ಜಿಹಾದ್ ಮತ್ತು ಯುದ್ಧ

ಜಿಹಾದ್‍ನ ಅರ್ಥ ಯುದ್ಧವಲ್ಲ. ಬದಲಾಗಿ ಹೋರಾಡುವುದು, ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್‍ಆನ್ ಒಂದೆಡೆ ಹೀಗೆನ್ನುತ್ತದೆ,

“ಪೈಗಂಬರರೇ, ಸತ್ಯನಿಷೇಧಿಗಳ ಮಾತನ್ನು ಅನುಸರಿಸಲೇ ಬೇಡಿರಿ ಮತ್ತು ಈ ಕುರ್‍ಆನನ್ನು ತೆಗೆದುಕೊಂಡು ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ.” (25:52)

ಕುರ್‍ಆನಿನ ಈ ವಚನದ ತಾತ್ಪರ್ಯ ಯುದ್ಧ ಅಥವಾ ಸಮರವಲ್ಲ. ಬದಲಾಗಿ ಹೋರಾಟ ಹಾಗೂ ಸತತ ಪ್ರಯತ್ನವಾಗಿದೆ. ಇನ್ನೊಂದೆಡೆ ಕುರ್‍ಆನ್ ಹೀಗೆಂದಿದೆ,

“ಕೆಲವರು (ಸತ್ಯವಿಶ್ವಾಸ ಸ್ವೀಕರಿಸಿದ್ದ ಕಾರಣಕ್ಕಾಗಿ) ಸತಾಯಿಸಲ್ಪಟ್ಟಾಗ ಅವರು ಮನೆಮಾರುಗಳನ್ನು ತೊರೆದರು, ಹಿಜ್ರಃ(ವಲಸೆ) ಹೋದರು, ಅಲ್ಲಾಹನ ಮಾರ್ಗದಲ್ಲಿ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದರು ಮತ್ತು ಸಹನೆಯಿಂದ ವರ್ತಿಸಿದರು. ಅವರ ಬಗ್ಗೆ ನಿಶ್ಚಯವಾಗಿಯೂ ನಿನ್ನ ಪ್ರಭು ಕ್ಷಮಾಶೀಲನೂ ಕರುಣೆ ತೋರುವವನೂ ಆಗಿರುತ್ತಾನೆ.” (16:110)

ಪವಿತ್ರ ಕುರ್‍ಆನಿನ ಈ ವಚನದಲ್ಲೂ ಕೂಡ ಜಿಹಾದ್‍ನ ತಾತ್ಪರ್ಯವು ಕಷ್ಟ ಕಾರ್ಪಣ್ಯಗಳನ್ನು ಸಹಿಸುವುದಾಗಿದೆಯೆಂದು ಅದರ ಸಂದರ್ಭದಿಂದಲೇ ತಿಳಿದುಬರುತ್ತದೆ. ಮತ್ತೊಂದೆಡೆ, ಪವಿತ್ರ ಕುರ್‍ಆನಿನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ,

“ಅವರು (ನಿನ್ನ ಮಾತಾಪಿತರು) ನಿನಗೆ ತಿಳಿಯದುದನ್ನು ನನ್ನೊಂದಿಗೆ ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹಾಕಿದರೆ, ಅವರ ಮಾತನ್ನು ಎಷ್ಟು ಮಾತ್ರಕ್ಕೂ ಕೇಳಬೇಡ ಮತ್ತು ಈ ಲೋಕದಲ್ಲಿ ಅವರೊಂದಿಗೆ ಸದ್ವರ್ತನೆ ಮಾಡುತ್ತಿರು…” (31:15)

ಪವಿತ್ರ ಕುರ್‍ಆನಿನ ಪ್ರಸ್ತುತ ವಚನದಲ್ಲಿ ಅರಬಿ ಪದ ‘ಜಾಹದಾಕ’ ಪ್ರಯೋಗಿಸಲಾಗಿದೆ. ಇದರ ಮೂಲಪದ ‘ಜಿಹಾದ್’ ಆಗಿದೆ. ಆದರೆ ಇಲ್ಲಿ ಈ ಪದದ ಅರ್ಥ ‘ಒತ್ತಡ ಹೇರುವುದು’ ಎಂದಾಗಿದೆಯೇ ಹೊರತು ಯುದ್ಧವಲ್ಲ. ಇದು ವಚನದ ಸಂದರ್ಭದಿಂದ ಸ್ಪಷ್ಟವಾಗುತ್ತದೆ. ಇನ್ನೊಂದೆಡೆ ಪವಿತ್ರ ಕುರ್‍ಆನಿನಲ್ಲಿ ಹೀಗಿದೆ,

“ಹೋರಾಟ ನಡೆಸುವವನು ತನ್ನ ಹಿತಕ್ಕಾಗಿಯೇ ನಡೆಸುವನು…..” (29:6)

ಮತ್ತೊಂದೆಡೆ ಕುರ್‍ಆನ್ ಹೀಗೆನ್ನುತ್ತದೆ, “ನಮಗಾಗಿ ಹೋರಾಡುವವರಿಗೆ ನಾವು ನಮ್ಮ ಮಾರ್ಗಗಳನ್ನು ತೋರಿಸಿಕೊಡುವೆವು ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನರ ಜತೆಯಲ್ಲೇ ಇದ್ದಾನೆ.” (29: 69)

ಒಮ್ಮೆ ಪ್ರವಾದಿ ಮುಹಮ್ಮದ್‍ರು(ಸ) ಹೀಗೆಂದರು, “ತನ್ನ ಚಿತ್ತವನ್ನು ನಿಯಂತ್ರಿಸುವುದೇ ಅತಿ ದೊಡ್ಡ ಜಿಹಾದ್ ಆಗಿದೆ.” (ಹದೀಸ್)

