ಅಲ್ಲಾಹು ಅಕ್ಬರ್… ಏನಿದು ಕರೆ?

ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ಅಥವಾ ‘ಬಾಂಗ್’ನಮಾಝ್‌ನ ಕರೆಯಾಗಿದೆ. ಅನೇಕ ದೇಶಬಾಂಧವರು ಈ ಅದಾನ್ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. ಅದಾನ್ ಕರೆಯನ್ನು ಮಸೀದಿಗಳಿಂದ ಸಾಮಾನ್ಯವಾಗಿ ಧ್ವನಿವರ್ಧಕಗಳಲ್ಲಿ ಕೊಡಲಾಗುತ್ತದೆ. ಕೆಲವರು ಪ್ರಾರ್ಥನೆಯನ್ನು ಇಷ್ಟು ಗಟ್ಟಿಯಾಗಿ ಯಾಕೆ ಹೇಳಬೇಕು, ದೇವರಿಗೆ ಕಿವಿ ಕೇಳಿಸುವುದಿಲ್ಲವೇ? ಎಂದು ಕೇಳುವುದುಂಟು. ನಿಜವಾಗಿ ಅದಾನ್ ಪ್ರಾರ್ಥನೆಯಲ್ಲ. ಅದು ‘ಪ್ರಾರ್ಥನೆಗೆ ಸಮಯವಾಯಿತು, ಮಸೀದಿಗೆ ಬನ್ನಿ’ಎಂದು ಜನರಿಗೆ ನೀಡುವ ಕರೆ. ಊರಿನ ಅಥವಾ ಪರಿಸರದ ಎಲ್ಲ ಜನರು ಕೇಳುವಂತಾಗಲು ಅದನ್ನು ಧ್ವನಿವರ್ಧಕದಲ್ಲಿ ನೀಡಲಾಗುತ್ತದೆ. ಅದಾನ್‍ನಲ್ಲಿ ಹೇಳಲಾಗುವ ವಚನಗಳ ಅರ್ಥ ತಿಳಿದರೆ ಈ ಬಗ್ಗೆ ಇರುವ ಹಲವು ಗೊಂದಲಗಳು £ವಾರಣೆಯಾಗುತ್ತದೆ.

ಅಲ್ಲಾಹು ಅಕ್ಬರ್

ಅಲ್ಲಾಹನೇ ಅತ್ಯಂತ ಮಹಾನನು

(ಇದನ್ನು ನಾಲ್ಕು ಬಾರಿ ಹೇಳಲಾಗುತ್ತದೆ.)

ಅಶ್‍ಹದು ಅಲ್ಲಾ ಇಲಾಹ ಇಲ್ಲಲ್ಲಾಹ್

ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರು ಯಾರೂ ಇಲ್ಲವೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)

ಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್

ಪ್ರವಾದಿ ಮುಹಮ್ಮದ್(ಸ) ಅವರು ಅಲ್ಲಾಹನ ಸಂದೇಶವಾಹಕರಾಗಿರುವರೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)

ಹಯ್ಯ ಅಲಸ್ಸಲಾಃ

ಬನ್ನಿ ನಮಾಝ್‌ನ ಕಡೆಗೆ

(ಎರಡು ಸಲ)

ಹಯ್ಯ ಅಲಲ್ ಫಲಾಹ್

ಬನ್ನಿ ವಿಜಯದ ಕಡೆಗೆ

(ಎರಡು ಸಲ)

ಅಲ್ಲಾಹು ಅಕ್ಬರ್

ಅಲ್ಲಾಹನೇ ಅತ್ಯಂತ ಮಹಾನನು

(ಎರಡು ಸಲ)

ಲಾ ಇಲಾಹ ಇಲ್ಲಲ್ಲಾಹ್

ಅಲ್ಲಾಹನಲ್ಲದೆ ಮತ್ತಾರೂ ಆರಾಧನೆಗೆ ಅರ್ಹರಿಲ್ಲ.

ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಸುಮಾರು 80ನಿಮಿಷ ಮುಂಚೆ ದಿನದ ಪ್ರಥಮ ನಮಾಝ್‌ಗೆ ಕರೆ ನೀಡುವಾಗ 2 ಸಲ ಈ ಕೆಳಗಿನ ನುಡಿಯನ್ನು ಸೇರಿಸಿ ಹೇಳಲಾಗುತ್ತದೆ.

