಳು ಸಾರಿದ ಧರ್ಮದ ಸಂದೇಶ ಕೂಡಾ ಒಂದೇ ಆಗಿತ್ತು ಎಂದು ಕುರ್‍ಆನ್ ಸ್ಪಷ್ಟಪಡಿಸುತ್ತದೆ.

“ಅವನು ನೂಹರಿಗೆ ಆಜ್ಞಾಪಿಸಿದ್ದ ಧರ್ಮ ವಿಧಾನವನ್ನೇ ನಿಮಗಾಗಿಯೂ ನಿಶ್ಚಿಯಿಸಿ ಕೊಟ್ಟಿದ್ದಾನೆ ಮತ್ತು (ಮಹಮ್ಮದರೇ) ಈಗ ನಾವು ಅದನ್ನೇ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿರುತ್ತೇವೆ. ಇದನ್ನೇ ನಾವು ಇಬ್ರಾಹೀಮರಿಗೂ, ಮೂಸಾ ಮತ್ತು ಈಸಾರಿಗೂ ಬೋದಿಸಿದ್ದೆವು. ಈ ಧರ್ಮವನ್ನು ಸಂಸ್ಥಾಪಿಸಿರಿ. (ಪವಿತ್ರ ಕುರ್‍ಆನ್- 42:13)

ಧರ್ಮಗಳ ಅವತರಣದ ಸಂಧರ್ಭದಲ್ಲಿ ಅವುಗಳೆಲ್ಲದರ ಮೂಲ ಶಿಕ್ಷಣ ಒಂದೇ ಆಗಿತ್ತು. ಅದರ ಆಚಾರ ವಿಚಾರಗಳಲ್ಲಿ ಆ ಬಳಿಕ ವ್ಯತ್ಯಾಸವುಂಟಾದುದಾಗಿದೆ. ಧರ್ಮಗಳ ಮಧ್ಯೆ ಮೌಲ್ಯಗಳ ಅಂತರ ಬಂದಿರುವುದು ಕೂಡಾ ಜನರ ಮದ್ಯಪ್ರವೇಶದ ಕಾರಣದಿಂದಾಗಿದೆ. ಸಂದೇಶವಾಹಕರು ದೇವನ ಧರ್ಮದ ಸಂದೇಶಗಳನ್ನು ಮಾನವ ಕುಲಕ್ಕೆ ತಲುಪಿಸಿದ್ದರು. ಜಗತ್ತಿನ ಎಲ್ಲ ಜನಾಂಗಗಳಿಗೂ ಅಲ್ಲಾಹನಿಂದ ಸಂದೇಶ ವಾಹಕರನ್ನು ಕಳುಹಿಸಲಾಗಿದೆಯೆಂದು ಕುರ್‍ಆನ್ ಸ್ಪಷ್ಟಪಡಿಸುತ್ತದೆ. ದೇವನ ಧರ್ಮಕ್ಕೆ ಅತೀತವಾಗಿ ಜೀವಿಸುವವರಿಗೆ ಶುಭವಾರ್ತೆಯನ್ನು ಅದು ನಿರಾಕರಿಸುವವರಿಗೆ ಎಚ್ಚರಿಕೆ ನೀಡುವ ಸಂದೇಶವಾಹಕರ ಸರಣಿಯಲ್ಲಿ ಪ್ರವಾದಿ ಮುಹಮ್ಮದರು(ಸ) ಕೊನೆಯವರಾಗಿದ್ದಾರೆ. ಕುರ್‍ಆನ್ ಹೇಳುತ್ತದೆ.

“ನೀವು ಕೇವಲ ಓರ್ವ ಎಚ್ಚರಿಕೆ ಕೊಡುವವರಾಗಿರುತ್ತೀರಿ. ನಾವು ನಿಮ್ಮನ್ನು ಸುವಾರ್ತೆ ಮತ್ತು ಎಚ್ಚರಿಕೆ ಕೊಡುವವರಾಗಿ ಸತ್ಯ ಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯವೊಂದು ಗತಿಸಿಲ್ಲ (ಪವಿತ್ರ ಕುರ್‍ಆನ್- 35:23,24)

ಆದ್ದರಿಂದ ಪ್ರವಾದಿಗಳೆಲ್ಲರೂ ಸಹೋದರರಾಗಿದ್ದಾರೆ. ಸಂದೇಶವಾಹಕರು ಎಂಬ ದೃಷ್ಟಿಯಲ್ಲಿ ಇವರೆಲ್ಲರೂ ಸಮಾನರಾಗಿದ್ದಾರೆ. ಜಗತ್ತಿಗೆ ಬಂದ ಸಕಲ ಪ್ರವಾದಿಗಳ ಮೇಲೆಯು ವಿಶ್ವಾಸವಿರಿಸಬೇಕಾದದ್ದು ಮುಸ್ಲಿಮರ ಕರ್ತವ್ಯವಾಗಿದೆ. ಮುಸ್ಲಿಮರು ಅವರನ್ನು ಅಂಗೀಕರಿಸಿ ಗೌರವಿಸುತ್ತಾರೆ ಕುರ್‍ಆನ್ ನಲ್ಲಿ ಅಲ್ಲಾಹನು ಈ ರೀತಿ ಆದೇಶಿಸುತ್ತಾನೆ.

