ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ ?

ಕುಫ್ರ್ ಮತ್ತು ಕಾಫಿರ್ ಎಂಬುದು ಇಸ್ಲಾಮಿನ ಕೆಲವು ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಎರಡು ಶಬ್ದವಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಖೇದವೇನೆಂದರೆ ಬೇರೆ ಬೇರೆ ಪಾರಿಭಾಷಿಕ ಶಬ್ದಗಳಂತೆಯೇ ಈ ಶಬ್ದಗಳಿಗೂ ತಪ್ಪು ಅರ್ಥ ನೀಡಿ ಅದರ ನಿಜವಾದ ಅರ್ಥವನ್ನು ಅಪಾರ್ಥಗೊಳಿಸುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಕಾಫಿರ್ ಶಬ್ದಕ್ಕೆ ಮುಸ್ಲಿಮೇತರ ಸಹೋದರರನ್ನು ದ್ವೇಷಿಸುವುದು ತಿರಸ್ಕರಿಸುವುದು ಮತ್ತು ಅಸಮಾನತೆ ತೋರಿಸುವುದೆಂಬ ಅರ್ಥವನ್ನು ಹೇಳಲಾಗುತ್ತಿದೆ ಮತ್ತು ಕಾಫಿರ್ ಅಂತ ಹೇಳಿ ಮುಸ್ಲಿಮೇತರ ಸಹೋದರರನ್ನೇ ಅವರ ಮೂಲ ಮಾನವ-ಹಕ್ಕುಗಳಿಂದ ಇಸ್ಲಾಮ್ ವಂಚಿಸುತ್ತಿದೆ ಹಾಗೂ ಅವರಿಗೆ ಜೀವಿಸುವ ಹಕ್ಕನ್ನು ನೀಡಲು ಕೂಡಾ ಇಚ್ಛಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ವಾಸ್ತವಕ್ಕೆ ದೂರವಾದ ಅಪ ಪ್ರಚಾರವಾಗಿದೆ.

ಪವಿತ್ರ ಕುರ್‍ಆನ್‍ನಲ್ಲಿ ಕಾಫಿರ್, ಕುಫ್ರ್ ಮತ್ತು ಶಿರ್ಕ್‍ನ ಶಬ್ದಗಳು ತುಂಬ ಕಡೆಗಳಲ್ಲಿ ಬಂದಿವೆ. ಕುಫ್ರ್ ನ ಅರ್ಥ ಸಂದರ್ಭಾನುಸಾರ ಬೇರೆ ಬೇರೆಯಾಗಿರುತ್ತದೆ. ಅಂದರೆ ನಿರಾಕರಣೆ, ಅವಜ್ಞೆ, ಕೃತಘ್ನತೆ ಮತ್ತು ನಿರ್ಲಕ್ಷ್ಯ, ಸತ್ಯವನ್ನು ಅಡಗಿಸಿಡುವುದು ಮತ್ತು ಅಧರ್ಮ ಇತ್ಯಾದಿ. ಕುಫ್ರ್ ಮಾಡುತ್ತಿರುವವನನ್ನು ಅರಬಿ ಭಾಷೆಯಲ್ಲಿ ಕಾಫಿರ್ ಎಂದು ಕರೆಯುತ್ತಾರೆ.

