‘ಅಲ್ಲಾಹ್ ‘ಮುಸ್ಲಿಮರ ದೇವರೇ?

ನಿಜವಾಗಿ ‘ಅಲ್ಲಾಹ್ ‘  ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀ ಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಎಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ‘ ಅಲ್ಲಾಹ್ ‘ ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ.

” ಸರ್ವಸ್ತುತಿಯು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.”(1 . 1 )

ಪವಿತ್ರ ಕುರ್ಆನಿನ  ಕೊನೆಯ ಅಧ್ಯಾಯದಲ್ಲಿ ಅಲ್ಲಾಹನ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ;

“ಹೇಳಿರಿ – ನಾನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ, ಮತ್ತು ಮನುಷ್ಯರ ಆರಾಧ್ಯನ ಅಭಯ ಯಾಚಿಸುತ್ತೇನೆ.” (114 : 1 – 3 )

ಪವಿತ್ರ ಕುರ್ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್ ರ (ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ- ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಅದು ಘಂಟಾಘೋಷವಾಗಿ ಸಾರುತ್ತದೆ

Add Comment