ಹೇಳಿರಿ. ದೇವನಿಂದ ನಮಗೆ ಅವತೀರ್ಣವಾಗಿ ದೊರೆತುದರಲ್ಲಿ ಇಬ್ರಾಹೀಮರಿಗೂ, ಇಸ್ಮಾಈಲರಿಗೂ, ಇಸ್ಹಾಕರಿಗೂ, ಯಾಕೂಬರಿಗೂ, ಯಾಕೂಬರ ಸಂತತಿಗಳಿಗೂ ಅವತೀರ್ಣಗೊಂಡುದರಲ್ಲಿಯು, ಮೂಸಾ, ಈಸಾ ಮುಂತಾದ ಎಲ್ಲ ಪ್ರವಾದಿಗಳಿಗೆ ತಮ್ಮ ಪ್ರಭುವಿನಿಂದ ನೀಡಲ್ಪಟ್ಟುದರ ಮೇಲೆ ನಾವು ವಿಶ್ವಾಸವಿಟ್ಟಿರುತ್ತೇವೆ. ಅವರಲ್ಲಿ ಯಾರ ಮಧ್ಯೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಸರ್ವೋನ್ನತನಾದ ದೇವನ ದಾಸರಾಗಿದ್ದೇವೆ. (ಪವಿತ್ರ ಕುರ್‍ಆನ್- 2:136)

ಮತ್ತೊಂದೆಡೆ ಕುರ್‍ಆನ್ ಈ ರೀತಿ ಹೇಳುತ್ತದೆ.

“ಆರಂಭದಲ್ಲಿ ಜನರೆಲ್ಲರೂ ಒಂದೇ ಸಂಪ್ರದಾಯದವರಾಗಿದ್ದರು. (ಈ ಸ್ಥಿತಿ ಬಹಳ ಕಾಲ ಉಳಿಯಲಿಲ್ಲ. ಅವರೊಳಗೆ ಬಿನ್ನಾಭಿಪ್ರಾಯಗಳುಂಟಾದವು) ಆಗ ಅಲ್ಲಾಹನು ಸತ್ಯಮಾರ್ಗದ ಬಗ್ಗೆ ಸುವಾರ್ತೆ ನೀಡುವವರನ್ನೂ, ಮಿಥ್ಯ ಮಾರ್ಗದ ಬಗ್ಗೆ ಎಚ್ಚರಿಕೆ ಕೊಡುವವರೂ ಆದ ಪ್ರವಾದಿಗಳನ್ನು ರವಾನಿಸಿದನು ಮತ್ತು ಅವರೊಂದಿಗೆ ಸತ್ಯದ ವಿಷಯದಲ್ಲಿ ಜನರಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ತೀರ್ಪು ನೀಡಲಿಕ್ಕಾಗಿ ಪರಮ ಸತ್ಯ ಗ್ರಂಥವನ್ನೂ ಇಳಿಸಿದನು. ಸತ್ಯದ ಶಿಕ್ಷಣದ ಕೊಡಲ್ಪಟ್ಟವರೇ ಈ ಅಭಿಪ್ರಾಯ ಬಿನ್ನತೆಗಳನ್ನುಂಟು ಮಾಡಿದರು. ಅವರು ಕೇವಲ ಪರಸ್ಪರ ಅತಿರೇಕ ನಡೆಸಲು ಇಷ್ಟಪಡುತ್ತಿದ್ದರಿಂದಲೇ ಸುವ್ಯಕ್ತ ದೃಷ್ಟಾಂತಗಳನ್ನು ಪಡೆದ ಬಳಿಕ ಸತ್ಯವನ್ನು ತ್ಯಜಿಸಿ ವಿವಿಧ ಹಾದಿಗಳನ್ನು ಸೃಷ್ಟಿಸಿಕೊಂಡರು. (ಪವಿತ್ರ ಕುರ್‍ಆನ್- 2:213)

ವಿವಿಧ ಆಚಾರ ವಿಚಾರಗಳಲ್ಲಿ ಜನರು ಬೇರೆಬೇರೆಯಾಗಿ ಪ್ರತಿಯೊಂದು ವಿಭಾಗವೂ ನಾವು ಅನುಸರಿಸುವುದರಲ್ಲಿ ತೃಪ್ತಿ ಹೊಂದಿದರು. ಮಾತ್ರವಲ್ಲ ಅದುವೇ ಸರಿಯಾದದ್ದು ಎಂದು ವಾದಿಸತೊಡಗಿದರು.

