ದೇಶ ಪ್ರೇಮ

ಇಸ್ಲಾಮ್ ಧರ್ಮವು ಸಾವಿರದ ನಾಲ್ನೂರು ವರ್ಷಗಳ ಹಿಂದೆಯೇ ಅರಬ್ ವರ್ತಕರ ಮೂಲಕ ಭಾರತಕ್ಕೆ ಬಂತು. ಮುಸ್ಲಿಮರು ಭಾರತದಲ್ಲಿ ತಮ್ಮ ಸಂಸ್ಕೃತಿಯನ್ನು ಪರಿಚಯಿಸಿ, ಈ ದೇಶದ ಏಳಿಗೆಗೆ ಅಪಾರ ಕೊಡುಗೆಗಳನ್ನು ನೀಡಿದರು. ಇಂದಿಗೂ ಪುರಾತನವಾದ ಇಸ್ಲಾವಿೂ ಸಂಸ್ಕøತಿಯ ಹೆಗ್ಗುರುತುಗಳನ್ನು ದೇಶದೆಲ್ಲೆಡೆ ನೋಡಬಹುದು. ಆದ್ದರಿಂದ ಈ ದೇಶವನ್ನು ಯಾವುದೇ ಒಂದು ಸಮುದಾಯವು ತಮ್ಮದೇ ರಾಷ್ಟ್ರವೆಂದು ಹೇಳುವಂತಿಲ್ಲ. ಇದು ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಕ್ಕ ಮುಂತಾದ ಮತ-ಧಮೀಯರ ದೇಶ. ಇತರ ಸಮುದಾಯಗಳಿಗೆ ಭಾರತ ಮತ್ತು ಅದರ ಅಭ್ಯುದಯ ಎಷ್ಟು ಪ್ರಿಯವೋ ಅಷ್ಟೇ ಮುಸ್ಲಿಮರಿಗೂ ಪ್ರಿಯವಾಗಿದೆ.

ಮಹಾಕವಿ ಇಕ್ಬಾಲರು ಹಾಡಿದಂತೆ,

 ಜಗದೊಳೆಲ್ಲ ಶ್ರೇಷ್ಠ ದೇಶ ನಮ್ಮ ಭರತ ಭೂಮಿ
ಅದು ನಮ್ಮ ಬನವು ನಾವು ಉಲಿವ ಕೋಗಿಲೆ
ಇಲ್ಲೆ ಇರಲಿ, ಎಲ್ಲೆ ಇರಲಿ, ದೇಶ ಬಿಟ್ಟು ಹೊರಗೆ ಇರಲಿ
ಎಂದೆಂದಿಗೂ ನಮಗಿದೆ ಮಾತೃಭೂಮಿ ಚಿಂತನೆ

ಮನುಷ್ಯ ತಾನು ಹುಟ್ಟಿ ಬೆಳೆದ ಸ್ಥಳವನ್ನೂ, ತಾನು ವಾಸಿಸಲು ಆಯ್ಕೆ ಮಾಡಿದ ಪ್ರದೇಶವನ್ನೂ ಪ್ರೀತಿಸುವುದು ಆತನ ಪ್ರಾಕೃತಿಕ ಗುಣವಾಗಿದೆ. ಇದಕ್ಕೆ ಯಾರೂ ಹೊರತಲ್ಲ. ಮನುಷ್ಯ ತನ್ನ ಒಳಿತನ್ನು ಬಯಸಿದಂತೆ, ತನ್ನ ನಾಡಿನ ಸಮೃದ್ಧಿಯನ್ನು ಬಯಸುವುದು ನಿಜಾರ್ಥದ ದೇಶ ಪ್ರೇಮವಾಗಿದೆ. ಅಂತಹ ಒಂದು ಉದಾಹರಣೆ ಪ್ರವಾದಿ ಮುಹಮ್ಮದ್ ರ(ಸ) ಜೀವನದಲ್ಲಿ ನಡೆದ ಘಟನೆಯಿಂದ ನೋಡಬಹುದು.