`ಕಾಫಿರ್’ ಎಂಬುದು ವ್ಯಾಪಕ ದೃಷ್ಟಿಯಲ್ಲಿ ಗುಣವಾಚಕ ಸಂಕೇತವಾಗಿದ್ದು ಇದು ಅಪಮಾನ ಭೋದಕ ಶಬ್ದವಲ್ಲ. ಇದು ಯಾರ ಕುರಿತು ಸಂಬೋಧಿಸಲಾಗಿದೆಯೆಂದರೆ ಅವರ ಮುಂದೆ ದೈವಿಕ ಶಿಕ್ಷಣಗಳನ್ನು ತಿಳಿಸಲಾಗಿತ್ತು ಮತ್ತು ಅವರು ಯಾವುದೋ ಕಾರಣದಿಂದ ಈ ಶಿಕ್ಷಣಗಳನ್ನೇ ತಪ್ಪೆಂದು ಭಾವಿಸಿದರು ಹಾಗೂ ಅವರು ಅವನ್ನೆಲ್ಲ ತಿರಸ್ಕರಿಸಿದ್ದರು. ಮಾತ್ರವಲ್ಲ, ಅವರು ಅಮುಸ್ಲಿಮರಾಗಿದ್ದರೂ ಮುಸ್ಲಿಮರೆಂದು ತಮ್ಮನ್ನು ಹೆಸರಿಸುತ್ತಿದ್ದರು. ಇಸ್ಲಾಮಿನ ಮೇಲೆ ಅವರು ನಿಷ್ಠೆ ಇರಿಸಿರಲಿಲ್ಲ. ಇಂತಹವರಿಗೂ

ಕುಫ್ರ್ ಎಂಬ ಶಬ್ದ ಅನ್ವಯವಾಗುತ್ತದೆ. ಉದಾ: ದೇವನ ಸಂದೇಶ ವಾಹಕರಾದ ಪ್ರವಾದಿಯವರು(ಸ) ಹೇಳಿದರು, “ಯಾವ ಮುಸ್ಲಿಮನು ಉದ್ದೇಶಪೂರ್ವಕ ನಮಾಝ್ ತೊರೆದನೋ. ಅವನು ಕುಫ್ರ್ ಮಾಡಿದನು.” (ಹದೀಸ್) ಪವಿತ್ರ ಕುರ್‍ಆನ್ ಹೇಳುತ್ತದೆ, “ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಸತ್ಯನಿಷೇಧಿ(ಕಾಫಿರ್)ಗಳು.” (5:44)

ಇಸ್ಲಾಮ್‍ನ ಅನುಯಾಯಿಯಾಗಿದ್ದು ಅಥವಾ ಹಾಗೆ ವಾದಿಸುತ್ತಿದ್ದು-ಮುಸ್ಲಿಮನೆಂದು ಹೇಳುತ್ತಿದ್ದು ಇಸ್ಲಾಮಿನಲ್ಲಿ ನಿಷ್ಠೆ ಇರಿಸದವರನ್ನು ಈ ಶಿಕ್ಷಣವು ಸಂಭೋದಿಸುತ್ತಿದೆ. ಪವಿತ್ರ ಕುರ್‍ಆನ್ ಇನ್ನೊಂದು ಕಡೆಯಲ್ಲಿ ಹೇಳುತ್ತದೆ, “ಯಾರು ತಾಗೂತ (ಕಾಲ್ಪನಿಕ ದೇವರು)ನ್ನು ಕುಫ್ರ್ (ನಿರಾಕರಣೆ) ಮಾಡಿದನೋ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಟ್ಟನೋ ಅಂತಹವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. (ಅವನು ಆಶ್ರಯ ಪಡೆದ) ಅಲ್ಲಾಹ್ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.” (2:256) ಇಲ್ಲಿ ಪವಿತ್ರ ಕುರ್‍ಆನ್ ಕುಫ್ರ್ ಎಂಬ ಶಬ್ದಕ್ಕೆ ನಿರಾಕರಣೆ ಎಂಬ ಅರ್ಥ ನೀಡಿದೆ ಮತ್ತು ಮುಸ್ಲಿಮರಿಗೆ ತಾಗೂತನ್ನು ನಿರಾಕರಿಸಲು ಸೂಚಿಸಿದೆ.

