ದೇವನ ಪರಿಚಯ ಮತ್ತು ಅವನ ಮಾರ್ಗದರ್ಶನ

ಇಂದು ಜಗತ್ತಿನಲ್ಲಿ ದೇವನ ಹೆಸರೆತ್ತುವವರು ಮತ್ತು ಅವನಿಗೆ ಪೂಜೆ ಸಲ್ಲಿಸುವವರು ಧಾರಾಳವಿದ್ದಾರೆ. ಆದರೆ ದೇವನನ್ನು ಅರಿತವರು ಬಹಳ ಕಡಿಮೆ ಎಂಬುದು ಬಹಳ ಖೇದದ ಸಂಗತಿಯಾಗಿದೆ.

ದೇವನು ಯಾರು?

ದೇವ – ಸಮಸ್ತ ಜೀವಜಾಲಗಳ ಏಕೈಕ ಸೃಷ್ಟಿಕರ್ತ, ಪಾಲಕ ಮತ್ತು ಪ್ರಭುವಾಗಿದ್ದಾನೆ. ಅವನೇ ಪೃಥ್ವಿ, ಆಕಾಶ, ಚಂದ್ರ, ಸೂರ್ಯ, ನಕ್ಷತ್ರ ಮತ್ತು ಪೃಥ್ವಿಯಲ್ಲಿ ವಾಸಿಸುವ ಸಕಲ ಮಾನವರನ್ನು ಹಾಗೂ ಇತರ ಎಲ್ಲ ಜೀವ-ಜಂತುಗಳನ್ನೂ ಸೃಷ್ಟಿಸಿರುವನು. ಹಸಿವು, ದಾಹ ಮತ್ತು ನಿದ್ರೆ ಅವನಿಗೆ ಬಾಧಿಸದು; ಅವನಿಗೆ ವಂಶವೂ ಇಲ್ಲ, ಅವನಂತೆ ಬೇರಾರೂ ಇಲ್ಲ ಮತ್ತು ಅವನಿಗೆ ಭಾಗೀದಾರರಾರೂ ಇಲ್ಲ.

ಪವಿತ್ರ ಕುರ್‍ಆನ್, ದೇವನನ್ನು ಈ ರೀತಿಯಾಗಿ ಪರಿಚಯಿಸುತ್ತದೆ,

“ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ-ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್‍ಆನ್, 112:1-4)

ಈ ಅಧ್ಯಾಯದಲ್ಲಿ ಅಲ್ಲಾಹನ ಐದು ಮೂಲ ಗುಣವಿಶೇಷಗಳನ್ನು ತಿಳಿಸಲಾಗಿದೆ.
1) ದೇವನು ಏಕೈಕನಾಗಿದ್ದಾನೆ,
2) ಅವನಿಗೆ ಯಾರದೇ ಅಗತ್ಯ ತಲೆದೋರುವುದಿಲ್ಲ,
3) ಅವನಿಗೆ ಯಾವುದೇ ಸಂತಾನವಿಲ್ಲ,
4) ಅವನು ಯಾರದೇ ಸಂತಾನ ಅಲ್ಲ ಮತ್ತು
5) ಅವನಿಗೆ ಸರಿಸಮಾನರಾರೂ ಇಲ್ಲ.

ಅಥರ್ವ ವೇದದಲ್ಲಿ ಹೀಗೆ ಹೇಳಲಾಗಿದೆ,

“ತಮಿದಂ ನಿಗತಂ ಸಹಃ ಸ ಏಕ್ಷ್ ಏಕ ಏಕ ವೃದೇಕ್ ಏಮ್’