ಪ್ರವಾದಿ(ಸ) ತಾವು ಜನಿಸಿ ಬೆಳೆದ ಮಕ್ಕಾ ಪಟ್ಟಣವನ್ನು ವೈರಿಗಳ ಕಿರುಕುಳದಿಂದಾಗಿ ತೊರೆದು ಮದೀನಾ ನಗರಕ್ಕೆ ಹೋಗಬೇಕಾಗಿ ಬಂದಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಪ್ರವಾದಿ(ಸ) ಗದ್ಗದಿತರಾಗಿ ಈ ರೀತಿ ನುಡಿದಿದ್ದರು, “ಓ, ಮಕ್ಕಾ ಪಟ್ಟಣವೇ ಇಡೀ ಜಗತ್ತಿನಲ್ಲಿ ನೀನು ನನಗೆ ಅತ್ಯಧಿಕ ಪ್ರಿಯವಾಗಿರುತಿ. ಆದರೇನು ಮಾಡಲಿ? ನಿನ್ನ ಜನರು ನನ್ನನ್ನು ಇಲ್ಲಿ ಜೀವಿಸಲು ಬಿಡುತ್ತಿದ್ದರೆ, ಖಂಡಿತ ನಾನು ನಿನ್ನನ್ನು ತೊರೆಯುತ್ತಿರಲಿಲ್ಲ”.

ಇದು ಹುಟ್ಟಿ ಬೆಳೆದು ಓಡಾಡಿದ ನೆಲದೊಂದಿಗೆ ಪ್ರವಾದಿ ಮುಹಮ್ಮದ್ ರಿಗಿದ್ದ(ಸ) ಪ್ರೀತಿಯ ಕುರುಹು. ಈ ರಾಷ್ಟ್ರಪ್ರೇಮದ ಭಾವನೆಯು ಅಪೇಕ್ಷಣೀಯವೂ, ಅಷ್ಟೇ ಸಹಜವೂ ಆದದ್ದು. ಇದಕ್ಕೆ ವ್ಯತಿರಿಕ್ತವಾಗಿ ದೇಶಭಕ್ತಿಯ ಕಲ್ಪನೆ ರಾಷ್ಟ್ರೀಯವಾದದೊಂದಿಗೆ ಹುಟ್ಟಿದ್ದಾಗಿದೆ. ಆಧುನಿಕ ಪಾಶ್ಚಾತ್ಯ ಸಂಸ್ಕೃತಿ ಮನುಷ್ಯನ ಆರಾಧನೆಗೆ ಹೊಸ ಹೊಸ ದೇವನನ್ನು, ಹೊಸ ಹೊಸ ಸಿದ್ಧಾಂತಗಳನ್ನು ಆವಿಷ್ಕರಿಸಿದೆ. ಈ ಹೊಸ ಆರಾಧ್ಯರ ಪೈಕಿ ರಾಷ್ಟ್ರವು ಅತಿ ದೊಡ್ಡ ಆರಾಧ್ಯವಾಗಿದೆ.

ಈ ಕಾಲದಲ್ಲಿ ಮದ್ಯ ಬೇರೆ, ಮಧುಪಾತ್ರೆ ಬೇರೆ, ಮರಣ ಬೇರೆ,
ಕುಡಿಸುವವನು ಮಾಡಿರುವನು ಉಪಾಕಾರ ಮತ್ತು ಅನ್ಯಾಯದ ವಿಧ ಬೇರೆ
ಈ ಹೊಸ ದೇವರುಗಳಲ್ಲಿ ರಾಷ್ಟ್ರವು ಅತಿ ದೊಡ್ಡದಾಗಿದೆ
ಇದರ ಉಡುಗೆಯು ಧರ್ಮದ ಮಟ್ಟಿಗೆ ಶಮವಸ್ತ್ರವಾಗಿದೆ