ಈ ಮೇಲೆ ಉದ್ಧರಿಸಲಾಗಿರುವ ವಚನಗಳಲ್ಲಿ ‘ಜಿಹಾದ್’ ಎಂಬ ಪದ ಪ್ರಯೋಗಿಸಲಾಗಿದೆ. ಆದರೆ ಇದರ ಅರ್ಥ ಯುದ್ಧವಲ್ಲವೆಂಬುದು ಅವುಗಳ ಸಂದರ್ಭಗಳಿಂದ ತಿಳಿಯುತ್ತದೆ. ಅದೇನಿದ್ದರೂ, ಇದೇ ಸತತ ಪ್ರಯತ್ನ, ಹೋರಾಟಗಳ ಒಂದು ಘಟ್ಟ ಬಲಪ್ರಯೋಗ ಅರ್ಥಾತ್ ಯುದ್ಧವೂ ಆಗಿದೆ. ಪವಿತ್ರ ಕುರ್‍ಆನಿನಲ್ಲಿ ಜಿಹಾದ್ ಪದವನ್ನು ಹಲವು ಕಡೆ ಯುದ್ಧವೆಂಬ ಅರ್ಥದಲ್ಲೂ ಪ್ರಯೋಗಿಸಲಾಗಿದೆ. ಆದರೆ ಸಾಮಾನ್ಯವಾಗಿ ಯುದ್ಧ-ಸಮರಗಳಿಗೆ ಪವಿತ್ರ ಕುರ್‍ಆನಿನಲ್ಲಿ ‘ಕಿತಾಲ್’ ಎಂಬ ಪದ ಪ್ರಯೋಗವಾಗಿದೆ. ಇನ್ನು, ಜಿಹಾದ್ ಮತ್ತು ಯುದ್ಧಕ್ಕೆ ಸಂಬಂಧಿಸಿದಂತೆ ಪವಿತ್ರ ಕುರ್‍ಆನಿನ ಯಾವುದೇ ವಚನದ ಮೇಲೆ ಯಾರಿಗಾದರೂ ವಾಸ್ತವದಲ್ಲಿ ಆಕ್ಷೇಪವಿದ್ದರೆ, ಅವರು ಮೊದಲಾಗಿ ಯಾವ ವಚನದ ಮೇಲೆ ಆಕ್ಷೇಪವಿರುವುದೋ ಅದನ್ನು ಅದರ ಹಿಂದಿನ ಮತ್ತು ಮುಂದಿನ ಕೆಲವು ವಚನಗಳೊಂದಿಗೆ ಸೇರಿಸಿ ಓದಿಕೊಳ್ಳಬೇಕು. ಅದರಿಂದ ಆಕ್ಷೇಪವು ತನ್ನಿಂತಾನೇ ನಿವಾರಣೆಯಾಗುವುದು ಮತ್ತು ಪವಿತ್ರ ಕುರ್‍ಆನಿನಲ್ಲಿ ಎಲ್ಲೆಲ್ಲಾ ಯುದ್ಧ ಅಥವಾ ಯಾರಿಗಾದರೂ ಮರಣದಂಡನೆಯ ಆದೇಶ ನೀಡಲಾಗಿದೆಯೋ, ಅದು ಒಂದೋ ಯುದ್ಧ ಸಂಬಂಧೀ ಆದೇಶವಾಗಿದೆ ಇಲ್ಲವೆ ನ್ಯಾಯಸ್ಥಾಪನೆ ಅಥವಾ ಭೂಮಿಯಲ್ಲಿ ಶಾಂತಿ ಸ್ಥಾಪಿಸುವ ಅನಿವಾರ್ಯ ಬೇಡಿಕೆಗಳನ್ನು ದೃಷ್ಟಿಯಲ್ಲಿರಿಸಿಯೇ ನೀಡಲಾಗಿದೆಯೆಂದು ಸ್ಪಷ್ಟವಾಗುತ್ತದೆ. ಈ ವಿಷಯವು ಯಾವುದೇ ಸಮಾಜ ಅಥವಾ ದೇಶದಲ್ಲಿ ಆಕ್ಷೇಪಾರ್ಹವಾಗಿಲ್ಲ. ಬದಲಾಗಿ ದೇಶದಲ್ಲಿ ಸುವ್ಯವಸ್ಥೆ, ಶಾಂತಿ ಮತ್ತು ನ್ಯಾಯದ ಸ್ಥಾಪನೆಗಾಗಿ ಅದು ಅನಿವಾರ್ಯವಾಗುತ್ತದೆ. ದಂಗೆ-ಕ್ಷೋಭೆಯ ಸಂದರ್ಭವಾಗಿರಲಿ ಅಥವಾ ಚುನಾವಣೆಗಳಲ್ಲಿ ಮತಗಟ್ಟೆಗಳನ್ನು ವಶಪಡಿಸುವ ಸಂದರ್ಭವಾಗಲಿ, ಭಯೋತ್ಪಾದನೆಯ ವಿಷಯವಾಗಲಿ ಅಥವಾ ಒಂದು ದೇಶ ಇನ್ನೊಂದು ದೇಶದ ಮೇಲೆ ಸೈನಿಕ ಕಾರ್ಯಾಚರಣೆ ನಡೆಸುವುದಾಗಲಿ, ಪ್ರತಿ ಸಮಾಜದಲ್ಲಿ ಮತ್ತು ಪ್ರತಿಯೊಂದು ದೇಶದಲ್ಲಿ ಇಂತಹ ಘಾತಕ ಚಟುವಟಿಕೆಗಳನ್ನು ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಲಾಗುತ್ತದೆ. ಯಾರೂ ಇಂತಹ ಕಾರ್ಯಾಚರಣೆಯನ್ನು ದೌರ್ಜನ್ಯ ಅಥವಾ ಹಿಂಸೆಯೆನ್ನುವುದಿಲ್ಲ. ಸ್ವತಃ ನಮ್ಮ ದೇಶದಲ್ಲಿಯೂ ಹೀಗೆಯೇ ಸಂಭವಿಸುತ್ತದೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಕಾನೂನು ಪ್ರಕಾರ ಇದರ ಅಧಿಕಾರವಿದೆ. ಪವಿತ್ರ ಕುರ್‍ಆನಿನಲ್ಲಿ ಎಲ್ಲೆಲ್ಲಾ ಇಂತಹ ವಚನಗಳು ಉಲ್ಲೇಖಗೊಂಡಿವೆಯೋ ಅವುಗಳ ಹಿನ್ನೆಲೆ-ಸಂದರ್ಭಗಳನ್ನು ಅವಲೋಕಿಸಿದರೆ, ಈ ಆದೇಶಗಳನ್ನು ಮೇಲೆ ಸೂಚಿಸಲಾದ ಪರಿಸ್ಥಿತಿಗಳಲ್ಲೇ ನೀಡಲಾಗಿದೆಯೆಂದು ತಿಳಿದುಬರುತ್ತದೆ. ಉದಾಹರಣೆಗೆ ಕೆಲವು ವಚನಗಳನ್ನು ಇಲ್ಲಿ ಉದ್ಧರಿಸುತ್ತಿದ್ದೇವೆ-

“ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ. ಅಲ್ಲಾಹ್ ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ.” (2:190)

ಪವಿತ್ರ ಕುರ್‍ಆನಿನ ಪ್ರಸ್ತುತ ವಚನದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ನಿರಾಕರಿಸಲಾಗದಂತಹ ಅಮೂಲ್ಯ, ಉಪಯೋಗೀ ಮತ್ತು ಕಲ್ಯಾಣಕಾರೀ ಸಿದ್ಧಾಂತ ಉಲ್ಲೇಖಿಸಲ್ಪಟ್ಟಿದೆ. ಇಂತಹ ಸಿದ್ಧಾಂತವು ಕೇವಲ ವಾಸ್ತವಿಕ ಪ್ರಭುವಾದ ಸರ್ವಲೋಕ ಪರಿಪಾಲಕನಿಂದ ಮಾತ್ರ ಬರುವುದು ಸಾಧ್ಯ.

  1. ಯುದ್ಧವು ಕೇವಲ ಅಲ್ಲಾಹನ ಮಾರ್ಗದಲ್ಲಿಯೇ ಆಗಬೇಕೆಂದು ಇಸ್ಲಾವಿೂ ರಾಷ್ಟ್ರಕ್ಕೆ ತಾಕೀತು ಮಾಡಲಾಗಿದೆ. ಅರ್ಥಾತ್: ನಿಮ್ಮ ಯುದ್ಧವು ನಿಮ್ಮ ಭೌತಿಕ ಉದ್ದೇಶ ಮತ್ತು ಹಿತಾಸಕ್ತಿಯ ಪೂರ್ತೀಕರಣಕ್ಕಾಗಿ ಆಗಿರಬಾರದು. ನಿಮ್ಮ ಪ್ರಭುತ್ವ ಸ್ಥಾಪಿಸುವುದಕ್ಕೂ ಆಗಿರಬಾರದು. ಅಲ್ಲಾಹನ ಮಾರ್ಗವೆಂದರೆ ಸತ್ಯ-ನ್ಯಾಯದ ಮಾರ್ಗ, ತಮ್ಮ ನೈಜ ಪ್ರಭುವಿನ ಇಚ್ಛೆ ಮತ್ತು ಅವನು ಹೇಳಿದ ಅವಶ್ಯಕತೆಗಳಿಗಾಗಿರುವ ಮಾರ್ಗ.
  2. ನಿಮ್ಮೊಡನೆ ಯುದ್ಧಕ್ಕೆ ಮುಂದಾದವರೊಡನೆ ಅಥವಾ ನಿಮ್ಮ ಮೇಲೆ ಯುದ್ಧ ಹೇರಿದವರೊಡನೆ ಮಾತ್ರ ಯುದ್ಧ ಮಾಡುವ ಅನುಮತಿ ನಿಮಗೆ ನೀಡಲಾಗಿದೆ.
  3. ಕೆಲವೊಮ್ಮೆ ಯುದ್ಧ ಅನಿವಾರ್ಯವಾದಾಗಲೂ ಯುದ್ಧಕ್ಕೆ ಕೆಲವು ಮೇರೆಗಳನ್ನು ನಿಶ್ಚಯಿಸಲಾಗಿರುತ್ತದೆ. ಅವುಗಳನ್ನು ಅನುಸರಿಸುವುದು ಅನಿವಾರ್ಯವೆನ್ನಲಾಗಿದೆ. ಅವುಗಳನ್ನು ಉಲ್ಲಂಘಿಸುವವರ ಬಗ್ಗೆ, ಅಲ್ಲಾಹನು ಅವರನ್ನು ಮೆಚ್ಚುವುದಿಲ್ಲ ಮತ್ತು ಅಲ್ಲಾಹನು ಮೆಚ್ಚದಂತಹವರಿಗೆ ವೇದನಾಯುಕ್ತ ಶಿಕ್ಷೆ ಮತ್ತು ನರಕದ ಯಾತನೆ ನೀಡಲಾಗುವುದೆನ್ನಲಾಗಿದೆ.