 ಅರ್ಥಾತ್: ಆದರೆ ಅವನು ಸದಾ ಏಕಮೇವಾದ್ವಿತೀಯನಾಗಿದ್ದಾನೆ. ಅವನನ್ನು ಹೊರತು ಅನ್ಯ ಯಾರೂ ಇಲ್ಲ… ಅವನು ತನ್ನ ಕೆಲಸ-ಕಾರ್ಯಗಳಲ್ಲಿ ಯಾರದೇ ಸಹಕಾರ/ಸಹಾಯವನ್ನು ಪಡೆಯುವುದಿಲ್ಲ. ಏಕೆಂದರೆ ಅವನು ಸಕಲ ಶಕ್ತಿಯುಳ್ಳವನಾಗಿದ್ದಾನೆ.
(ಅಥರ್ವ ವೇದ: 13-4-20, ಸ್ವಾಮಿದಯಾನಂದ ಸರಸ್ವತಿ, ದಯಾನಂದ ಗ್ರಂಥಮಾಲಾ, ಪುಟ:338)

ಅದೇ ರೀತಿ ಹಿಂದೂ ವೇದಾಂತದ ಬ್ರಹ್ಮಸೂತ್ರದಲ್ಲಿ ಹೀಗೆನ್ನಲಾಗಿದೆ,

“ಏಕಂ ಬ್ರಹ್ಮಾ ದ್ವಿತೀಯ ನಾಸ್ತೆಃ ಸಹೇನಾ ನಾಸ್ತೇಕಿಂಚನ್”

ಅರ್ಥಾತ್- ದೇವನು ಓರ್ವನೇ, ಇನ್ನೊಬ್ಬನಿಲ್ಲ, ಲವಲೇಶವೂ ಇಲ್ಲ.

ದೇವನು ಅವತಾರವೆತ್ತುತ್ತಾನೆಯೇ?

ಯಾವ ದೇವನ ಕಲ್ಪನೆಯು ನಮ್ಮ ಹೃದಯದಲ್ಲಿ ಮನೆ ಮಾಡಿದೆಯೋ ಅವತಾರವಾದದ ಮೇಲಿನ ಶ್ರದ್ಧೆಯು ಆ ದೇವನ ಮಹಿಮೆಯನ್ನು ಕಡಿಮೆಗೊಳಿಸುತ್ತದೆ. ಒಮ್ಮೆ ಯೋಚಿಸಿ ನೋಡಿ- ದೇವನಿಗೆ ಸರಿಸಮಾನರು ಯಾರೂ ಇಲ್ಲ ಮತ್ತು ಅವನಿಗೆ ಯಾವುದೇ ವಸ್ತುವಿನ ಅಗತ್ಯವಿಲ್ಲದಿರುವಾಗ, ಅವನಿಗೆ ಮಾನವ ರೂಪದಲ್ಲಿ ಜನಿಸುವ ಅಗತ್ಯವಾದರೂ ಏನಿದೆ? ಶ್ರೀಮದ್ ಭಗವದ್ಗೀತಾದಲ್ಲಿ (7/24) ಹೀಗೆ ಹೇಳಲಾಗಿದೆ,

ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮ ಬುದ್ಧಯಃ
ಪರಂ ಭಾವಮಜಾನಂತೋ ಮಮಾವ್ಯಯ್ ಮನುತ್ತಮಂ||

ಅರ್ಥಾತ್- ಬುದ್ಧಿಹೀನ ಪುರುಷರು ನನ್ನ ಅನಂತ ಅವಿನಾಶಿ ಪರಮ ಭಾವವನ್ನು ಅರಿಯದೆ ಮನಸ್ಸು-ಇಂದ್ರಿಯಗಳಿಗಿಂತ ಭಿನ್ನವಾಗಿ ನನ್ನಂತಹ ಸಚ್ಚಿದಾನಂದ ಪರಮಾತ್ಮನನ್ನು ಮನುಷ್ಯರಂತೆ ಜನಿಸಿ ವ್ಯಕ್ತಿ ಭಾವವನ್ನು ಹೊಂದಿದವನೆಂದೂ ಭಾವಿಸುತ್ತಾರೆ. (ಗೀತಾ ತತ್ವ ವಿವೇಚನೀ ಟೀಕಾ, ಪುಟ:360)

ಅದೇ ರೀತಿ, ಯಜುರ್ವೇದ 32/3ರಲ್ಲಿ ಈ ರೀತಿ ಹೇಳಲಾಗಿದೆ,

ನ ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದಯಶ||

ಅರ್ಥಾತ್- ಅತಿದೊಡ್ಡ ಪ್ರಸಿದ್ಧ ಯಶಸ್ಸನ್ನು ಹೊಂದಿರುವ ಪ್ರಭುವಿಗೆ ಯಾವುದೇ ಪ್ರತಿಮೆ ಇಲ್ಲ.