ಕುಫ್ರ್ ಅರಬಿ ಭಾಷೆಯ ಪದವಾಗಿದೆ. ಇದರ ಅರ್ಥ ಯಾವುದೇ ವಸ್ತುವನ್ನು ಅಡಗಿಸುವುದು, ಮರೆಸುವುದು ಎಂದಾಗಿದೆ. ಇದೇ ರೀತಿ ಕುಫ್ರ್ ಗೆ ಕೃತಘ್ನತೆ, ಅಸಂತೋಷ ಎಂಬ ಅರ್ಥವೂ ಇದೆ. ಅಂದರೆ ಯಾವುದೇ ವ್ಯಕ್ತಿ ಕೃತಘ್ನತೆ ತೋರಿಸುತ್ತಾನೆ, ತನಗೆ ಉಪಕಾರ ಮಾಡಿದವನ ಉಪಕಾರವನ್ನು ಅಡಗಿಸಿಡುತ್ತಾನೆ ಮತ್ತು ಅದರ ಮೇಲೆ ಪರದೆ ಹಾಕುತ್ತಾನೆ ಎಂದಾಗುತ್ತದೆ. ಇದೇ ರೀತಿ ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನು ತನ್ನ ಸಂದೇಶವಾಹಕರನ್ನು ಭೂಮಿಗೆ ಕಳುಹಿಸಿ ತನ್ನ ದಾಸರಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಆದೇಶ ನೀಡಿದ್ದಾನೆ ಮತ್ತು ಈ ಆದೇಶದಲ್ಲಿ ವಿಶ್ವಾಸವಿರಿಸಲು ನಿರಾಕರಿಸುವುದು ಎಂಬುದು ಇನ್ನೊಂದು ಅರ್ಥವಾಗಿದೆ. ಪವಿತ್ರ ಕುರ್‍ಆನ್‍ನಲ್ಲಿ ಬೇರೆ ಅರ್ಥದಲ್ಲಿಯೂ ಈ ಪದ ಬಳಕೆಗೊಂಡಿದೆ ಮತ್ತು ಇಸ್ಲಾಮ್‍ನಲ್ಲಿ ಇದು ಒಂದು ಪಾರಿಭಾಷಿಕ ಶಬ್ದವಾಗಿಯೂ ಪರಿಗಣನೆ ಪಡೆದುಕೊಂಡಿದೆ. ಒಬ್ಬ ರೈತ ಹೊಲದಲ್ಲಿ ಬೀಜವನ್ನು ಬಿತ್ತುತ್ತಾನೆ. ಅರ್ಥಾತ್ ಅದನ್ನು ಹೊರಗೆ ಕಾಣದಂತೆ ಇರಿಸುತ್ತಾನೆ. ಹಾಗಾಗಿ ರೈತನನ್ನು ಕೂಡಾ ಕಾಫಿರ್ (ಬೀಜವನ್ನು ಹೂತಿಡುವವನು) ಎಂದು ಹೇಳಲಾಗುತ್ತಿದೆ. ಕೆಲವು ಕಡೆ ಕೃತಜ್ಞತೆಗೆ ವಿರುದ್ಧ ಪದವಾಗಿ ಕೃತಘ್ನತೆಯ ಅರ್ಥದಲ್ಲಿಯೂ ಈ ಪದ ಬಳಕೆಯಾಗಿದೆ. ಹಾಗಾಗಿ ಸೃಷ್ಟಿಕರ್ತನ ಉಪಕಾರಕ್ಕೆ ಉತ್ತರವಾಗಿ ಕೃತಜ್ಞತೆಯ ಬದಲು ಕೃತಘ್ನತೆಯ ನಿಲುವು ಹೊಂದುವುದು ಕುಫ್ರ್ ಎನಿಸಿ ಕೊಳ್ಳುತ್ತಿದೆ ಮತ್ತು ಹೀಗೆ ಮಾಡುವ ವ್ಯಕ್ತಿಯೇ ಕಾಫಿರ್ ಎಂದು ಕರೆಯಲ್ಪಡುತ್ತಾನೆ. ಪವಿತ್ರ ಕುರ್‍ಆನ್ ಹೇಳುತ್ತದೆ, “ಚೆನ್ನಾಗಿ ತಿಳಿದುಕೊಳ್ಳಿರಿ! ಲೌಕಿಕ ಜೀವನವು ಕೇವಲ ಒಂದು ಆಟ ವಿನೋದ, ತೋರಿಕೆಯ ವೈಭವ, ಪರಸ್ಪರರ ಮೇಲೆ ಹಿರಿಮೆ ಸಾಧಿಸುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನದ ವಿಷಯದಲ್ಲಿ ಪರಸ್ಪರರನ್ನು ವಿೂರಿ ಹೋಗುವ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಇದರ ಉಪಮೆ ಹೀಗಿದೆ: ಒಂದು ಮಳೆ ಬಂದೊಡನೆ ಅದರಿಂದಾಗಿ ಹುಟ್ಟುವ ಸಸ್ಯಗಳನ್ನು ಕಂಡು ಕೃಷಿಕರು ಸಂತೋಷಗೊಂಡು ತರುವಾಯ ಅದೇ ಬೆಳೆಯು ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ಹೊಟ್ಟಾಗಿ ಬಿಡುತ್ತದೆ.” (57:20) ಇಲ್ಲಿ ಪವಿತ್ರ ಕುರ್‍ಆನ್ ಈ ಶಬ್ದವನ್ನು `ಕುಫ್ಫಾರ್’ (ಕಾಫಿರುಗಳು) ಅಂದರೆ ಕೃಷಿಕರು ಎಂಬ ಅರ್ಥದಲ್ಲಿ ಪ್ರಯೋಗಿಸಿದೆ. ಪವಿತ್ರ ಕುರ್‍ಆನ್‍ನಲ್ಲಿ ಅಲ್ಲಾಹನು ಹೇಳುತ್ತಾನೆ, “ನೀನು ನನ್ನನ್ನು ಸ್ಮರಿಸುತ್ತಿರು. ನಾನು ನಿನ್ನನ್ನು ಸ್ಮರಿಸುವೆನು ಮತ್ತು ನನಗೆ ಕೃತಜ್ಞತೆ ತೋರಿಸುತ್ತಾ ಇರು. ನನಗೆ ಕುಫ್ರ್ (ಕೃತಘ್ನತೆ) ತೋರಿಸಬೇಡ”.

ಪವಿತ್ರ ಕುರ್‍ಆನ್ ಈ ವಚನದಲ್ಲಿ ಕುಫ್ರ್ ಎಂಬುದನ್ನು ಕೃತಘ್ನತೆ ಎಂಬ ಅರ್ಥದಲ್ಲಿ ಬಳಸಿದೆ. ಪವಿತ್ರ ಕುರ್‍ಆನ್‍ನಲ್ಲಿ ಎಲ್ಲ ಕಡೆಗಳಲ್ಲಿಯೂ ದೇವನು ಮತ್ತು ಅವನ ಶಿಕ್ಷಣಗಳು ಹಾಗೂ ಆದೇಶಗಳನ್ನು ನಿರಾಕರಿಸುವವರಿಗೆ ಕಾಫಿರ್ ಎಂಬ ಶಬ್ದ ಬಳಕೆಯಾಗಿದೆ. ಅಂದರೆ ಇದರ ಅರ್ಥ ಬೈಗುಳವೋ, ಅನಾದರವೋ, ತಿರಸ್ಕಾರವೋ ಎಂದಲ್ಲ. ಬದಲಾಗಿ ನಿರಾಕರಿಸುತ್ತಿರುವವರ ವಾಸ್ತವವನ್ನು ತಿಳಿಸುವುದಕ್ಕಾಗಿ ಹೀಗೆ ಈ ಪದ ಬಳಕೆಗೊಂಡಿದೆ. ಕಾಫಿರ್ ಶಬ್ದ ಹಿಂದೂ ಶಬ್ದದ ಪರ್ಯಾಯ ಶಬ್ದವಲ್ಲ. ಆದರೆ ಇಂದು ಆ ರೀತಿ ಅಪಪ್ರಚಾರ ನಡೆಸಲಾಗುತ್ತಿರುವುದು ಶುದ್ಧ ತಪ್ಪಾಗಿದೆ. ಸುಮಾರಾಗಿ ಕಾಫಿರ್ ಶಬ್ದದ ಪರ್ಯಾಯ ವಾಚಕ ಶಬ್ದವನ್ನು ನಾಸ್ತಿಕ ಎಂದು ಕರೆಯಬಹುದಾಗಿದೆ.