ಇದನ್ನು ಪವಿತ್ರ ಕುರ್‍ಆನಿನಲ್ಲಿ ಅನೇಕ ಕಡೆ ಸೂಚಿಸಲಾಗಿದೆ. ಜಗದೊಡೆಯನಾದ ಅಲ್ಲಾಹನು ನಿಶ್ಚಯಿಸಿರುವ ಯುದ್ಧದ ಮೇರೆಗಳನ್ನು ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ವಚನಗಳಲ್ಲಿ ಅನೇಕ ಕಡೆ ವಿಶದೀಕರಿಸಲಾಗಿದೆ. ಉದಾಹರಣೆಗೆ- ಶತ್ರುಗಳ ಸ್ತ್ರೀಯರು, ಮಕ್ಕಳು, ವೃದ್ಧರು ಹಾಗೂ ಗಾಯಾಳುಗಳ ಮೇಲೆ ಕೈಯೆತ್ತಬಾರದು. ಪೂಜೆ, ಉಪಾಸನೆಯಲ್ಲಿ ನಿರತರಾಗಿರುವವರಿಗೆ ಯಾವುದೇ ರೀತಿಯ ಹಾನಿಯುಂಟಾಗಬಾರದು. ಬೆಳೆ ಮತ್ತು ಗಿಡಮರಗಳನ್ನು ನಾಶಪಡಿಸಬಾರದು ಹಾಗೂ ಜಾನುವಾರುಗಳನ್ನು ಕೊಲ್ಲಬಾರದು. ಶತ್ರುಗಳ ಮೃತ ದೇಹಗಳ ಅಂಗಚ್ಛೇದನ ಮಾಡಬಾರದು ಇತ್ಯಾದಿ ಇತ್ಯಾದಿ…

ಯುದ್ಧದ ವೇಳೆ ಈ ಮೇರೆ ಮತ್ತು ಆದೇಶಗಳನ್ನು ವಿೂರುವವರ ಬಗ್ಗೆ ಅಲ್ಲಾಹನು, ನಿಮ್ಮ ಸರ್ವ ಪರಿಶ್ರಮವೂ ಸರ್ವ ಬಲಿದಾನವೂ ವ್ಯರ್ಥವಾಗುವುದು- ಮಾತ್ರವಲ್ಲ, ನೀವು ಅಪರಾಧಿಯೆಂದು ಪರಿಗಣಿಸಲ್ಪಟ್ಟು ದೇವಕ್ರೋಧಕ್ಕೆ ಪಾತ್ರರಾಗಿ ಬಿಡುವಿರಿ ಎಂದು ಎಚ್ಚರಿಸುತ್ತಾನೆ. ಒಂದು ವಿಷಯ ಇಲ್ಲಿ ನೆನಪಿಡಬೇಕಾಗಿದೆ. ಇಸ್ಲಾಮ್ ಒಂದೆಡೆ ಸತ್ಕರ್ಮಿಗಳಿಗೆ ಸ್ವರ್ಗದ ಸುವಾರ್ತೆ ನೀಡುತ್ತದೆ. ಇನ್ನೊಂದೆಡೆ ದೇವಾಜ್ಞೋಲ್ಲಂಘಕರು ಮತ್ತು ದುಷ್ಕರ್ಮಿಗಳಿಗೆ ಪಾರಲೌಕಿಕ ಜೀವನದಲ್ಲಿ ವೇದನಾಯುಕ್ತ ಶಿಕ್ಷೆಯಿರುವುದೆಂದು ಎಚ್ಚರಿಸುತ್ತದೆ. ಇಸ್ಲಾಮ್ ಇದೇ ಪರಲೋಕ ವಿಶ್ವಾಸದ ಆಧಾರದ ಮೇಲೆ ತನ್ನ ಶಿಕ್ಷಣದಂತೆ ಜೀವಿಸಲು ಆದೇಶಿಸಿದೆ. ಈ ವಿಶೇಷತೆಯು ಕೇವಲ ಇಸ್ಲಾಮಿಗೆ ಮಾತ್ರವಿದೆ. ಯಾವ ವ್ಯಕ್ತಿಯಲ್ಲಿ ಪರಲೋಕದ ಬಗ್ಗೆ ಇಂತಹ ವಿಶ್ವಾಸವಿರುತ್ತದೋ ಆತ ಎಂದಿಗೂ ಉದ್ದೇಶ ಪೂರ್ವಕ ದುಷ್ಕರ್ಮವೆಸಗ ಲಾರನೆಂಬುದರಲ್ಲಿ ಸಂದೇಹವೇ ಇಲ್ಲ. ಈ ಲೋಕದ ಕಾನೂನುಗಳಲ್ಲಿ ಅಕ್ರಮ-ದೌರ್ಜನ್ಯಗಳನ್ನೆಸಗುವವರಿಗೆ ಕೇವಲ ಲೌಕಿಕ ಶಿಕ್ಷೆಯ ಬಗ್ಗೆ ಎಚ್ಚರಿಸಲಾಗುತ್ತದೆ. ಪರಲೋಕದ ಕಲ್ಪನೆಯೇ ಅದರಲ್ಲಿರುವುದಿಲ್ಲ. ಹಾಗೆಯೇ ಹೆಚ್ಚಿನ ಜನರು ಪೊಲೀಸ್ ಮತ್ತು ಸೇನೆಯ ದೌರ್ಜನ್ಯಗಳನ್ನು ದೌರ್ಜನ್ಯವೆಂದು ಭಾವಿಸುವುದೇ ಇಲ್ಲ. ಅದರಿಂದ ಸರಕಾರೀ ನೌಕರರು ಮತ್ತು ಅಧಿಕಾರಿಗಳ ಮನೋಬಲ ಕುಸಿಯಬಹುದೆಂದು ಅವರು ಭಾವಿಸುತ್ತಾರೆ. ಆದರೆ ಇಸ್ಲಾಮ್, ಸಾಮಾನ್ಯ ಜನತೆ ಮತ್ತು ಪೊಲೀಸ್- ಸೇನೆಯಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಅದು ಅಕ್ರಮ, ಅತ್ಯಾಚಾರ ಎಸಗುವವರನ್ನು ಈ ಲೋಕದಲ್ಲಿ ಮಾತ್ರವಲ್ಲ ಪರಲೋಕದ ಯಾತನಾಮಯ ಶಿಕ್ಷೆಯ ಬಗ್ಗೆಯೂ ಎಚ್ಚರಿಕೆ ನೀಡುತ್ತದೆ. ಈ ವಾಸ್ತವಿಕತೆ ಪವಿತ್ರ ಕುರ್‍ಆನಿನ ಪ್ರಸ್ತುತ ವಚನದಿಂದಲೂ ಸ್ಪಷ್ಟವಾಗುತ್ತದೆ. ಮುಂದೆಯೂ ಇಂತಹ ಕೆಲವು ವಚನಗಳನ್ನು ಉದ್ಧರಿಸುತ್ತೇವೆ. ಪವಿತ್ರ ಕುರ್‍ಆನಿನಲ್ಲಿ ಒಂದೆಡೆ ಹೀಗೆನ್ನಲಾಗಿದೆ,