“ಆದರೆ ಬಳಿಕ ಜನರು ತಮ್ಮ ಧರ್ಮವನ್ನು ಪರಸ್ಪರ ತುಂಡು ತುಂಡು ಮಾಡಿಬಿಟ್ಟರು. ಪ್ರತಿಯೊಂದು ವರ್ಗವೂ ತನ್ನ ಬಳಿಯಲ್ಲಿ ಇರುವುದರಲ್ಲಿ ಮಗ್ನವಾಗಿದೆ.” (ಪವಿತ್ರ ಕುರ್‍ಆನ್- 23:53)

ಧರ್ಮದಲ್ಲಿನ ವಿವಿಧತೆಯನ್ನು ವಾಸ್ತವಿಕತೆಯಾಗಿ ಅಂಗೀಕರಿಸುತ್ತದೆ. ಮನುಷ್ಯನಿಗೆ ನೀಡಲ್ಪಟ್ಟ ಚಿಂತಾ ಸ್ವಾತಂತ್ರ್ಯವನ್ನೂ ಅದು ಅನಿವಾರ್ಯತೆಯಾಗಿ ಪರಿಗಣಿಸಲ್ಪಡುತ್ತಿದೆ.

“ನಿಶ್ಚಯವಾಗಿಯೂ ನಿಮ್ಮ ಪ್ರಭು ಇಚ್ಚಿಸುತ್ತಿದ್ದರೆ. ಸಕಲ ಮಾನವರನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವರಿನ್ನೂ ಭಿನ್ನಮತೀಯರಾಗಿಯೇ ಮುಂದುವರಿಯುವರು” (ಪವಿತ್ರ ಕುರ್‍ಆನ್- 11:118)

ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯನು ಸೃಷ್ಟಿಯಲ್ಲಿ ಶ್ರೇಷ್ಟನಾಗಿದ್ದಾನೆ. ಅವನ ಕುಟುಂಬ, ಜಾತಿ, ವರ್ಣ, ವರ್ಗ, ದೇಶ, ಭಾಷೆ ಯಾವುದಾದರೂ ಸರಿ ಜನ್ಮತಾ ಅವನು ಆದರಣೀಯನಾಗಿದ್ದಾನೆ. ಅಲ್ಲಾಹನು ಹೇಳುತ್ತಾನೆ

“ನಾನು ಆದಮರ ಸಂತತಿಗೆ ಶ್ರೇಷ್ಟತೆಗಳನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.” (ಪವಿತ್ರ ಕುರ್‍ಆನ್- 17:70)

ಆದ್ದರಿಂದ ಮಾನವರು ಉಳಿದ ಸೃಷ್ಟಿಗಳಿಗಿಂತ ಶ್ರೇಷ್ಟರೂ ವಿಶಿಷ್ಟರೂ ಆಗಿದ್ದಾರೆ. ಕುರ್‍ಆನ್ ಹೇಳುತ್ತದೆ.

“ನಾವು ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಠಿಸಿರುತ್ತೇವೆ.” (ಪವಿತ್ರ ಕುರ್‍ಆನ್- 95:4)