ಮಹಾ ಕವಿ ಇಕ್ಬಾಲ್

ರಾಷ್ಟ್ರೀಯವಾದ ಆರಂಭದಲ್ಲಿ ಉನ್ನತ ಉದ್ದೇಶಗಳೊಂದಿಗೆ ಹುಟ್ಟಿಕೊಂಡಿತು. ಅದೇನೆಂದರೆ ಒಂದು ನಿರ್ದಿಷ್ಟ ಜನ ಸಮೂಹ ತಮ್ಮ ಹಿತ ಸಾಧನೆಗಾಗಿ ಸಾಮೂಹಿಕವಾಗಿ ಪ್ರಯತ್ನಿಸುವುದು. ಆದರೆ ಈ ಸಮೂಹದಲ್ಲಿ ಜನಾಂಗೀಯತೆಯ ಭಾವನೆ ನುಸುಳಿದಲ್ಲಿ ಕಡ್ಡಾಯವಾಗಿ ಜನರಲ್ಲಿ ಜನಾಂಗ ದ್ವೇಷದ ಭಾವನೆಗಳು ಮೂಡ ತೊಡಗುತ್ತವೆ. ರಾಷ್ಟ್ರೀಯತೆ ಬೇರೂರಿದಂತೆ ಜನಾಂಗೀಯ ದ್ವೇಷ ಕೂಡ ಬೆಳೆದು ಹೆಮ್ಮರವಾಗುತ್ತದೆ.

ರಾಷ್ಟ್ರೀಯತೆಗೆ ಸತ್ಯ, ನೈಜತೆ, ವಾಸ್ತವಿಕತೆಯೊಂದಿಗೆ ಯಾವ ನಂಟೂ ಇಲ್ಲ. ಇಲ್ಲಿ ಮೋಸ, ವಂಚನೆ, ಅಸತ್ಯ ಮತ್ತು ಅನ್ಯಾಯ ಸಿಂಧುವಾಗಿ ಬಿಡುತ್ತದೆ. ರಾಜಕೀಯ ಪಾರಿಭಾಷೆಯಲ್ಲಿ ಅದನ್ನು ಡಿಪ್ಲೊಮೆಸಿ(DIPLOMACY) ಎನ್ನಲಾಗುತ್ತದೆ. ಕೇವಲ ತಮ್ಮ ಜನಾಂಗದ ಹಿತಾಸಕ್ತಿಯೇ ಅಂತಿಮ ಧ್ಯೇಯವಾಗಿರುತ್ತದೆ. ಇಂತಹ ರಾಷ್ಟ್ರಗಳಲ್ಲಿ ಇತರ ಜನಾಂಗಗಳಿಗೆ ಸಮಾನತೆಯ ಹಕ್ಕು-ಬಾಳು ಇರುವುದಿಲ್ಲ. ಅವರು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಅಥವಾ ಗುಲಾಮರಾಗಿ ಬದುಕಬೇಕಾಗುತ್ತದೆ.

ರಾಷ್ಟ್ರೀಯತೆಯ ಸಿದ್ಧಾಂತ ಮಾನವಕುಲವನ್ನು ಸಾವಿರಾರು ಗುಂಪುಗಳಲ್ಲಿ ಒಡೆದು ಹಾಕಿದೆ. ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದಂತಿರಲು ಸಾಧ್ಯವಿಲ್ಲ. ಒಂದು ರಾಷ್ಟ್ರದ ಹಿತಾಸಕ್ತಿ ಇನ್ನೊಂದು ರಾಷ್ಟ್ರದ ಹಿತಾಸಕ್ತಿಯಾಗಲು ಸಾಧ್ಯವಾಗುವುದಿಲ್ಲ. ರಾಷ್ಟ್ರಗಳಲ್ಲಿ ಪರಸ್ಪರ ಸಂಘರ್ಷದ ವಾತಾವರಣ ನಿರ್ಮಿತವಾಗುತ್ತದೆ. ಪರಿಸ್ಥಿತಿ ಎಲ್ಲಿಗೆ ಸಾಗುತ್ತಿದೆಯೆಂದರೆ ರಾಷ್ಟ್ರಗಳು ನಿರಂತರ ಸಂಘರ್ಷಿಸಿ ವಿನಾಶದ ಅಂಚಿಗೆ ತಲಪುತ್ತದೆ.