ಪವಿತ್ರ ಕುರ್‍ಆನ್‍ನಲ್ಲಿ ಬಹುವಂಶ ಕುಫ್ರ್ ಶಬ್ದವನ್ನು ವಿಶ್ವಾಸ (ಈಮಾನ್)ದ ನಿರಾಕರಣೆ ಎಂಬರ್ಥದಲ್ಲಿ ಪ್ರಯೋಗಿಸಲಾಗಿದೆ. ಧರ್ಮದಲ್ಲಿ ಅವಿಶ್ವಾಸ ತಾಳಿದವರ ಬಗ್ಗೆ ಪ್ರತಿಯೊಂದು ಧರ್ಮವೂ ವಿಶೇಷ ಶಬ್ದಾವಳಿಯನ್ನು ಬಳಸುತ್ತಿದೆ. ಉದಾ: ಯಾವುದೇ ವ್ಯಕ್ತಿ ಹಿಂದೂ ಕುಟುಂಬದಲ್ಲಿ ಹುಟ್ಟುತ್ತಾನೆ, ಆದರೆ ಆ ಧರ್ಮದಲ್ಲಿ ವಿಶ್ವಾಸವಿರಿಸುವುದಿಲ್ಲ ಎಂದಾದರೆ ಅಂತಹವನನ್ನು ನಾಸ್ತಿಕ ಎಂದು ಕರೆಯುತ್ತಾರೆ. ಇದೇ ರೀತಿ ಪ್ರತಿಯೊಂದು ಧರ್ಮದಲ್ಲಿ ಆ ಧರ್ಮಗಳ ಮೂಲಭೂತ ವಿಶ್ವಾಸ ಹಾಗೂ ಶಿಕ್ಷಣಗಳಲ್ಲಿ ವಿಶ್ವಾಸವಿರಿಸುವವರು ಮತ್ತು ವಿಶ್ವಾಸವಿರಿಸದವರಿಗೆ ಬೇರೆ ಬೇರೆ ವಿಶೇಷ ಶಬ್ದಗಳನ್ನು ಬಳಸಲಾಗಿದೆ. ಹಿಂದೂ ಧರ್ಮದಲ್ಲಿ ಅಂತಹವರಿಗೆ ನಾಸ್ತಿಕ, ಅನಾರ್ಯ, ಅಸಭ್ಯ, ದಸ್ಯು ಮತ್ತು ಮ್ಲೇಚ್ಛ ಎಂಬ ಶಬ್ದಗಳನ್ನು ಬಳಸಲಾಗುತ್ತಿದೆ. ಅಂದರೆ ಅವರು ಹಿಂದೂ ಧರ್ಮದ ಅನುಯಾಯಿಗಳಲ್ಲ ಎಂದರ್ಥ.

ಕುಫ್ರ್‍ನ ಒಂದು ಅರ್ಥ ಒಳಿತಿನ ಮೇಲೆ ಪರದೆ ಹಾಕುವುದೆಂದಾಗಿದೆ. ಸಕಲ ಅನುಗ್ರಹಗಳನ್ನು ದೇವನು ನೀಡಿದ್ದಾನೆ. ಈ ಸತ್ಯವನ್ನು ಅಡಗಿಸಿಟ್ಟು ಅಥವಾ ಪರದೆ ಹಾಕಿ ಅನುಗ್ರಹಗಳನ್ನು ಇತರರಿಗೆ ಪೋಣಿಸುವುದು ಮತ್ತು ಅಲ್ಲಾಹನನ್ನು ಬಿಟ್ಟು ಇತರರಿಗೆ ಕೃತಜ್ಞನಾಗಿರುವುದು ಕುಫ್ರ್ ನ ವರ್ತನೆಯಾಗಿದೆ.