ಧಾರ್ಮಿಕ ಪಕ್ಷಪಾತದಿಂದ ಹೊರಬಂದು ನೀವು ಸ್ವಯಂ ಯೋಚಿಸಿ ನೋಡಿ- ಮಾನವರಿಗೆ ಮಾರ್ಗದರ್ಶನ ನೀಡುವ ಸಂಕಲ್ಪ ಮಾಡಿದಾಗ ಸೃಷ್ಟಿಕರ್ತನು ಸ್ವಯಂ ತಾನೇ ಸೃಷ್ಟಿಸಿದ ಒಬ್ಬ ಮಾನವನ ವೀರ್ಯವಾಗಿ ಪರಿವರ್ತನೆ ಹೊಂದುವುದು, ತನ್ನದೇ ಸೃಷ್ಟಿಯಾಗಿರುವ ಮಹಿಳೆಯೋರ್ವಳ ಗರ್ಭಾಶಯದ ಅಂಧಕಾರದಲ್ಲಿ ಪ್ರವೇಶಗೈಯ್ಯುವುದು, ಅಲ್ಲಿ 9 ತಿಂಗಳು ಬಂಧಿಯಾಗಿದ್ದು, ಸೃಷ್ಟಿಯ ವಿಭಿನ್ನ ಮಗ್ಗುಲುಗಳನ್ನು ದಾಟುತ್ತಾ, ರಕ್ತ-ಮಾಂಸದ ಪಿಂಡವಾಗಿ ಬದಲಾಗುತ್ತಾ, ಕೊನೆಗೆ ಜನಿಸಿ ಬಾಲ್ಯಾವಸ್ಥೆ, ಕಿಶೋರಾವಸ್ಥೆಯನ್ನೆಲ್ಲ ಹೊಂದುವುದು ಎಂಬ ಕಲ್ಪನೆಯನ್ನು ಇರಿಸಲು ಸಾಧ್ಯವೇ? ಇದರಿಂದ ಸೃಷ್ಟಿಕರ್ತನ ದೇವತ್ವಕ್ಕೆ ಚ್ಯುತಿಯುಂಟಾಗಲಾರದೇ? ಹೇಳಿ,

ಸೃಷ್ಟಿಕರ್ತನು ಮಾನವನಾಗಲಾರ, ಏಕೆಂದರೆ ಮಾನವ ಮತ್ತು ದೇವನ ಗುಣಗಳು ಭಿನ್ನ ಭಿನ್ನವಾಗಿವೆ. ನಾವು ದೇವನನ್ನು ಸರ್ವಶಕ್ತನೆಂದು ನಂಬುತ್ತೇವೆಂದ ಮಾತ್ರಕ್ಕೆ ದೇವನು ದೇವತ್ವವನ್ನು ತೊರೆದು ಮಾನವತ್ವದಲ್ಲಿ ಪರಿವರ್ತಿತನಾಗುತ್ತಾನೆಂದು ಅದರರ್ಥ ಖಂಡಿತ ಅಲ್ಲ.

ಹೀಗೆ ದೇವನು ಅವತಾರವೆತ್ತುವುದಿಲ್ಲವೆಂದಾದ ಮೇಲೆ, ಅವನು ಮಾನವರ ಮಾರ್ಗದರ್ಶನಕ್ಕೆ ಯಾವ ವ್ಯವಸ್ಥೆಯನ್ನು ಮಾಡಿದ್ದಾನೆ ಎಂಬ ಪ್ರಶ್ನೆಯು ಇಲ್ಲಿ ಏಳುತ್ತದೆ.