ವಾಸ್ತವದಲ್ಲಿ ಮನುಷ್ಯ ಜನ್ಮ ತಾಳಿದಾಗ ಆತನು ಜನಿಸಿದ ಮನೆ ಕೆಲವು ಚದರ ಅಡಿಗಳಿಗಿಂತ ಹೆಚ್ಚಿರುವುದಿಲ್ಲ. ತನ್ನ ಜನ್ಮ ಭೂಮಿಯನ್ನು ಆತ ಅಷ್ಟೇ ಸ್ಥಳಕ್ಕೆ ಸೀಮಿತ ಗೊಳಿಸುವುದಿಲ್ಲ. ಸಾವಿರಾರು, ಲಕ್ಷಗಟ್ಟಲೆ ಚ.ಕಿ.ವಿೂ. ವಿಸ್ತೀರ್ಣವುಳ್ಳ ಪ್ರದೇಶಗಳ ತನಕ ಜನ್ಮಭೂಮಿಯನ್ನು ವ್ಯಾಪಕಗೊಳಿಸುತ್ತಾನೆ. ಇದನ್ನು ತನ್ನ ದೇಶವೆಂದು ಹೆಸರಿಸಿ ಗಡಿಯಾಚೆಗಿನ ಪ್ರದೇಶದೊಂದಿಗೆ ತನಗೇನೂ ಸಂಬಂಧವಿಲ್ಲವೆಂದು ಘೋಷಿಸುತ್ತಾನೆ. ಇದು ಮನುಷ್ಯನ ಸಂಕುಚಿತ ದೃಷ್ಟಿಕೋನವಾಗಿದೆ.

ಮನುಷ್ಯನಿಗೆ ನಿರ್ದಿಷ್ಟ ಪ್ರದೇಶದಲ್ಲಿ ಜನಿಸುವ ಆಯ್ಕೆಯನ್ನು, ಸ್ವಾತಂತ್ರ್ಯವನ್ನು ನೀಡಲಾಗಿಲ್ಲ. ದೇವನು ಭೂಮಿಯಲ್ಲಿರುವ ಸಕಲ ವಸ್ತುಗಳನ್ನು ಸೃಷ್ಟಿಸಿ ಆತನ ಅಧೀನಗೊಳಿಸಿದ್ದಾನೆ. ಆದ್ದರಿಂದ ವ್ಯಕ್ತಿ ಜಗತ್ತಿನ ಯಾವುದೇ ನಿರ್ದಿಷ್ಟ ಭಾಗಕ್ಕೆ ಅಂಟಿಕೊಂಡು ಬದುಕುವ ಅಗತ್ಯವಿರುವುದಿಲ್ಲ. ಯಾವುದೇ ಕಾರಣಕ್ಕಾಗಿ ತಾನು ಹುಟ್ಟಿದ ಪ್ರದೇಶದಿಂದ ಇತರೆಡೆಗೆ ವಲಸೆ ಹೋಗುವ ಅವಶ್ಯಕತೆ ಕಂಡು ಬಂದಾಗ ಖಂಡಿತವಾಗಿ ಹೋಗಬಹುದು.

ರಾಷ್ಟ್ರೀಯತೆಗೆ ಪರ್ಯಾಯವಾಗಿ ಇಸ್ಲಾಮ್ ಜಾಗತಿಕ ರಾಷ್ಟ್ರದ ಕಲ್ಪನೆಯನ್ನು ಜನರ ಮುಂದಿಡುತ್ತದೆ. ಇದರಲ್ಲಿ ಸಕಲ ಜನರಿಗೂ ಯಾವುದೇ ಜನಾಂಗೀಯ, ರಾಷ್ಟ್ರೀಯ ಭೇದಭಾವ ವಿಲ್ಲದೆ ಪ್ರಗತಿಯ ಹಾಗೂ ಘನತೆಯಿಂದ ಬಾಳ್ವೆ ನಡೆಸುವ ಸಮಾನ ಅವಕಾಶ ನೀಡಲಾಗುತ್ತದೆ. ಇಲ್ಲಿ ಜನಾಂಗೀಯ ಮೇಲ್ಮೆಯ ಭಾವನೆ ಅಥವಾ ಪರಸ್ಪರ ದ್ವೇಷದ ಭಾವನೆಗಳು ಕೂಡ ಇರುವುದಿಲ್ಲ. ಜನರು ವಿಶ್ವದ ಯಾವ ಮೂಲೆಯಲ್ಲಿದ್ದರೂ ಇತರರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುತ್ತಾರೆ.

Add Comment