“ನಮ್ಮ ಪ್ರಭೂ! ಅಕ್ರಮಿಗಳು ವಾಸಿಸುವ ಈ ನಾಡಿನಿಂದ ನಮ್ಮನ್ನು ಹೊರತೆಗೆ. ನೀನು ನಿನ್ನ ಕಡೆಯಿಂದ ನಮಗೊಬ್ಬ ಮೇಲ್ವಿಚಾರಕನನ್ನು ಮತ್ತು ಒಬ್ಬ ಸಹಾಯಕನನ್ನು ನಿಯೋಜಿಸು” ಎಂದು ಮೊರೆಯಿಡುತ್ತಿರುವ ಮರ್ದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇನು? (4:75)

ಇನ್ನೊಂದೆಡೆ ಪವಿತ್ರ ಕುರ್‍ಆನ್ ಹೀಗೆ ಉಲ್ಲೇಖಿಸಿದೆ,

“ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರು ಮತ್ತು ನಿಶ್ಚಯವಾಗಿಯೂ ಅಲ್ಲಾಹನು ಅವರಿಗೆ ಸಹಾಯ ಮಾಡಲು ಸಮರ್ಥನು. ಇವರು, ‘ನಮ್ಮ ಪ್ರಭು ಅಲ್ಲಾಹ್’ ಎಂದಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಅನ್ಯಾಯವಾಗಿ ಹೊರ ಹಾಕಲ್ಪಟ್ಟವರು…” (22:39-40)

ಪ್ರಾರಂಭದಲ್ಲಿ ನಾವು ಯಾವ ವಚನದ ವ್ಯಾಖ್ಯೆಯಲ್ಲಿ ಈ ವಿಷಯಗಳನ್ನು ಉಲ್ಲೇಖಿಸಿರುವೆವೋ, ಆ ವಚನದ ಬಳಿಕದ ವಚನಗಳನ್ನೂ ಇಲ್ಲಿ ಕೊಡಲಾಗಿದೆ. ಇದರಿಂದ ವಸ್ತುಸ್ಥಿತಿಯು ಇನ್ನಷ್ಟು ಸ್ಪಷ್ಟವಾಗುತ್ತದೆ-

“ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ. ಅವರೊಡನೆ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗಲೆಲ್ಲಾ ಹೋರಾಟ ನಡೆಸಿರಿ ಮತ್ತು ಅವರು ನಿಮ್ಮನ್ನು ಹೊರಕ್ಕಟ್ಟಿದ್ದಲ್ಲಿಂದ ನೀವೂ ಅವರನ್ನು ಹೊರಕ್ಕಟ್ಟಿರಿ. ಏಕೆಂದರೆ ಹತ್ಯೆಯು ಕೆಟ್ಟದಾಗಿದ್ದರೂ ಕ್ಷೋಭೆಯು(ಫಿತ್ನಃ) ಅದಕ್ಕಿಂತಲೂ ಕೆಟ್ಟದಾಗಿದೆ. ಅವರು ‘ಮಸ್ಜಿದುಲ್ ಹರಾಮ್’ನ ಬಳಿ ನಿಮ್ಮೊಡನೆ ಹೋರಾಡದಿದ್ದರೆ ನೀವೂ ಹೋರಾಡಬೇಡಿರಿ. ಆದರೆ ಅಲ್ಲಿಯೂ ಅವರು ನಿಮ್ಮೊಡನೆ ಹೋರಾಡಿದರೆ ನೀವೂ ಅವರನ್ನು ನಿರ್ದಾಕ್ಷಿಣ್ಯವಾಗಿ ವಧಿಸಿರಿ. ಇಂತಹ ಸತ್ಯನಿಷೇಧಿಗಳಿಗೆ ಇದೇ ಪ್ರತಿಫಲ. ಅನಂತರ ಅವರು ಹಿಂಜರಿದರೆ ನಿಶ್ಚಯವಾಗಿಯೂ ಅಲ್ಲಾಹನು P್ಷÀಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆಂಬುದನ್ನು ನೀವು ಅರಿತಿರಬೇಕು. ಕ್ಷೋಭೆಯು ಸಂಪೂರ್ಣ ಅಳಿದು ಹೋಗುವವರೆಗೂ ಧರ್ಮವು ಸಂಪೂರ್ಣವಾಗಿ ಅಲ್ಲಾಹನಿಗೇ ಆಗುವವರೆಗೂ ನೀವು ಅವರ ವಿರುದ್ಧ ಹೋರಾಡಿರಿ. ಅನಂತರ ಅವರು ಹಿಮ್ಮೆಟ್ಟಿದರೆ ಅಕ್ರಮಿಗಳ ಹೊರತು ಇನ್ನಾರ ಮೇಲೂ ಕೈಯೆತ್ತಬಾರದೆಂಬುದನ್ನು ನೀವು ತಿಳಿದಿರಬೇಕು. ಸನ್ಮಾನಿತ ತಿಂಗಳ ಪರ್ಯಾಯ ಸನ್ಮಾನಿತ ತಿಂಗಳೇ ಆಗಿರುತ್ತದೆ. ಎಲ್ಲ ಸನ್ಮಾನಿತಗಳನ್ನು ಸರಿಸಮಾನವಾಗಿಯೇ ಗೌರವಿಸಲಾಗುವುದು. ಆದುದರಿಂದ ನಿಮ್ಮ ಮೇಲೆ ಕೈ ಮಾಡಿದವರ ಮೇಲೆ ನೀವೂ ಅದೇ ರೀತಿಯಲ್ಲಿ ಕೈ ಮಾಡಿರಿ. ಆದರೆ ಅಲ್ಲಾಹನ ಭಯವಿರಿಸಿಕೊಳ್ಳಿರಿ. ಅಲ್ಲಾಹನು ಸೀಮೋಲ್ಲಂಘನೆ ಮಾಡದವರೊಂದಿಗೆ ಮಾತ್ರವಿರುತ್ತಾನೆ ಎಂಬುದನ್ನು ನೀವು ತಿಳಿದಿರಬೇಕು.” (2:190-194)