ಇದಕ್ಕೆ ಉತ್ತರ ಕಂಡುಕೊಳ್ಳಬೇಕಾದರೆ, ನೀವು ಅವತಾರದ ಅರ್ಥ ವ್ಯಾಖ್ಯಾನವನ್ನು ತಿಳಿದುಕೊಳ್ಳಬೇಕಾಗುವುದು ಅಗತ್ಯ. ಆಮೇಲೆ ದೇವನು ಮಾನವರಿಗೆ ಯಾವ ರೀತಿಯಲ್ಲಿ ಮಾರ್ಗದರ್ಶನ ನೀಡಿದನೆಂಬುದರ ಅರಿವಾಗುವುದು. ಅವತಾರದ ಅರ್ಥ-

ಶ್ರೀರಾಮಶರ್ಮಾರವರು ಕಲ್ಕಿ ಪುರಾಣದ ಪುಟ 278ರಲ್ಲಿ ಅವತಾರವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ,
“ಸಮಾಜವನ್ನು ಅಧಃ ಪತನದಿಂದ ಉನ್ನತಿಗೇರಿಸಬಲ್ಲ ಮಹಾ ಮಾನವ ನೇತಾರ” ಅಂದರೆ ಮಾನವರ ಪೈಕಿ ಮಹಾನ್ ನೇತಾರ- ಅವನನ್ನು ದೇವನೇ ಮಾನವರ ಮಾರ್ಗದರ್ಶನಕ್ಕಾಗಿ ಆಯ್ದುಕೊಳ್ಳುತ್ತಾನೆ.

ಡಾ||ಎಂ.ಎ.ಶ್ರೀವಾಸ್ತವ್ ಬರೆಯುತ್ತಾರೆ,
“ಅವತಾರ ಎಂದರೆ ದೇವನು ಸ್ವತಃ ಭೂಮಿಗೆ ಸಶರೀರ ಇಳಿದು ಬರುವುದೆಂದು ಖಂಡಿತ ಅರ್ಥವಲ್ಲ, ಬದಲಾಗಿ ಅವನು ತನ್ನ ಸಂದೇಶವಾಹಕರನ್ನೂ ಅವತಾರವನ್ನೂ ಕಳುಹಿಸುತ್ತಾನೆಂಬುದೇ ವಾಸ್ತವ.” (ಪ್ರವಾದಿ ಮುಹಮ್ಮದ್(ಸ) ಮತ್ತು ಭಾರತೀಯ ಧರ್ಮಗ್ರಂಥ, ಪುಟ:5)

ಒಟ್ಟಿನಲ್ಲಿ ದೇವನ ವತಿಯಿಂದ ದೈವಿಕ ಜ್ಞಾನವನ್ನು ತರುವವರು ಮಾನವರೇ ಆಗಿರುತ್ತಾರೆಂದು ಈ ಮೂಲಕ ತಿಳಿದು ಬರುತ್ತದೆ. ಅವರನ್ನು ಸಂಸ್ಕೃತದಲ್ಲಿ `ಅವತಾರ’, ಇಂಗ್ಲಿಷಿನಲ್ಲಿ `ಪ್ರಾಫೆಟ್’ ಮತ್ತು ಅರಬಿಯಲ್ಲಿ `ರಸೂಲ್’ ಎನ್ನಲಾಗುತ್ತದೆ.

ದೇವನು ಮಾನವ ಕುಲದ ಮಾರ್ಗದರ್ಶನಕ್ಕಾಗಿ ಪ್ರತಿಯೊಂದು ಯುಗದಲ್ಲೂ ಪ್ರತಿಯೊಂದು ದೇಶದಲ್ಲೂ ಸುಮಾರು 1,24,000 ಪ್ರವಾದಿಗಳನ್ನು ಕಳುಹಿಸಿದ್ದಾನೆ. ಪವಿತ್ರ ಕುರ್‍ಆನ್ ಅವರನ್ನು `ರಸೂಲ್'(ಸಂದೇಶವಾಹಕ) ಅಥವಾ `ನಬಿ'(ಪ್ರವಾದಿ) ಎಂದು ಹೆಸರಿಸಿದೆ. ಅವರೆಲ್ಲರೂ ಮಾನವರೇ ಆಗಿದ್ದರು. ಅವರಲ್ಲಿ ದೈವತ್ವ ಗುಣ ಎಂಬುದು ಎಳ್ಳಷ್ಟೂ ಇರಲಿಲ್ಲ. ಅವರ ಬಳಿಗೆ ದೇವನ ಸಂದೇಶವು ದೇವಚರರ ಮುಖಾಂತರ ಇಳಿದು ಬರುತ್ತಿತ್ತು. ಜೊತೆಗೆ ಅವರಿಗೆ ಕೆಲವು ಆಧಾರ-ಪ್ರಮಾಣದ ರೂಪದಲ್ಲಿ ಚಮತ್ಕಾರ(ಪವಾಡ)ಗಳನ್ನೂ ನೀಡಲಾಗುತ್ತಿತ್ತು.