ಒಂದೇ ದೇವನ ಸೃಷ್ಟಿಗಳು, ಒಂದೇ ಮಾತಾಪಿತರ ಮಕ್ಕಳೂ ಆದ ಎಲ್ಲ ಮನುಷ್ಯರು ಜನ್ಮತಾ ನಿಷ್ಕಳಂಕರೂ ಗೌರವಾನ್ವಿತರೂ ಆಗಿದ್ದಾರೆ. ನಂತರ ಅವರು ಎಸಗಿದ ದುಷ್ಕ್ರತ್ಯಗಳಿಂದಾಗಿ ಅವರು ಅಪರಾಧಿಗಳೂ ಅವಮಾನಿತರೂ ಆಗಿ ಬಿಡುತ್ತಾರೆ. ಅವನ ನಾಶಕ್ಕೆ ಅವನೇ ಕಾರಣನಾಗುತ್ತಾನೆ. ಧಾರ್ಮಿಕ ತತ್ವಗಳಿಗನುಗುಣವಾಗಿ ಜೀವಿಸಬೇಕೆಂದು ಮನುಷ್ಯನಿಗೆ ಇಸ್ಲಾಮ್ ಆಜ್ಞಾಪಿಸುತ್ತದೆ. ಒಮ್ಮೆ ಒಂದು ಮೃತ ಶರೀರವೊಂದನ್ನು ಕೊಂಡು ಹೋಗುತ್ತಿರುವುದನ್ನು ಕಂಡ ಪ್ರವಾದಿಯವರು ಎದ್ದು ನಿಂತು ಗೌರವ ಸೂಚಿಸಿದರು. ಆಗ ಅಲ್ಲಿದ್ದ ಸಂಗಾತಿಗಳು ಪ್ರವಾದಿವರ್ಯರನ್ನುದ್ದೇಶಿಸಿ ಅದೊಂದು ಯಹೂದಿಯ ಮಯ್ಯತ್ ಅಲ್ಲವೇ ಎಂದು ಕೇಳಿದಾಗ ‘ಆತ ಕೂಡಾ ಮನುಷ್ಯನಲ್ಲವೇ?’ ಎಂದು ಉತ್ತರಿಸಿದರು. ಆದ್ದರಿಂದ ಧಾರ್ಮಿಕವಾಗಿ ಅಭಿಪ್ರಾಯ ಬಿನ್ನತೆಗಳಿದ್ದರೂ ಅದು ಸಂಬಂಧ ಕೆಡಿಸಲು ಕಾರಣವಾಗಬಾರದು. ಒಳಿತನ್ನು ಸಂಸ್ಥಾಪಿಸಿ ಕೆಡುಕನ್ನು ವಿರೋಧಿಸುವುದನ್ನು ವಿಶ್ವಾಸದಾಢ್ರ್ಯತೆಯಿಂದ ಪರಸ್ಪರ ಸ್ನೇಹ ಸಹಕಾರ ಮನೋಭಾವದಿಂದ ನಿರ್ವಹಿಸಬೇಕು. ಅಲ್ಲಾಹನು ಹೇಳುತ್ತಾನೆ.

“ಪುಣ್ಯ ಹಾಗೂ ದೇವಭಯದ ಕಾರ್ಯಗಳಲ್ಲಿ ಎಲ್ಲರ ಜೊತೆ ಸಹಕರಿಸಿರಿ ಮತ್ತು ಪಾಪ ಹಾಗೂ ಅತಿರೇಕ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿರಿ (ಪವಿತ್ರ ಕುರ್‍ಆನ್- 5:2)

ಜಾತಿ, ವರ್ಗ, ಸಮುದಾಯಕ್ಕೆ ಅತೀತವಾಗಿ ಭೂಮಿಯಲ್ಲಿರುವ ಸಕಲ ಮನುಷ್ಯರೂ ಗೌರವಾನ್ವಿತರಾದಂತೆಯೇ ಅವರೆಲ್ಲರ ಜೀವ, ಸಂಪತ್ತು ಅಭಿಮಾನವೂ ಅಮುಲ್ಯವಾಗಿದೆ. ಅವರ ಮೇಲೆ ಅಕ್ರಮ, ಅತಿರೇಕವೆಸಗುವುದು ಅಕ್ಷಮ್ಯ ಅಪರಾಧವಾಗಿದೆ. ಪ್ರವಾದಿವರ್ಯರು ತನ್ನ ವಿದಾಯ ಭಾಷಣದಲ್ಲಿ ಮನುಷ್ಯರ ಪ್ರಾಣ, ಸಂಪತ್ತು, ಅಭಿಮಾನದ ಬಗ್ಗೆ ಹೆಚ್ಚು ಜಾಗೃತರಾಗಿರಬೇಕೆಂದು ಒತ್ತು ಕೊಟ್ಟು ಹೇಳಿದ್ದರು. ಯಾವ ಕಾರಣಕ್ಕೂ ಅತಿರೇಕದಿಂದ ವರ್ತಿಸಿ ಅವರ ಮೇಲೆ ಎರಗುವುದರ ವಿರುದ್ಧ ವಿಶೇಷವಾಗಿ ಎಚ್ಚರಿಸಿದ್ದರು. ಜೊತೆಗೆ ಸಹ ದರ್ಮಿಯರೊಂದಿಗೆ ಉತ್ತಮವಾಗಿ ವ್ಯವಹರಿಸಲು ಆದೇಶಿಸಿದ್ದಾರೆ. ಅವರೊಂದಿಗೆ ನ್ಯಾಯ ಪೂರ್ಣತೆಯಿಂದ ವರ್ತಿಸಬೇಕೆಂದೂ ಆದೇಶಿಸಿದ್ದರು. ಒಟ್ಟಿನಲ್ಲಿ ಇಸ್ಲಾಮ್ ಧರ್ಮಾನುಯಾಯಿಯಾಗಿದ್ದುಕೊಂಡು ಓರ್ವ ಸತ್ಯವಿಶ್ವಾಸಿಗೆ ಇತರ ಧರ್ಮಿಯರ ಜೊತೆ ಅಸಹಿಷ್ಣುತೆಯಿಂದ ವರ್ತಿಸಲು ಕಂಡಿತ ಸಾಧ್ಯವಿಲ್ಲ.

Add Comment