ಪವಿತ್ರ ಕುರ್‍ಆನಿನ ಮೇಲೆ ಆಕ್ಷೇಪವೆತ್ತುವವರು ಕುರ್‍ಆನಿನ ಈ ಮೇಲಿನ ವಚನಗಳನ್ನು ಪೂರ್ಣ ರೂಪದಲ್ಲಿ ಮುಂದಿಡುವುದರ ಬದಲು ತಮ್ಮ ದುರುದ್ದೇಶದ ಈಡೇರಿಕೆಗಾಗಿ ಅವುಗಳ ಮಧ್ಯದಿಂದ, “ಸತ್ಯನಿಷೇಧಿಗಳನ್ನು ಕಂಡಲ್ಲಿ ವಧಿಸಿರಿ”, “ಕ್ಷೋಭೆಯು ಕೊಲೆಗಿಂತಲೂ ಕೆಟ್ಟದಾಗಿದೆ”, “ಕ್ಷೋಭೆಯು ಸಂಪೂರ್ಣ ಅಳಿದು ಹೋಗುವವರೆಗೂ ಧರ್ಮವು ಪರಿಪೂರ್ಣವಾಗಿ ಅಲ್ಲಾಹನಿಗೇ ಆಗುವವರೆಗೂ ನೀವು ಅವರ ವಿರುದ್ಧ ಹೋರಾಡಿರಿ” ಎಂಬಿತ್ಯಾದಿ ಭಾಗಗಳನ್ನು ಉದ್ಧರಿಸುತ್ತಾರೆ. ವಸ್ತುತಃ ಯಾವನೇ ಒಬ್ಬ ನ್ಯಾಯಪ್ರಿಯ ವ್ಯಕ್ತಿ ಪವಿತ್ರ ಕುರ್‍ಆನಿನ ಈ ಮೇಲಿನ ಸಂಪೂರ್ಣ ವಚನಗಳನ್ನು ಒಟ್ಟಿಗೇ ಓದಿದರೆ ಮತ್ತು ಅವುಗಳು ಅವತೀರ್ಣಗೊಳ್ಳುವುದರ ಹಿಂದಿರುವ ಘಟನೆಯನ್ನು ಅವಲೋಕಿಸಿದರೆ, ಆತ ಎಂದಿಗೂ ಆಕ್ಷೇಪಕರು ಪ್ರಚಾರ ಮಾಡುವಂತೆ ‘ಪವಿತ್ರ ಕುರ್‍ಆನ್ ಮುಸ್ಲಿಮೇತರರನ್ನು ಕೊಲ್ಲಲು ಮುಸ್ಲಿಮರಿಗೆ ಆದೇಶಿಸುತ್ತದೆ’ ಎಂದು ಭಾವಿಸಲಾರ. ವಾಸ್ತವದಲ್ಲಿ ಪವಿತ್ರ ಕುರ್‍ಆನ್ ಸತ್ಯನಿಷೇಧಿಗಳು ಮತ್ತು ಬಹುದೇವಾರಾಧಕರ ವಿರುದ್ಧ ಯುದ್ಧ ಮಾಡಲು ಹೇಳಿರುವುದು ಅವರು ಬಹುದೇವಾರಾಧಕರು ಅಥವಾ ಸತ್ಯನಿಷೇಧಿಗಳಾಗಿದ್ದಾರೆ ಎಂಬ ಕಾರಣಕ್ಕಾಗಿಯಲ್ಲ.