ಆದರೆ ಮಾನವರು ಅವರಲ್ಲಿರುವ ಅಸಾಮಾನ್ಯ ಗುಣಗಳನ್ನು ಕಂಡು, ಅವರ ಮೇಲೆ ಶ್ರದ್ಧೆ ಮತ್ತು ಭಕ್ತಿಯ ದೃಷ್ಟಿಯನ್ನು ಬೀರತೊಡಗಿದರು. ಕೆಲವರು ಅವರನ್ನು ದೇವನಾಗಿಸಿದರು, ಕೆಲವರು ಅವತಾರದ ಸಿದ್ಧಾಂತವನ್ನು ಹುಟ್ಟು ಹಾಕಿದರು, ಕೆಲವರು ಅವರನ್ನು ದೇವನ ಪುತ್ರರೆಂದು ಕಲ್ಪಿಸಿದರು. ವಸ್ತುತಃ ಆ ಪ್ರವಾದಿಗಳೆಲ್ಲರೂ ಜನರ ಈ ಭಾವನೆ-ಕಲ್ಪನೆಗಳನ್ನು ಖಂಡಿಸುವುದರಲ್ಲೇ ಇಡೀ ಜೀವನವನ್ನು ಕಳೆದಿದ್ದರು.

ಈ ರೀತಿಯಾಗಿ ಪ್ರತಿಯೊಂದು ಕಾಲದಲ್ಲೂ ಸಂದೇಶವಾಹಕರು ಬರುತ್ತಲಿದ್ದರು ಮತ್ತು ಜನರು ತಮ್ಮ ಸ್ವಾರ್ಥಸಾಧನೆಗಾಗಿ ಅವರ ಶಿಕ್ಷಣದಲ್ಲಿ ಹಸ್ತಕ್ಷೇಪ/ಪರಿವರ್ತನೆ ನಡೆಸುತ್ತಲಿದ್ದರು. ಎಲ್ಲಿಯವರೆಗೆಂದರೆ ಕ್ರಿ.ಶ. ಏಳನೆಯ ಶತಮಾನದಲ್ಲಿ ಸಾಮಾಜಿಕ, ಭೌತಿಕ ಮತ್ತು ಸಾಂಸ್ಕೃತಿಕ ಪ್ರಗತಿಯು ಇಡೀ ಜಗತ್ತನ್ನು ಒಂದು ಗ್ರಾಮವಾಗಿ ಪರಿವರ್ತಿಸಿದ ಬಳಿಕ, ದೇವನು ಪ್ರತ್ಯೇಕ ದೇಶಕ್ಕೆ ಪ್ರತ್ಯೇಕ ಪ್ರವಾದಿಯನ್ನು ಕಳುಹಿಸುವ ಪರಂಪರೆಯನ್ನು ನಿಲ್ಲಿಸಿದನು. ಕೊನೆಯದಾಗಿ ಅರೇಬಿಯದಲ್ಲಿ ಮಹಾಮಾನವ ಪ್ರವಾದಿ ಮುಹಮ್ಮದ್‍ರನ್ನು(ಸ) ತನ್ನ ಸಂದೇಶವಾಹಕರಾಗಿ ನಿಯೋಜಿಸಿದನು. ಅವರ ಮೇಲೆ ದೈವಿಕ ಸಂವಿಧಾನದ ರೂಪದಲ್ಲಿ ಕುರ್‍ಆನನ್ನು ಅವತೀರ್ಣಗೊಳಿಸಿದನು. ಈ ದೇವಗ್ರಂಥವು ಹದಿನಾಲ್ಕು ಶತಮಾನಗಳ ಹಿಂದೆ ಅವತೀರ್ಣಗೊಂಡಿತ್ತು. ಆದರೆ ಇಂದಿಗೂ ಸಂಪೂರ್ಣ ರೂಪದಲ್ಲಿ ಸುರಕ್ಷಿತವಾಗಿದೆ. ಓರ್ವ ಕ್ರೈಸ್ತ ವಿದ್ವಾಂಸ ಸರ್ ವಿಲಿಯಮ್ ಮ್ಯೂರ್ ಹೇಳುತ್ತಾರೆ,

“ಜಗತ್ತಿನಲ್ಲಿ ಪವಿತ್ರ ಕುರ್‍ಆನಿನ ಹೊರತು ಬೇರಾವ ಗ್ರಂಥವೂ ಹನ್ನೆರಡು ಶತಮಾನ ಕಳೆದರೂ ಪೂರ್ಣ ರೂಪದಲ್ಲಿ ಸುರಕ್ಷಿತವಾಗಿ, ಅಕ್ಷರ-ಶೈಲಿಯಲ್ಲಿ ಬದಲಾವಣೆಯಿಲ್ಲದೆ ಉಳಿದ ಉದಾಹರಣೆಯಿಲ್ಲ.” (Life of Muhammad)

ಇಸ್ಲಾಮ್ ಯಾವಾಗಿನಿಂದ?

ಇಂದು ಹೆಚ್ಚಿನ ಜನರಲ್ಲಿ ಪ್ರವಾದಿ ಮುಹಮ್ಮದರೇ ಇಸ್ಲಾಮಿನ ಸಂಸ್ಥಾಪಕರಾಗಿದ್ದಾರೆಂಬ ತಪ್ಪು ಕಲ್ಪನೆಯಿದೆ. ಆದರೆ ವಾಸ್ತವದಲ್ಲಿ ಪ್ರವಾದಿ ಮುಹಮ್ಮದರು(ಸ) ಯಾವುದೇ ಹೊಸ ಧರ್ಮವನ್ನು ಪ್ರತಿಪಾದಿಸಿದ್ದಲ್ಲ, ಬದಲಾಗಿ ದೇವನು ಸಮಸ್ತ ಮಾನವ ಕುಲಕ್ಕೆ ಆಯ್ಕೆ ಮಾಡಿರುವಂತಹ ಧರ್ಮದ ಅಂತಿಮ ಸಂದೇಶವಾಹಕರಾಗಿದ್ದಾರೆ. ಪ್ರವಾದಿ ಮುಹಮ್ಮದ್‍ರವರು(ಸ) ಇಸ್ಲಾಮಿನ ಸಂಸ್ಥಾಪಕರಲ್ಲ, ಬದಲಾಗಿ ಅದರ ಅಂತಿಮ ಸಂದೇಶವಾಹಕರಾಗಿದ್ದಾರೆ. ಈ ಧರ್ಮದ ಶಿಕ್ಷಣವನ್ನೇ ಮಾನವನಿಗೆ ನೀಡಲಾಗಿತ್ತು. ಮೊತ್ತ ಮೊದಲ ಮಾನವ ಆದಮರಾಗಿದ್ದಾರೆ. ಅವರನ್ನು ದೇವನು ತಂದೆ-ತಾಯಿ ಇಲ್ಲದೆ ಸೃಷ್ಟಿಸಿದ್ದನು. ಅವರ ಬಳಿಕ ಅವರ ಪತ್ನಿ ಹವ್ವಾರನ್ನು ಸೃಷ್ಟಿಸಿದನು. ಈ ದಂಪತಿಗಳಿಂದಲೇ ಮಾನವ ಕುಲವು ಬೆಳೆದು ಬಂತು. ಇವರನ್ನು ಕೆಲವರು ಮನು ಮತ್ತು ಸತ್ರೋಪಾ ಎಂದು ಹೇಳಿದರೆ, ಇನ್ನು ಕೆಲವರು ಏಡಂ ಮತ್ತು ಈವ್ ಎನ್ನುತ್ತಾರೆ. ಇವರಿಬ್ಬರ ವಿವರಣಾತ್ಮಕ ಉಲ್ಲೇಖವನ್ನು ಪವಿತ್ರ ಕುರ್‍ಆನ್(2:30-38), ಭವಿಷ್ಯ ಪುರಾಣ ಪ್ರತಿಸರ್ಗ ಪರ್ವ(ಖಂಡ:1, ಅಧ್ಯಾಯ:4) ಮತ್ತು ಬೈಬಲ್(ಉತ್ಪತ್ತಿ, 2:6-25)ಗಳಲ್ಲಿ ಹಾಗೂ ಇತರ ಅನೇಕ ಗ್ರಂಥಗಳಲ್ಲಿ ಕಾಣಬಹುದಾಗಿದೆ. ದೇವನು ಪ್ರತಿಯೊಂದು ಯುಗದಲ್ಲೂ ಪ್ರತಿಯೊಂದು ಸಮುದಾಯಕ್ಕೂ ಅದರದೇ ಭಾಷೆಯಲ್ಲಿ ಶಿಕ್ಷಣವನ್ನು ನೀಡಿರುವನು. ಆ ಶಿಕ್ಷಣದನುಸಾರ ಜೀವಿಸುವುದರ ಹೆಸರಾಗಿದೆ ಇಸ್ಲಾಮ್. ಈ ಹೆಸರನ್ನು ಪ್ರತಿಯೋರ್ವ ಪ್ರವಾದಿಯೂ ತಮ್ಮ ಭಾಷೆಯಲ್ಲಿ ಇರಿಸಿದ್ದರು. ಉದಾ: ಸಂಸ್ಕೃತದಲ್ಲಿ `ಸರ್ವಸಮರ್ಪಣ್ ಧರ್ಮ’ ಎಂದಾಗಿತ್ತು. ಅದರ ಅರಬಿ ಭಾಷಾರ್ಥವು `ಇಸ್ಲಾಮ್ ದೀನ್’ ಎಂದಾಗುತ್ತದೆ.