ಅಸ್ಸಲಾತು ಖೈರುಂಮಿನನ್ನೌಮ್

ನಮಾಝ್ ನಿದ್ದೆಗಿಂತ ಉತ್ತಮವಾದುದು.

(ಎರಡು ಸಲ)

ಅದಾನ್‍ನ ಈ ನುಡಿಗಳಿಂದ ತಿಳಿಯುವುದೇನೆಂದರೆ ಅವು ಕೇವಲ ಒಂದು ಪ್ರಾರ್ಥನೆಯ ಕರೆಯಾಗಿರದೆ ಇಸ್ಲಾಮಿನ ಮೂಲ ತತ್ವಗಳ ಸುಂದರ ಪ್ರತಿಪಾದನೆಯೂ ಆಗಿದೆ. ವಿಶ್ವದ ಸೃಷ್ಟಿಕರ್ತನೂ ಒಡೆಯನೂ ಪರಿಪಾಲಕನೂ ಅಧಿಪತಿಯೂ ಆದ ಅಲ್ಲಾಹನ ಮಹಿಮೆಯನ್ನು ಇದರಲ್ಲಿ ಕೊಂಡಾಡಲಾಗಿದೆ. ಇದು ಯಾವುದೇ ಜನಾಂಗದ ಅಥವಾ ಕೋಮಿನ ಮಹಿಮೆಯ ಘೋಷಣೆಯಲ್ಲ. ಇಡೀ ಮಾನವಕುಲದ ಸೃಷ್ಟಿಕರ್ತ ಪ್ರಭುವಿನ ಮಹಾನತೆಯ ಪ್ರಕೀರ್ತನೆಯಾಗಿದೆ.

‘ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ’ಎಂಬ ವಚನವು ಇಸ್ಲಾಮ್ ಧರ್ಮದ ಮೂಲ ಮಂತ್ರವಾಗಿದೆ. ಮಾನವಕುಲದ ಆರಂಭದಿಂದಲೇ ಈ ಜಗತ್ತಿಗೆ ಬಂದ ಪ್ರವಾದಿಗಳೂ ಈ ಮೂಲ ಮಂತ್ರವನ್ನೇ ಪ್ರತಿಪಾದಿಸಿದ್ದರು. ಅದರ ಕಡೆಗೇ ಅವರು ತಂತಮ್ಮ ಜನತೆಯನ್ನು ಆಹ್ವಾ£ಸಿದ್ದರು. ಹಝ್ರತ್ ಮುಹಮ್ಮದ್(ಸ) ಆ ಪೈಕಿ ಕೊನೆಯವರಾಗಿದ್ದಾರೆ. ಆದ್ದರಿಂದ ಅವರ ಪ್ರವಾದಿತ್ವದ ಸಾಕ್ಷ್ಯವನ್ನೂ ಈ ಕರೆಯಲ್ಲಿ ಅಳವಡಿಸಲಾಗಿದೆ.

ಅನಂತರ ಈ ಮೂಲಮಂತ್ರದ ಮೇಲೆ ನಂಬಿಕೆಯಿರುವವರನ್ನು ಅಲ್ಲಾಹನ ಆರಾಧನೆಯಾದ ನಮಾಝ್‌ಗಾಗಿ ಕರೆದು ಅವರ ನೈಜ ಯಶಸ್ಸು ಮತ್ತು ವಿಜಯವು ಅದರಲ್ಲೇ ಅಡಕವಾಗಿದೆಯೆಂದು ಸಾರಲಾಗಿದೆ.

ಕೊನೆಗೆ ಪುನಃ ಅಲ್ಲಾಹನ ಮಹಾನತೆಯನ್ನು ಕೊಂಡಾಡಿ ಅವನ ಹೊರತು ಅನ್ಯರಾರೂ ಆರಾಧನೆಗೆ ಅರ್ಹರಲ್ಲವೆಂಬ ಪರಮ ಸತ್ಯವನ್ನು ಇನ್ನೊಮ್ಮೆ ಘೋಷಿಸಲಾಗಿದೆ.

ಈ ಅದಾನ್ ಕರೆಯ ಮಹತ್ವ ಮತ್ತು ಅರ್ಥವನ್ನು ಅರಿತ ಯಾವ ವ್ಯಕ್ತಿಯೂ ಇದನ್ನು ಆಕ್ಷೇಪಿಸಲಾರ. ಅದನ್ನು ಗೇಲಿ ಮಾಡಲಾರ.

Add Comment