ಬದಲಾಗಿ ಅದಕ್ಕೆ ಕಾರಣ – ಅವರು ಪ್ರವಾದಿ ಮುಹಮ್ಮದ್(ಸ) ಮತ್ತವರ ಅನುಯಾಯಿಗಳಾದ ಮುಸ್ಲಿಮರ ಜೀವನವನ್ನು ಸಂಕಷ್ಟಮಯ ಗೊಳಿಸಿದ್ದರು. ಅವರ ಮೇಲೆ ತರತರದ ದೌರ್ಜನ್ಯವೆಸಗುತ್ತಿದ್ದರು. ಧಗಧಗಿಸುವ ಕೆಂಡದ ಮೇಲೆ ಅಂಗಾತ ಮಲಗಿಸಿ ಅವರ ಎದೆಯ ಮೇಲೆ ಭಾರೀ ಗಾತ್ರದ ಕಲ್ಲುಗಳನ್ನಿರಿಸುತ್ತಿದ್ದರು. ಸುಡುವ ಮರಳ ಮೇಲೆ ಬರಿಮೈಯಲ್ಲಿ ಬೋರಲು ಮಲಗಿಸಿ ಎಳೆಯುತ್ತಿದ್ದರು. ಕೆಂಡದಂತಹ ಬಿಸಿ ಸಲಾಕೆಗಳಿಂದ ಅವರ ದೇಹವನ್ನು ಘಾಸಿಗೊಳಿಸುತ್ತಿದ್ದರು. ಅವರ ಸ್ತ್ರೀಯರೊಂದಿಗೆ ಅತ್ಯಂತ ಹೇಯ ಮತ್ತು ಅವಮಾನಕಾರಿಯಾಗಿ ವರ್ತಿಸಿದ್ದರು. ಅವರ ಮಾನ ಕೆಡಿಸುತ್ತಿದ್ದರು ಹಾಗೂ ಅವರ ಮೇಲೆ ಸಾಮಾಜಿಕ ಬಹಿಷ್ಕಾರವನ್ನು ಹೇರುತ್ತಿದ್ದರು. ತತ್ಪರಿಣಾಮವಾಗಿ ಆ ಬಡಪಾಯಿಗಳು (ಪ್ರವಾದಿ ಮತ್ತು ಸತ್ಯವಿಶ್ವಾಸಿಗಳು) ಗಿಡಮರಗಳ ಎಲೆ ತಿನ್ನುವ ಮತ್ತು ಒಣ ಚರ್ಮವನ್ನು ನೀರಲ್ಲಿ ನೆನೆಸಿ ಜಗಿಯುವ ಅನಿವಾರ್ಯತೆಗೆ ಒಳಗಾಗಿದ್ದರು. ಆ ಅಕ್ರಮಿ ಸತ್ಯನಿಷೇಧಿಗಳಂತೂ ಸ್ವತಃ ಪ್ರವಾದಿ ಮುಹಮ್ಮದ್‍ರನ್ನೇ(ಸ) ವಧಿಸಿ ಬಿಡುವ ಸಂಚು ಹೂಡಿದರು. ಆ ಅಕ್ರಮಿಗಳು ಪ್ರವಾದಿವರ್ಯರನ್ನು(ಸ) ಮತ್ತು ಸತ್ಯವಿಶ್ವಾಸಿಗಳನ್ನು ತಮ್ಮ ಮನೆ ಮಾರುಗಳನ್ನು ತೊರೆದು ಹೋಗುವಷ್ಟು ಸತಾಯಿಸಿದರು. ಸತ್ಯವಿಶ್ವಾಸಿಗಳು ಅಕ್ರಮಿಗಳ ದೌರ್ಜನ್ಯದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಯಾವೆಲ್ಲ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದರೋ ಅಲ್ಲೆಲ್ಲ ಆ ಅಕ್ರಮಿಗಳು ಆಗಾಗ ಧಾಳಿಯೆಸಗಿ ಅವರನ್ನು ಇನ್ನಷ್ಟು ಪೀಡಿಸಿದರು. ಅವರಂತೂ ಸತ್ಯವಿಶ್ವಾಸಿಗಳನ್ನು ಸಂಪೂರ್ಣವಾಗಿ ಅಳಿಸಲು ಪ್ರಯತ್ನಿಸಿದ್ದರು. ತಮ್ಮ ಅಕ್ರಮ ಮತ್ತು ಹೇಯ ಉದ್ದೇಶಗಳ ಈಡೇರಿಕೆಗಾಗಿ ಅವರು ಇನ್ನಿತರ ಗೋತ್ರಗಳು ಮತ್ತು ಜನಾಂಗಗಳ ಸಹಾಯ ಸಹಕಾರಗಳನ್ನು ಪಡೆಯುತ್ತಿದ್ದರು. ಈ ವಾಸ್ತವಿಕತೆಯು ಪ್ರವಾದಿವರ್ಯರ ಜೀವನ ಮತ್ತು ಪವಿತ್ರ ಕುರ್‍ಆನಿನ ಯುದ್ಧ ಸಂಬಂಧೀ ವಚನಗಳ ಸಂದರ್ಭ-ಹಿನ್ನೆಲೆಗಳಿಂದ ಸ್ಪಷ್ಟವಾಗುತ್ತದೆ.