ಮಾನವನ ಧರ್ಮವು ಆರಂಭದಿಂದಲೇ ಒಂದೇ ಆಗಿತ್ತು ಎಂದು ಇದರಿಂದ ತಿಳಿದು ಬರುತ್ತದೆ. ಆದರೆ ಜನರು ತಂತಮ್ಮ ಗುರುಗಳ ಹೆಸರಲ್ಲಿ ವಿವಿಧ ಧರ್ಮಗಳನ್ನು ಮಾಡಿಕೊಂಡರು. ಹೀಗೆ ಮಾನವ ಕುಲವು ವಿಭಿನ್ನ ಧರ್ಮಗಳಲ್ಲಿ ವಿಂಗಡಿಸಲ್ಪಟ್ಟಿತು.

ಇಂದು ನಮ್ಮ ವಾಸ್ತವಿಕ ದೇವನೆಡೆಗೆ ಹೊರಳಬೇಕಾದುದು ನಮ್ಮ ಅತಿ ದೊಡ್ಡ ಅವಶ್ಯಕತೆಯಾಗಿದೆ. ಆ ದೇವನು ಯಾವುದೇ ವಿಶೇಷ ರಾಷ್ಟ್ರ, ಜಾತಿ ಅಥವಾ ವಂಶಕ್ಕೆ ಸೇರಿದವನಾಗಿರಬಾರದು; ಬದಲಾಗಿ ಅಖಿಲ ವಿಶ್ವದ ಸೃಷ್ಟಿಕರ್ತ, ಪಾಲಕ ಮತ್ತು ಪ್ರಭುವಾಗಿರಬೇಕು. ಅಲ್ಲಾಹನೇ ನಮ್ಮೆಲ್ಲರನ್ನು ಸೃಷ್ಟಿಸಿರುವನು, ಅವನೇ ನಮ್ಮ ಪಾಲನೆ-ಪೋಷಣೆ ಮಾಡುತ್ತಿದ್ದಾನೆ. ಆದ್ದರಿಂದ ಸ್ವಾಭಾವಿಕವಾಗಿಯೇ ನಾವು ಕೇವಲ ಅವನನ್ನೇ ಪೂಜಿಸಬೇಕು. ಇದೇ ಸತ್ಯವನ್ನು ಪ್ರತಿಯೊಂದು ಧಾರ್ಮಿಕ ಗ್ರಂಥವು ಪ್ರತಿಪಾದಿಸುತ್ತದೆ. ಇಸ್ಲಾಮ್ ಕೂಡಾ ಕೇವಲ ಸೃಷ್ಟಿಕರ್ತನಾದ ಏಕೈಕದೇವನನ್ನು ಆರಾದಿಸಬೇಕೆಂದು ಆದೇಶಿಸುತ್ತದೆ, ಇಸ್ಲಾಮಿನ ದೃಷ್ಟಿಯಲ್ಲಿ ಸ್ವತಃ ಪ್ರವಾದಿ ಮುಹಮ್ಮದರನ್ನು(ಸ) ಪೂಜಿಸುವುದು ಅಥವಾ ಶ್ರದ್ಧಾಭಾವದೊಂದಿಗೆ ಅವರ ಭಾವಚಿತ್ರವನ್ನು ತೂಗು ಹಾಕುವುದು ಮಹಾ ಪಾಪವಾಗಿದೆ. ದೇವನು ನೀಡುವ ಆದೇಶ ನೋಡಿ,