ಕಾಫಿರ್ ಶಬ್ದ ವಾಸ್ತವದಲ್ಲಿ “ದೈವಿಕ ಸತ್ಯ ಧರ್ಮದಲ್ಲಿ” ವಿಶ್ವಾಸ ವಿರಿಸದಿರುವವರು ಮತ್ತು ವಿಶ್ವಾಸವಿರಿಸುವವರ ಮಧ್ಯೆ ವ್ಯತ್ಯಾಸವನ್ನು ಸ್ಪಷ್ಟಪಡಿಸುವುದಕ್ಕಾಗಿ ಬಳಸಲಾಗಿದೆಯೇ ಹೊರತು ಬೈಗುಳವೋ ಅನಾದರವನ್ನೋ ವ್ಯಕ್ತಪಡಿಸುವುದಕ್ಕಾಗಿರುವುದಲ್ಲ. ಈಗ ಕಾಫಿರ್ ಶಬ್ದದಲ್ಲಿ ತಿರಸ್ಕಾರ ಮತ್ತು ಅಪಮಾನದ ಯಾವುದೇ ಮಜಲುಗಳಿಲ್ಲ ವೆಂದು ಸ್ಪಷ್ಟವಾಯಿತಷ್ಟೇ. ಇಲ್ಲಿ ಸೈದ್ಧಾಂತಿಕವಾದ ಸತ್ಯಧರ್ಮ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳ ನಡುವೆ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಈ ಪದವನ್ನು ಬಳಸಲಾಗಿದೆ. ಯಾಕೆಂದರೆ ಇಸ್ಲಾವಿೂ ಆದೇಶಗಳನ್ನು ಪಾಲಿಸುವವರು ಪಾಲಿಸದಿರುವವರ ಜೊತೆ ಬೇರೆ ಬೇರೆ ರೀತಿ ವ್ಯವ ಹರಿಸಲು ಸಾಧ್ಯವಾಗಬೇಕಾಗಿದೆ ಮತ್ತು ಇಸ್ಲಾವಿೂ ವಿಶ್ವಾಸಿಗಳನ್ನು ಅದರ ನಿಯಮಕ್ಕೆ ಬದ್ಧಗೊಳಿಸಲು ಸಾಧ್ಯವಾಗಬೇಕಾಗಿದೆ. ಆದ್ದರಿಂದ ಇಸ್ಲಾಮ್‍ನ ಮೂಲ ಶಿಕ್ಷಣವು ಅದರಲ್ಲಿ ವಿಶ್ವಾಸವಿರಿಸದಿರುವ ವ್ಯಕ್ತಿ ಯನ್ನು ಕಾಫಿರ್ ಎಂದು ಹೇಳಿ ಅವನ ಸ್ಥಿತಿಯನ್ನು ಸ್ಪಷ್ಟಪಡಿಸಿದೆ. ಆದರೆ ಇಸ್ಲಾವಿೂ ರಾಷ್ಟ್ರ ಹಾಗೂ ಸಮಾಜದಲ್ಲಿ ಅವನ ಮೂಲಭೂತ ಹಕ್ಕುಗಳಿಗೆ ಯಾವುದೇ ಬಾಧೆಯಿಲ್ಲ ಮತ್ತು ಲೌಕಿಕ ವಿಚಾರಗಳಲ್ಲಿ ಅವನೊಂದಿಗೆ ಯಾವುದೇ ಭೇದಭಾವ ತೋರಿಸುವುದಿಲ್ಲ. ಅಲ್ಲಾಹನು ಮಾನವನನ್ನು ಎಲ್ಲಕ್ಕಿಂತಲೂ ಸುಂದರವಾದ ರೂಪ, ಬಣ್ಣಗಳಿಂದ ಸೃಷ್ಟಿಸಿದ್ದಾನೆ. ಅವನಿಗೆ ಜೀವಿಸುವುದಕ್ಕಾಗಿ ಪ್ರತಿಯೊಂದೂ ಸವಲತ್ತು ಗಳನ್ನು ನೀಡಿದ್ದಾನೆ ಮತ್ತು ಸಕಲ ಆವಶ್ಯಕತೆಗಳನ್ನು ಈಡೇರಿಸುತ್ತಾನೆ. ಈ ಎಲ್ಲ ಅನುಗ್ರಹಗಳ ಬೇಡಿಕೆಯೇ ಜನರು ಅಲ್ಲಾಹನಲ್ಲಿ ವಿಶ್ವಾಸವಿರಿಸಬೇಕು ಎಂದಾಗಿದೆ. ಯಾಕೆಂದರೆ ಅವನೇ ಜನರಿಗೆ ಅನುಗ್ರಹದಾತನಾಗಿದ್ದಾನೆ. ಇದೇ ರೀತಿ ಅಲ್ಲಾಹನ ಸಕಲ ಪ್ರವಾದಿಗಳ ಮೇಲೂ ವಿಶೇಷತಃ ಅಂತಿಮ ಪ್ರವಾದಿ ಮುಹಮ್ಮದ್‍ರವರ(ಸ) ಮೇಲೆಯೂ ವಿಶ್ವಾಸವಿರಿಸಬೇಕು ಮತ್ತು ಸತ್ತ ನಂತರ ಪರಲೋಕ ಎಂಬ ಶಾಶ್ವತ ಲೋಕದಲ್ಲಿ ಶಾಶ್ವತವಾಗಿ ಬದುಕಬೇಕಾಗಿದೆ ಮತ್ತು ಅಲ್ಲಿ ಪ್ರತಿಯೊಬ್ಬ ಮನುಷ್ಯನ ಉತ್ತಮ-ಕೆಟ್ಟ ಕರ್ಮಗಳ ಕುರಿತು ಪ್ರಶ್ನಿಸಲಾಗುವುದು ಎಂಬ ಬಗ್ಗೆ ವಿಶ್ವಾಸವಿರಿಸಬೇಕಾಗಿದೆ. ಪರಿಶುದ್ಧವಾದ ರೀತಿಯಲ್ಲಿ ಅಲ್ಲಾಹನ ದಾಸ್ಯಾರಾಧನೆ ಮಾಡಬೇಕು ಮತ್ತು ಅವನ ಆದೇಶವನ್ನು ಪಾಲಿಸಬೇಕು. ಯಾರು ಅಲ್ಲಾಹನ ಅನುಗ್ರಹಗಳಿಂದ ಲಾಭ ಪಡೆದೂ ಅವನಲ್ಲಿ ವಿಶ್ವಾಸವಿರಿಸುವುದಿಲ್ಲವೋ ಅಥವಾ ಅವನ ದೇವತ್ವದೊಂದಿಗೆ ಇತರರನ್ನು ಭಾಗೀದಾರಗೊಳಿಸುತ್ತಾರೋ ಅಂತಹವರೇ ಕೃತಘ್ನರು ಮತ್ತು ಕುಫ್ರ್ (ನಿರಾಕರಣೆ) ನೀತಿ ಅನುಸರಿಸುವವರಾಗಿದ್ದಾರೆ. ಅಲ್ಲಾಹನ ಆದೇಶಗಳನ್ನು ತಿಳಿಯಬೇಕಾದರೆ ಅಲ್ಲಾಹನು ತನ್ನ ಅಂತಿಮ ಪ್ರವಾದಿ ಮುಹಮ್ಮದ್‍ರಿಗೆ(ಸ) ಅವತೀರ್ಣಗೊಳಿಸಿರುವ ಪವಿತ್ರ ಕುರ್‍ಆನನ್ನು ಅಧ್ಯಯನ ನಡೆಸಬೇಕಾಗಿದೆ. ಪವಿತ್ರ ಕುರ್‍ಆನ್ ಶಿಕ್ಷಣಗಳ ವ್ಯಾವಹಾರಿಕ ರೂಪಕ್ಕೆ ಉದಾಹರಣೆಯು ಪ್ರವಾದಿ ಮುಹಮ್ಮದ್ ರವರ(ಸ) ಜೀವನದಲ್ಲಿ ಸಿಗುತ್ತದೆ. ಪವಿತ್ರ ಕುರ್‍ಆನ್ ಹಾಗೂ ಪ್ರವಾದಿ ಚರ್ಯೆಗಳೆರಡು ಇಂದಿಗೂ ಸುರಕ್ಷಿತ ರೂಪದಲ್ಲಿದೆ. ಇದುವೇ ಅದರ ಸತ್ಯವಂತಿಕೆಗೆ ಪ್ರಮಾಣವಾಗಿದೆ.

One thought on “ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ ?

Add Comment