ಸತ್ಯವಿಶ್ವಾಸಿಗಳು ದೇವನು ಏಕೈಕನೆಂದು ನಂಬುತ್ತಿದ್ದರು. ಹ. ಮುಹಮ್ಮದ್‍ರನ್ನು(ಸ) ಅಲ್ಲಾಹನ ಪ್ರವಾದಿಯೆಂದು ಒಪ್ಪಿದ್ದರು. ದೇವನ ಇಚ್ಛೆಯ ಪ್ರಕಾರ ಜೀವನ ನಡೆಸುತ್ತಿದ್ದರು. ಮದ್ಯ, ಜೂಜು, ಅಶ್ಲೀಲತೆ, ಸ್ತ್ರೀ ಪೀಡನೆ, ಜಗಳ-ಕಲಹ ಮತ್ತಿತರ ಸಾಮಾಜಿಕ ಹಾಗೂ ನೈತಿಕ ಕೆಡುಕುಗಳಿಂದ ದೂರವುಳಿಯುತ್ತಿದ್ದರು. ಆ ಕಾರಣಕ್ಕಾಗಿಯೇ ಈ ಎಲ್ಲ ದೌರ್ಜನ್ಯಗಳನ್ನು ಅವರ ಮೇಲೆ ಎಸಗಲಾಗುತ್ತಿತ್ತು. ಹಾಗಿರುವಾಗ ಇಂತಹ ದುಷ್ಟರ ಮತ್ತು ಅತ್ಯಾಚಾರಿಗಳ ಮೇಲೆ ಪುಷ್ಪ ವರ್ಷಿಸುವ ಆದೇಶವನ್ನು ನೀಡಬೇಕಾಗಿತ್ತೇ ಎಂದು ಕೊಂಚ ಪ್ರಾಮಾಣಿಕವಾಗಿ ಯೋಚಿಸಿ. ಯಾವನೇ ಒಬ್ಬ ವ್ಯಕ್ತಿಯನ್ನು ಇಸ್ಲಾಮ್ ಸ್ವೀಕರಿಸುವಂತೆ ಒತ್ತಾಯಿಸುವಂತಿಲ್ಲ. ಹಾಗೆಯೇ ಇಸ್ಲಾಮ್ ಸ್ವೀಕರಿಸದ ಕಾರಣಕ್ಕಾಗಿ ಯಾರಿಗೂ ಮರಣದಂಡನೆ ಅಥವಾ ಇನ್ನಿತರ ಶಿಕ್ಷೆ ನೀಡುವಂತಿಲ್ಲವೆಂದು ಪವಿತ್ರ ಕುರ್‍ಆನಿನಲ್ಲಿ ಅನೇಕ ಕಡೆ ಸ್ಪಷ್ಟಪಡಿಸಲಾಗಿದೆ. ಇನ್ನು ಒಬ್ಬ ವ್ಯಕ್ತಿ ಬಲಾತ್ಕಾರದಿಂದಾಗಿ ಇಸ್ಲಾಮ್ ಸ್ವೀಕರಿಸಿದನೆಂದಿಟ್ಟುಕೊಳ್ಳಿ, ಆಗಲೂ ಆತನ ಸ್ವೀಕಾರ ಅಥವಾ ವಿಶ್ವಾಸವು ಅಂಗೀಕಾರಾರ್ಹವಾಗುವುದಿಲ್ಲ. ಅಲ್ಲಾಹನ ಬಳಿ ಅದು ಸ್ವೀಕಾರಾರ್ಹವೂ ಆಗುವುದಿಲ್ಲ. ಏಕೆಂದರೆ ಸತ್ಯವಿಶ್ವಾಸಕ್ಕೆ ಮುಖ್ಯವಾಗಿ ಮನಸ್ಸಿನ ಸಿದ್ಧತೆ ಮತ್ತು ಇಚ್ಛೆಯು ಅನಿವಾರ್ಯ ಶರ್ತವಾಗಿದೆ. ಖಡ್ಗ ಅಥವಾ ಬಲಪ್ರಯೋಗದಿಂದ ಈ ಕಾರ್ಯವನ್ನು ಸಾಧಿಸಲಾಗದು. ತನ್ನ ಬೋಧನೆ ಮತ್ತು ಸಂದೇಶಗಳನ್ನು ಆಧಾರ ಪ್ರಮಾಣಗಳ ಸಹಿತ ಅತ್ಯಂತ ಸ್ಪಷ್ಟ ರೂಪದಲ್ಲಿ ಜನರ ಮುಂದಿರಿಸಿದ ಬಳಿಕ ಅದನ್ನು ಅಂಗೀಕರಿಸುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವನ್ನು ಪವಿತ್ರ ಕುರ್‍ಆನ್ ಮಾನವನಿಗೆ ನೀಡಿದೆ.

ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದಿರಬೇಕಾಗಿದೆ. ಅದೇನೆಂದರೆ ಯುದ್ಧ ಅಥವಾ ದಂಡಕ್ಕೆ ಸಂಬಂಧಿಸಿದ ಆದೇಶಗಳನ್ನು ಪವಿತ್ರ ಕುರ್‍ಆನ್ ತನ್ನ ಅನುಯಾಯಿಗಳಿಗೆ ವ್ಯಕ್ತಿಗತವಾಗಿ ಬೇರೆ ಬೇರೆಯಾಗಿ ನೀಡಿಲ್ಲ. ಬದಲಾಗಿ, ಈ ಆದೇಶಗಳನ್ನು ಇಸ್ಲಾವಿೂ ರಾಜ್ಯ ಅಥವಾ ಸರಕಾರೀ ಯಂತ್ರಕ್ಕೆ ನೀಡಿದೆ ಮತ್ತು ಇವುಗಳಿಗೆ ವ್ಯಾವಹಾರಿಕ ರೂಪ ನೀಡಲು ನ್ಯಾಯಾಂಗ ಹಾಗೂ ಸಂಘಟಿತ ವ್ಯವಸ್ಥೆಯನ್ನೂ ನೀಡಿದೆ. ಪ್ರತಿಯೊಬ್ಬ ಮುಸ್ಲಿಮನಿಗೂ ವ್ಯಕ್ತಿಗತವಾಗಿ ಯಾರಿಗೆ ಬೇಕಾದರೂ ಮರಣದಂಡನೆ ನೀಡುವ ಅಥವಾ ಕ್ಷೋಭೆ ಹರಡುವವರನ್ನು ವಧಿಸುವ ಆದೇಶವನ್ನು ಕುರ್‍ಆನ್ ನೀಡುತ್ತದೆಂಬಂತೆ ಆಕ್ಷೇಪಕರು ತಮ್ಮ ವಾದಗಳನ್ನು ಮಂಡಿಸುತ್ತಾರೆ. ಎಷ್ಟೊಂದು ವಿಪರ್ಯಾಸದ ಮಾತಿದು! ಆಕ್ಷೇಪಕರ ಈ ನೀತಿಯು ವಸ್ತುತಃ ಸತ್ಯ ಹಾಗೂ ನ್ಯಾಯದ ಬೇಡಿಕೆಗಳಿಗೆ ವಿರುದ್ಧವಾಗಿದೆ. ಮಾತ್ರವಲ್ಲ, ಸತ್ಯ ಮತ್ತು ನ್ಯಾಯದ ಅಣಕವಾಗಿದೆ.

Add Comment