“ಜನರೇ, ಒಂದು ಉದಾಹರಣೆಯನ್ನು ನೀಡಲಾಗುತ್ತಿದೆ. ಗಮನವಿಟ್ಟು ಕೇಳಿರಿ: ನೀವು ಅಲ್ಲಾಹನನ್ನು ಬಿಟ್ಟು ಯಾವ ಆರಾಧ್ಯಯರನ್ನು ಪ್ರಾರ್ಥಿಸುತ್ತೀರೋ ಅವರೆಲ್ಲರೂ ಒಟ್ಟಾಗಿ ಒಂದು ನೊಣವನ್ನೂ ಸೃಷ್ಟಿಸಲಾರರು. ಮಾತ್ರವಲ್ಲ, ನೊಣವು ಅವರಿಂದೇನಾದರೂ ಕಸಿದುಕೊಂಡೊಯ್ದರೆ, ಅವರಿಗೆ ಅದನ್ನು ಬಿಡಿಸಿಕೊಳ್ಳಲಿಕ್ಕೂ ಸಾಧ್ಯವಾಗದು. ಸಹಾಯಾರ್ಥಿಗಳೂ ದುರ್ಬಲರು, ಯಾರಿಂದ ಸಹಾಯ ಬೇಡಲಾಗುತ್ತದೋ ಅವರು ದುರ್ಬಲರು. ಇವರು ಅಲ್ಲಾಹನ ಮಹತ್ವವನ್ನು ಹೇಗೆ ಅರಿಯಬೇಕಿತ್ತೋ ಹಾಗೆ ಅರಿತುಕೊಳ್ಳಲೇ ಇಲ್ಲ. ವಾಸ್ತವದಲ್ಲಿ ಶಕ್ತಿಪೂರ್ಣನೂ ಮಹಾ ಪ್ರತಾಪಿಯೂ ಅಲ್ಲಾಹನೇ ಆಗಿರುತ್ತಾನೆ.” (ಪವಿತ್ರ ಕುರ್‍ಆನ್, 22:73-74)

ಇಲ್ಲಿ ನಾವು ಸಂಕ್ಷಿಪ್ತವಾಗಿ ದೇವನ ಪರಿಚಯವನ್ನು ಮಾಡಿಸಲು ಪ್ರಯತ್ನಿಸಿದ್ದೇವೆ. ಹೆಚ್ಚಿನ ವಿವರಗಳಿಗೆ ನಮ್ಮನ್ನು ಸಂಪರ್ಕಿಸಿರಿ.

Add Comment